ಬಾನಲ್ಲಿ ಚಿತ್ತಾರ ಮೂಡಿಸಿದ ಬಗೆ ಬಗೆಯ ಗಾಳಿಪಟ
ಮೈಸೂರು

ಬಾನಲ್ಲಿ ಚಿತ್ತಾರ ಮೂಡಿಸಿದ ಬಗೆ ಬಗೆಯ ಗಾಳಿಪಟ

September 30, 2018

ಮೈಸೂರು: ಒಂದೆಡೆ ಬಾನಿಂದ ಸೂರ್ಯ ತೆರೆಮರೆಗೆ ಸರಿಯಲು ಅಣಿಯಾಗುತ್ತಿದ್ದಂತೆ ಆಗಸ ದಲ್ಲಿ ಅಸ್ಥಿಪಂಜರ, ಚಾರ್ಲಿಚಾಪ್ಲಿನ್, ಯಕ್ಷಗಾನ, ವೆಲ್ ಕಂ ಟು ಮೈಸೂರು ದಸರಾ, ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿ ಚಿತ್ರಣ ಹೀಗೆ ವಿವಿಧ ಆಕೃತಿಯ ಗಾಳಿಪಟಗಳು ಹಾರಾಟ ನಡೆಸಿದರೆ, ಮತ್ತೊಂದೆಡೆ ಕಾರ್ಮೋಡ ಕವಿದಾಗ ವಿವಿಧ ಚಿತ್ತಾರದ ಎಲ್‍ಇಡಿ ಗಾಳಿಪಟಗಳು ಬಾನಿನಲ್ಲಿ ಹಾರಾಟ ನಡೆಸಿ ಬಣ್ಣ-ಬಣ್ಣದ ಚಿತ್ತಾರ ಬಿಡಿಸುವ ಮೂಲಕ ನೆರೆದ ಭಾರೀ ಪ್ರೇಕ್ಷಕರನ್ನು ಆಕರ್ಷಿಸಿದವು.

ಲಲಿತಮಹಲ್ ಹೆಲಿಪ್ಯಾಡ್‍ನಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಿರುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಆರಂಭಿಕ ಹಂತವಾಗಿ `ಗಾಳಿಪಟ’ ಉತ್ಸವದಲ್ಲಿ ಕತ್ತಲಲ್ಲಿ ಆಕಾಶದ ಎತ್ತರದಲ್ಲಿ ಹಾರಾಟ ನಡೆಸಿದ ಎಲ್‍ಇಡಿ ಕೈಟ್‍ಗಳು ನೋಡುಗರನ್ನು ತಮ್ಮತ್ತ ಸೆಳೆದವು.

25 ತಂಡಗಳು ಭಾಗಿ: ಗಾಳಿಪಟ ಸ್ಪರ್ಧೆಯಲ್ಲಿ ಸೂರತ್, ರಾಜ್‍ಕೋಟ್, ಮುಂಬೈ, ಹೈದರಾಬಾದ್, ಬೆಂಗಳೂರು, ಮಂಗಳೂರು ಸೇರಿದಂತೆ ಮತ್ತಿತರೆ ಕಡೆಗಳಿಂದ ಸುಮಾರು 25 ತಂಡಗಳಿಂದ 30ಕ್ಕೂ ಹೆಚ್ಚು ವೃತ್ತಿ ನಿರತ ಕೈಟ್ ಪ್ಲೈಯರ್ಸ್(ಗಾಳಿಪಟ ಹಾರಿ ಸುವವರು)ಗಳು ಭಾಗವಹಿಸಿದ್ದು, 150ಕ್ಕೂ ಹೆಚ್ಚು ಗಾಳಿಪಟಗಳನ್ನು ತಂದಿದ್ದರು. ಆದರೆ, 4-5 ಗಂಟೆವರೆಗೆ ವೃತ್ತಿನಿರತ ಕೈಟ್ಸ್ ಪ್ಲೈಯರ್ಸ್‍ಗಳು ಚಾರ್ಲಿಚಾಪ್ಲಿನ್, ಅಸ್ಥಿಪಂಜರ, ಯಕ್ಷಗಾನ, ಮೀನು, ರಿಂಗ್, ಹದ್ದು, ಸ್ಪೈಡರ್‍ಮನ್, ಗರುಡ, ನಕ್ಷತ್ರ ಪಟಗಳು, ಏರೋಪ್ಲೇನ್, ಕಥಕ್ಕಳಿ, ಇಂಡಿಯಾ ಪ್ಲಾಗ್, ವೆಲ್ ಕಂ ಟು ಮೈಸೂರು ದಸರಾ, ಶ್ರೀ ಚಾಮುಂಡೇಶ್ವರಿ ಅಮ್ಮನವರ ಚಿತ್ರಣ, ಹದ್ದು, ಬಾವಲಿ ಸೇರಿದಂತೆ ಹತ್ತಾರು ಬಗೆಯ ಗಾಳಿಪಟಗಳು ಹಾರಾಟ ನಡೆಸಿದವು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಗಾಳಿ ಬೀಸದೆ ಇದ್ದುದರಿಂದ ಕೆಲವೇ ನಿಮಿಷ ದಲ್ಲಿ ಭೂಮಿ ಕಡೆಗೆ ಮುಖ ಮಾಡಿದವು. ನಂತರ ಪ್ಲೈಯರ್ಸ್‍ಗಳು ಗಾಳಿಪಟಗಳನ್ನು ಹಾರಾಟ ನಡೆಸಲು ಎಷ್ಟೇ ಪ್ರಯತ್ನಿಸಿ ದರೂ ಮೇಲಕ್ಕೆ ಹಾರಲಿಲ್ಲ.

ಎಲ್‍ಇಡಿ ಕೈಟ್‍ಗಳ ಚಿತ್ತಾರ: ಸೂರ್ಯ ತೆರೆಮರೆಗೆ ಸರಿದು

ಕಾರ್ಮೋಡ ಕವಿದಾಗ ಸೈಕಲ್ ತುಳಿಯುತ್ತಿರುವಂತೆ ಗೋಚರಿಸುವ ಮತ್ತು ವಿವಿಧ ಚಿತ್ತಾರದ ಎಲ್‍ಇಡಿ ಗಾಳಿಪಟಗಳು ಹಾರಾಟ ನಡೆಸಿ ಆಗಸದಲ್ಲಿ ಚಿತ್ತಾರ ಮೂಡಿಸಿದವು. ಆದರೆ, ಹಾರಾಟ ನಡೆಸಿದ 20 ನಿಮಿಷದಲ್ಲೇ ವರುಣನ ಸಿಂಚನವಾದ್ದರಿಂದ ಎಲ್‍ಇಡಿ ಲೈಟ್‍ವುಳ್ಳ ಗಾಳಿಪಟಗಳನ್ನು ಕೆಳಗೆ ಇಳಿಸಲಾಯಿತು. ಇದಕ್ಕೂ ಮುನ್ನ ಎಲ್‍ಇಡಿ ಗಾಳಿಪಟಗಳು ಆಗಸದಲ್ಲಿ ಬೆಳಕಿನ ಚಿತ್ತಾರ ಮೂಡಿಸಿದಂತೆ ಪ್ರವಾಸಿಗರು, ಸಾರ್ವಜನಿಕರು ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಬೃಹದಾಕಾರದ ಗಾಳಿಪಟಗಳು ಆಗಸದೆತ್ತರಕ್ಕೆ ಹಾರುತ್ತಿದ್ದಂತೆ, ನೆರೆದಿದ್ದ ಮಕ್ಕಳು, ಪೋಷಕರು, ವೃದ್ಧರು, ಪ್ರವಾಸಿಗರು ಶಿಳ್ಳೆ ಹೊಡೆದು ಕುಣಿದು, ಕುಪ್ಪಳಿಸಿ ಎಂಜಾಯ್ ಮಾಡಿದರು. ಟೀಮ್ ಮಂಗಳೂರು ನೇತೃತ್ವದಲ್ಲಿ ಆರಂಭಗೊಂಡ ಗಾಳಿಪಟ ಉತ್ಸವದಲ್ಲಿ ಮುಂಬಯಿ 4, ಅಹಮದಾಬಾದ್ 6, ಸೂರತ್ 5, ಹೈದರಾಬಾದ್ 3 ಮತ್ತು ಮಂಗಳೂರಿನ 10ಕ್ಕೂ ಹೆಚ್ಚು ವೃತ್ತಿನಿರತ ಕೈಟ್ ಪ್ಲೈಯರ್‍ಗಳು ಭಾಗವಹಿಸಿದ್ದರು.

ಸೆಲ್ಫಿ ಗೀಳು: ಯುವಕ-ಯುವತಿಯರು, ಮಕ್ಕಳು ತಮಗಿಷ್ಟವಾದ ಗಾಳಿಪಟಗಳ ಬಳಿ ನಿಂತು ಮೊಬೈಲ್‍ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಭರ್ಜರಿ ಐಸ್‍ಕ್ರೀಮ್, ಸೌತೆಕಾಯಿ ವ್ಯಾಪಾರ: ಗಾಳಿಪಟ ಉತ್ಸವ ವೀಕ್ಷಿಸಲು ಆಗಮಿಸಿದ್ದ ಸಾರ್ವಜನಿಕರು, ಮಕ್ಕಳು, ಯುವಕ-ಯುವತಿಯರು ಮಧ್ಯಾಹ್ನ 3ರ ವೇಳೆಗೆ ಬಿಸಿಲಿನ ಝಳ ತಾಳಲಾರದೆ ಐಸ್‍ಕ್ರೀಮ್, ಸೌತೆಕಾಯಿ ಮೊರೆ ಹೋದರು.

ಇದಕ್ಕೂ ಮುನ್ನ 2 ದಿನಗಳ ಕಾಲ ಆಯೋಜಿಸಿರುವ ಗಾಳಿಪಟ ಸ್ಪರ್ಧೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಚಾಲನೆ ನೀಡಿದರು. ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್, ಶಾಸಕರಾದ ತನ್ವೀರ್‍ಸೇಠ್, ಎಲ್.ನಾಗೇಂದ್ರ, ಅಶ್ವಿನ್‍ಕುಮಾರ್, ಹರ್ಷವರ್ಧನ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Translate »