ಇಂದಿನಿಂದ ಎರಡು ದಿನ  ಸಾವಯವ ಮಾವು ಮೇಳ
ಮೈಸೂರು

ಇಂದಿನಿಂದ ಎರಡು ದಿನ  ಸಾವಯವ ಮಾವು ಮೇಳ

June 18, 2018

ಮೈಸೂರು: ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಕೃಷಿ ಮಾರಾಟ ಅಧ್ಯಯನ ಸಂಸ್ಥೆ ಸಭಾಂಗಣದಲ್ಲಿ ಜೂ.18ರಿಂದ ಎರಡು ದಿನಗಳ `ಸಾವಯವ ಮಾವು ಮೇಳ ಮತ್ತು ಸಾವಯವ ಕೃಷಿ ತರಬೇತಿ ಕಾರ್ಯಾಗಾರ’ ನಡೆಯಲಿದೆ. ಮೈಸೂರು ಆಕಾಶವಾಣಿ , ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ, ಕೃಷಿ ಮಾರಾಟ ಅಧ್ಯಯನ ಸಂಸ್ಥೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಪ್ರಾಂತೀಯ ಸಹಕಾರ ಸಾವಯವ ಒಕ್ಕೂಟಗಳ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ.

ಬೆಳಿಗ್ಗೆ 10.30ರಿಂದ ಸಂಜೆ 5.30ರವರೆಗೆ ನಡೆಯುವ ಸಾವಯವ ಮಾವು ಮೇಳದಲ್ಲಿ ತೋತಪುರಿ, ರಾಜಗೀರಾ, ನೀಲಂ, ಬೈಗಾನ್‍ಪಲ್ಲಿ, ಆಲ್ಫಾನ್ಸೋ(ಬಾದಾಮಿ), ರಸಪೂರಿ, ಚಕ್ರಗೂಟ್ಲ, ಲಡ್ಡು, ಕಾಪಾ ಪಹಾಡ್, ಮಲ್ಲಿಕಾ, ಮಲಗೋವಾ ಇನ್ನಿತರ ಸಂಪೂರ್ಣ ಸಾವಯವ ಬೇಸಾಯದಲ್ಲಿ ಬೆಳೆದು ಸಾವಯವ ವಿಧಾನದಲ್ಲೇ ಹಣ್ಣು ಮಾಡಲಾಗಿರುವ ಮಾವಿನ ಹಣ್ಣುಗಳು ಯೋಗ್ಯ ಬೆಲೆಗೆ ಗ್ರಾಹಕರಿಗೆ ಲಭ್ಯವಿದೆ. ಜೊತೆಗೆ ಮೈಸೂರು, ಮಂಡ್ಯ, ಚಾಮರಾಜನಗರ ಪ್ರಾಂತೀಯ ಒಕ್ಕೂಟದ ಸಾವಯವ ಪ್ರಮಾಣೀಕೃತ ಸಿರಿಧಾನ್ಯಗಳು, ಸಾವಯವ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನ ಏರ್ಪಡಿಸಲಾಗಿದೆ.

ಜೂ.18ರಂದು ಬೆಳಿಗ್ಗೆ 10.30 ಗಂಟೆಗೆ ಯಲಚನಹಳ್ಳಿ ತೋಟಗಾರಿಕಾ ಮಹಾ ವಿದ್ಯಾಲಯದ ಡೀನ್ ಡಾ.ಜಿ.ಜನಾರ್ಧನ್ ಮಾವು ಮೇಳ ಮತ್ತು ಕಾರ್ಯಾಗಾರಕ್ಕೆ ಚಾಲನೆ ನೀಡಲಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ ಪ್ರಾಂತೀಯ ಸಹಕಾರ ಸಾವಯವ ಒಕ್ಕೂಟದ ಅಧ್ಯಕ್ಷ ಕೆ.ವಿ.ರೆಡ್ಡಪ್ಪ ಅಧ್ಯಕ್ಷತೆ ವಹಿಸುವರು. ಆಕಾಶವಾಣಿ ಸಹಾಯಕ ನಿರ್ದೇಶಕ ಹೆಚ್.ಶ್ರೀನಿವಾಸ್, ಮೈಸೂರು ಕೃಷಿ ಮಾರಾಟ ಅಧ್ಯಯನ ಸಂಸ್ಥೆಯ ಪ್ರಾಚಾರ್ಯರಾದ ಡಾ.ರತ್ನಮ್ಮ, ಕೃಷಿ ಮಾರಾಟ ಇಲಾಖೆ ಉಪನಿರ್ದೇಶಕ ಎಂ.ನಂಜುಂಡಸ್ವಾಮಿ ಭಾಗವಹಿಸಲಿದ್ದಾರೆ.

Translate »