ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವ ಹಾವಳಿಗೆ ಕಡಿವಾಣ ಹಾಕದ ಅಧಿಕಾರಿ ವರ್ಗ
ಮೈಸೂರು

ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವ ಹಾವಳಿಗೆ ಕಡಿವಾಣ ಹಾಕದ ಅಧಿಕಾರಿ ವರ್ಗ

June 18, 2018

ಮೈಸೂರು:  ಮೈಸೂರಿನ ರಿಂಗ್‍ರಸ್ತೆ ಬದಿಯಲ್ಲಿ ಕಟ್ಟಡ ತ್ಯಾಜ್ಯದ ರಾಶಿ ಹೆಚ್ಚುತ್ತಿದ್ದರೂ ನಗರ ಪಾಲಿಕೆ ನಿರ್ಲಕ್ಷ್ಯ ವಹಿಸಿರುವ ಪರಿಣಾಮ ನಗರದ ಪ್ರಮುಖ ರಸ್ತೆಗಳೂ ಇದಕ್ಕೆ ಗುರಿಯಾಗುತ್ತಿವೆ.

ಕೆಆರ್‍ಎಸ್ ರಸ್ತೆಯಲ್ಲಿ ಇಎಸ್‍ಐ ಆಸ್ಪತ್ರೆ ಹಾಗೂ ಶಿವಮ್ಮ ಮಹದೇವಪ್ಪ ಕಲ್ಯಾಣ ಮಂಟಪದ ನಡುವೆ ರಸ್ತೆ ಬದಿಯಲ್ಲಿ ಕಟ್ಟಡ ತ್ಯಾಜ್ಯವನ್ನು ಸುರಿಯಲಾಗಿದೆ. ಈ ರಸ್ತೆಯಲ್ಲಿ ಸದಾ ವಾಹನ ಸಂಚಾರವಿರುವ ಕಾರಣ ಯಾರೋ ಕಿಡಿಗೇಡಿಗಳು ರಾತ್ರಿ ವೇಳೆ ಕಟ್ಟಡ ತ್ಯಾಜ್ಯವನ್ನು ವಾಹನಗಳಲ್ಲಿ ತಂದು ಸುರಿದು ಹೋಗಿದ್ದಾರೆ.

ಕೆಆರ್‍ಎಸ್‍ನಿಂದ ಮೈಸೂರಿಗೆ ಬರುವ ಪ್ರವಾಸಿಗರಿಗೆ ಸ್ವಚ್ಛ ನಗರದ ದುಸ್ಥಿತಿ ದರ್ಶನವಾಗುತ್ತಿದೆ. ಅಲ್ಲದೆ ದ್ವಿಚಕ್ರ ವಾಹನಗಳ ಅಪಘಾತಕ್ಕೂ ಎಡೆಮಾಡಿಕೊಟ್ಟಂತಿದೆ. ಹೀಗೆಯೇ ವಿಜಯನಗರ ಸೇರಿದಂತೆ ಅನೇಕ ಬಡಾವಣೆಗಳ ರಸ್ತೆ ಬದಿಯಲ್ಲಿ ಕಟ್ಟಡ ತ್ಯಾಜ್ಯ ವ್ಯಾಪಕವಾಗಿ ಹರಡುತ್ತಿದೆ. ಮೈಸೂರಿನ ರಿಂಗ್ ರಸ್ತೆಯ ಎರಡೂ ಬದಿಗಳಲ್ಲಿ ಕಟ್ಟಡ ತ್ಯಾಜ್ಯ ಸುರಿಯುವ ಖಯ್ಯಾಲಿ ಆರಂಭದಿಂದಲೂ ಇದೆ. ತ್ಯಾಜ್ಯದ ಮಟ್ಟ ದಿನೇ ದಿನೆ ಹೆಚ್ಚುತ್ತಿದ್ದರೂ ನಗರ ಪಾಲಿಕೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಮೈಸೂರು ಸ್ವಚ್ಛ ನಗರ ಎಂದು ಬೀಗುವುದನ್ನು ಬಿಟ್ಟು ಅದನ್ನು ಸಾಕಾರಗೊಳಿಸುವತ್ತ ಚಿತ್ತ ಹರಿಸಿಲ್ಲ.

ಕಟ್ಟಡ ತ್ಯಾಜ್ಯ ನಗರದ ಸೌಂದರ್ಯಕ್ಕೆ ಧಕ್ಕೆಯಾಗುವುದಲ್ಲದೆ, ಹೀಗೆಯೇ ಮುಂದುವರಿದರೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಬಹುದು. ಕೆಲ ವರ್ಷಗಳ ಹಿಂದೆ ಕಟ್ಟಡ ತ್ಯಾಜ್ಯವನ್ನು ಸೂಚಿತ ಹೊರವಲಯದಲ್ಲಿ ಸುರಿಯಬೇಕು. ಎಲ್ಲೆಂದರಲ್ಲಿ ಸುರಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದ ಪಾಲಿಕೆ ಅದನ್ನು ಈವರೆಗೂ ಪಾಲಿಸಿಲ್ಲ.

ಆದ್ದರಿಂದ ನಗರದ ಪ್ರಮುಖ ರಸ್ತೆಗಳ ಬದಿಗೇ ನಿರಾತಂಕವಾಗಿ ಕಟ್ಟಡ ತ್ಯಾಜ್ಯವನ್ನು ಸುರಿದು ಹೋಗುತ್ತಿದ್ದಾರೆ. ಹೀಗೆ ಮಾಡಿದರೆ ಕಟ್ಟಡ ಹಾಗೂ ವಾಹನ ಮಾಲೀಕನಿಗೆ ದಂಡ ವಿಧಿಸುವುದಷ್ಟೇ ಅಲ್ಲದೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವ ಅವಕಾಶವಿದ್ದರೂ ನಗರ ಪಾಲಿಕೆ ಮಾತ್ರ ಕೈಕಟ್ಟಿ ಕುಳಿತಿದೆ. ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯ ಸುರಿಯುವವರಿಗೆ ಕಡಿವಾಣ ಹಾಕದಿದ್ದರೆ, ಗಂಭೀರ ಸಮಸ್ಯೆ ಸೃಷ್ಟಿಗೆ ಅನುವು ಮಾಡಿದಂತಾಗುತ್ತದೆ.

ಇನ್ನೂ ಕೆಲವು ಬಡಾವಣೆಗಳಲ್ಲಿ ಕೋಳಿ ಮಾಂಸ ಮಾರಾಟ ಮಳಿಗೆಗಳ ತ್ಯಾಜ್ಯವನ್ನು ಕಂಡ ಕಂಡಲ್ಲಿ ಸುರಿಯಲಾಗುತ್ತಿದೆ. ಈ ದುರ್ವಾಸನೆ ಸಹಿಸಲಾಗದೇ ಸಾರ್ವಜನಿಕರು ಮೂಗುಮುಚ್ಚಿ ಓಡಾಡುವಂತಾಗಿದೆ.

Translate »