ಆದ್ಯ ಪತ್ರಕರ್ತ ದೇವಋಷಿ ನಾರದ ಜಯಂತಿ ರೇಡಿಯೋ ವಾರ್ತೆ ಕೇಳುಗರ ಸಂಖ್ಯೆ ಕಡಿಮೆ: ಆಕಾಶವಾಣಿ ನಿವೃತ್ತ ವಾರ್ತಾ ವಾಚಕ ಎ.ಅರ್.ರಂಗರಾವ್ ಬೇಸರ
ಮೈಸೂರು

ಆದ್ಯ ಪತ್ರಕರ್ತ ದೇವಋಷಿ ನಾರದ ಜಯಂತಿ ರೇಡಿಯೋ ವಾರ್ತೆ ಕೇಳುಗರ ಸಂಖ್ಯೆ ಕಡಿಮೆ: ಆಕಾಶವಾಣಿ ನಿವೃತ್ತ ವಾರ್ತಾ ವಾಚಕ ಎ.ಅರ್.ರಂಗರಾವ್ ಬೇಸರ

June 18, 2018

ಮೈಸೂರು: ಒಂದು ಕಾಲದಲ್ಲಿ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ನಡ ವಾರ್ತೆಯನ್ನೇ ಜನರು ಆಶ್ರಯಿಸಿದ್ದರು. ವಾರ್ತಾ ಪ್ರಸಾರದ ವೇಳೆ ರೇಡಿಯೋ ಹಾಕಿಕೊಂಡು ವಾರ್ತೆ ಕೇಳುತ್ತಿದ್ದ ಕಾಲವದು. ಆದರೆ ಇಂದು ಇಂಟರ್‍ನೆಟ್ ಇನ್ನಿತರ ಆಧುನಿಕ ಪರಿಸ್ಥಿತಿಯಲ್ಲಿ ಕನ್ನಡ ವಾರ್ತೆ ಕೇಳುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಆಕಾಶವಾಣಿಯ ನಿವೃತ್ತ ವಾರ್ತಾ ವಾಚಕ ಎ.ಆರ್.ರಂಗರಾವ್ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದರು.

ಮೈಸೂರಿನ ಜೆಎಲ್‍ಬಿ ರಸ್ತೆ ಮಾಧವ ಕೃಪಾ ಸಭಾಂಗಣದಲ್ಲಿ ವಿಶ್ವ ಸಂವಾದ ಕೇಂದ್ರ ಆಯೋಜಿಸಿದ್ದ ಆದ್ಯ ಪತ್ರಕರ್ತ ದೇವಋಷಿ ನಾರದ ಜಯಂತಿ ಅಂಗವಾಗಿ ಮಾಧ್ಯಮ ಮಿತ್ರರ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಅಗರಂ ರಂಗಯ್ಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

35 ವರ್ಷಗಳ ಕಾಲ ಆಕಾಶವಾಣಿಯಲ್ಲಿ ವಾರ್ತಾ ವಾಚಕರಾಗಿದ್ದ ತಮ್ಮ ವಾರ್ತಾ ವಾಚಕ ವೃತ್ತಿಯಲ್ಲಿನ ಅನುಭವವನ್ನು ವಿಶ್ಲೇಷಿಸಿದ ಅವರು, ಅಂದು ಈವತ್ತಿನ ರೀತಿಯಲ್ಲಿ ಯಾವುದೇ ಇಂಟರ್‍ನೆಟ್ ಸೌಲಭ್ಯ ಇರಲಿಲ್ಲ. ದೆಹಲಿಯಿಂದ ಪ್ರಸಾರವಾಗುತ್ತಿದ್ದ ಕನ್ನಡ ವಾರ್ತೆಯನ್ನೇ ಎಲ್ಲರೂ ಆಶ್ರಯಿಸಿದ್ದರು. ಆದರೆ ಇಂದು ರೇಡಿಯೋದಲ್ಲಿ ಕನ್ನಡ ವಾರ್ತೆಯನ್ನು ಕೇಳುವವರೇ ಕಡಿಮೆಯಾಗಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ದೂರದರ್ಶನ ಬರುವ ಮುನ್ನ ರೇಡಿಯೋದಲ್ಲಿ ಕ್ರಿಕೆಟ್ ಕಾಮೆಂಟರಿ ಕೇಳುವುದೆಂದರೆ ಒಂದು ರೀತಿ ರೋಮಾಂಚನವಾಗುತ್ತಿತ್ತು. ಆದರೆ ಇಂದಿನ ಪರಿಸ್ಥಿತಿಯೇ ಬೇರೆಯಾಗಿದೆ. ಜನರು ರೇಡಿಯೋದಿಂದ ದೂರ ಉಳಿಯುತ್ತಿದ್ದಾರೆ ಎಂದ ಅವರು, ಕನ್ನಡ ಭಾಷೆ ಶಿಥಿಲವಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಸಲಹೆ ನೀಡಿದರು.

ನಾರದ ತ್ರಿಕೋಕ ಸಂಚಾರಿ. ಆದರೆ ಆತನನ್ನು ಅರ್ಥ ಮಾಡಿಕೊಳ್ಳದೇ ಕಲಹ ಪ್ರಿಯ ಎಂದೆಲ್ಲಾ ಜರಿಯಲಾಗುತ್ತದೆ. ಆದರೆ ಆತನೂ ಒಂದು ರೀತಿಯಲ್ಲಿ ಮಾಧ್ಯಮದ ಕೆಲಸವನ್ನೇ ಮಾಡಿದ್ದಾನೆ. ಆದ್ಯ ಪತ್ರಕರ್ತ ಎನಿಸಿದ್ದಾನೆ ಎಂದು ಅಭಿಪ್ರಾಯಪಟ್ಟರು.

ಹುಬ್ಬಳ್ಳಿಯ ಪ್ರಜ್ಞಾ ಪ್ರವಾಹ ಸಂಯೋಜಕ ರಘುನಂದನ್ ಮಾತನಾಡಿ, ಪತ್ರಕರ್ತರಿಗೆ ಹಾಗೂ ಬುದ್ದಿಜೀವಿಗಳಿಗೆ ನಾರದರೇ ಆದರ್ಶ. ಅವರು ನಿಷ್ಠೂರವಾಗಿಯೂ, ಮೃದುತ್ವವಾಗಿಯೂ ಹಾಗೂ ಪ್ರೇರಕ ಶಕ್ತಿಯೂ ಆಗಿದ್ದಾರೆ. ಪತ್ರಕರ್ತರಿಗೆ ಸತ್ಯ ನಿಷ್ಠೂರವಾದರೂ ಅವರು ಅಪಾಯದ ನಡುವೆಯೇ ಜೀವನ ನಡೆಸುತ್ತಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಇಡೀ ಪತ್ರಿಕಾ ಸಮುದಾಯವನ್ನೇ ಮೂದಲಿಸುವುದು ಸರಿಯಲ್ಲ. ಕೆಟ್ಟದ್ದಕ್ಕೆ ಕಣ್ಣು ಮುಚ್ಚಿ ಕುಳಿತುಕೊಳ್ಳುವುದು ಸರಿಯಲ್ಲ. ಪತ್ರಕರ್ತರು ಸಮಯ ಒಗ್ಗಿಸಿಕೊಳ್ಳುವುದು, ಸಂಸಾರವನ್ನು ಸರಿದೂಗಿಸಿಕೊಳ್ಳುವುದು ಎಂದರೆ ಸವಾಲಾಗಿದೆ. ಇಷ್ಟೆಲ್ಲವನ್ನೂ ಮಾಡುತ್ತಿರುವ ಪತ್ರಕರ್ತರನ್ನು ಸಮಾಜ ಗುರ್ತಿಸಬೇಕು. ಒಂದು ಕಾಲದಲ್ಲಿ ಪತ್ರಕರ್ತನೆಂದರೆ ಆತ ದೇಶಭಕ್ತನಾಗಿರಬೇಕು ಎನ್ನಲಾಗುತ್ತಿತ್ತು. ಆದರೆ ಇಂದು ಆ ರೀತಿ ಇಲ್ಲ. ಸಂಧಿಗ್ಧ, ಸವಾಲುಗಳ ನಡುವೆಯೇ ಹೋರಾಡುವಂತಾಗಿದೆ ಎಂದರು.

ವಿಶ್ವ ಸಂವಾದ ಕೇಂದ್ರದ ಟ್ರಸ್ಟಿ ಕ್ಷಮಾ ನರಗುಂದ ಪ್ರಾಸ್ತಾವಿಕವಾಗಿ ಮಾತನಾಡಿ, ಒಳ್ಳೆಯ ಸುದ್ದಿಗಳನ್ನು ಯಾವುದೆ ಪ್ರಚೋದನೆ ಇಲ್ಲದೆ ಯಥಾವತ್ತಾಗಿ ವೆಬ್‍ಸೈಟ್ ಮೂಲಕ ಜನರಿಗೆ ತಲುಪಿಸುವ ಕೆಲಸವನ್ನು ವಿಶ್ವ ಸಂವಾದ ಕೇಂದ್ರ ಮಾಡುತ್ತಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜೊತೆಗೆ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗ ಕೂಡ ಸಮಾಜಮುಖಿಯಾಗಿ ಸರಿಯಾಗಿ ಹೋಗುತ್ತಿದೆಯೇ ಇಲ್ಲವೇ ಎಂಬ ಬಗ್ಗೆ ಕಾವಲು ನಾಯಿಯಂತೆ ಕೆಲಸ ನಿರ್ವಹಿಸುತ್ತಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ತುಳಸಿ ಗಿಡಕ್ಕೆ ನೀರೆರೆಯುವ ಮೂಲಕ ಅತಿಥಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಸಿ.ಮಹೇಶ್ವರನ್ ಅವರಿಗೂ ಅಗರಂ ರಂಗಯ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗುರುಪ್ರಸಾದ್ ಇನ್ನಿತರರು ಉಪಸ್ಥಿತರಿದ್ದರು.

Translate »