‘ವಿಶ್ವ ಮಾನ್ಯ’ವಾದ ಮೈಸೂರು ಆಕಾಶವಾಣಿ ಎಫ್‍ಎಂ 100.6
ಮೈಸೂರು

‘ವಿಶ್ವ ಮಾನ್ಯ’ವಾದ ಮೈಸೂರು ಆಕಾಶವಾಣಿ ಎಫ್‍ಎಂ 100.6

October 9, 2018

ಮೈಸೂರು:  ಆಕಾಶವಾಣಿ ಮೈಸೂರು ಎಫ್‍ಎಂ 100.6 ಮೈಸೂರು, ಮಂಡ್ಯ ಸುತ್ತಮುತ್ತಲ ಜಿಲ್ಲೆಗಳಲ್ಲಿ ಮಾತ್ರ ಕೇಳಿ ಬರುತ್ತಿದ್ದ ಈ ಧ್ವನಿ ಇದೀಗ ವಿಶ್ವ ಮಾನ್ಯವಾಗಿದೆ. ಪ್ರಪಂಚದ ಮೂಲೆ ಮೂಲೆಯಲ್ಲೂ ಈ ಧ್ವನಿಯನ್ನು ಆಲಿಸುವ ಅವಕಾಶ ಹೊರನಾಡ ಕನ್ನಡಿಗರು, ವಿದೇಶದಲ್ಲಿ ನೆಲೆ ಸಿರುವ ಕನ್ನಡಿಗರಿಗೂ ದೊರೆಯಲಿದೆ.

ದೇಶದ ಮೊದಲ ಆಕಾಶವಾಣಿ ಎನಿಸಿ ರುವ ಮೈಸೂರು ಬಾನುಲಿ ಹಲವು ಪ್ರಥಮ ಗಳ ಕೇಂದ್ರವೂ ಹೌದು. ದಿನದ 24 ಗಂಟೆ ಆಕಾಶವಾಣಿ ಪ್ರಸಾರ ಮಾಡುವ ಕಾರ್ಯಕ್ರಮಗಳನ್ನು ಆಲಿಸಬಹುದಾದ ಅವಕಾಶ ಹೊರನಾಡ ಕನ್ನಡಿಗರು, ವಿದೇಶದಲ್ಲಿ ನೆಲೆ ಸಿರುವ ಕನ್ನಡಿಗರಿಗೆ ಲಭ್ಯವಾಗಿದೆ.

Air Mysuru Live ಆ್ಯಪ್ ಮೂಲಕ ಮೈಸೂರು ಆಕಾಶವಾಣಿಯನ್ನು ನೇರವಾಗಿ ಮೊಬೈಲ್ ಗಳ ಮೂಲಕವೂ ಆಲಿಸಬಹುದಾಗಿದೆ. www.airmysuru.com ಮೂಲಕವೂ ಇಂಟರ್‌ನೆಟ್ ಸೌಲಭ್ಯ ಹೊಂದಿರುವವರು ಆಕಾಶವಾಣಿಯ ಕಾರ್ಯ ಕ್ರಮಗಳನ್ನು ಆಲಿಸಬಹುದಾಗಿದೆ.

ಎರಡು ತಿಂಗಳ ಹಿಂದಷ್ಟೇ ಇಂತಹ ವ್ಯವಸ್ಥೆಯೊಂದನ್ನು ಆಕಾಶವಾಣಿ ಕೇಳುಗ ರಿಗೆ ಕಲ್ಪಿಸಿಕೊಟ್ಟಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ Air Mysuru Live ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ. ಈಗಾಗಲೇ ಈ ಆ್ಯಪ್‍ಗೆ ವಿಶ್ವಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೇಶ ವಿದೇಶಗಳ ಸಹಸ್ರಾರು ಮಂದಿ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಮೈಸೂರು ಆಕಾಶವಾಣಿಯನ್ನು ಆನಂದದಿಂದ ಆಲಿಸುತ್ತಿದ್ದಾರೆ.

ಎಂಟು ದಶಕಗಳ ಹಿಂದೆ 1935ರಲ್ಲಿ ಮನಃ ಶಾಸ್ತ್ರಜ್ಞ ಡಾ.ಎಂ.ವಿ.ಗೋಪಾಲಸ್ವಾಮಿ ಅವ ರಿಂದ ಮೈಸೂರಿನ ಒಂಟಿಕೊಪ್ಪಲಿನ ತಮ್ಮ ಮನೆಯಲ್ಲಿ ಸ್ಥಾಪಿಸಲ್ಪಟ್ಟ ಮೈಸೂರು ಬಾನುಲಿ ಕೇಂದ್ರ ದೇಶದ ಸಾಂಸ್ಕೃತಿಕ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಭಾರತದ ಮೊತ್ತ ಮೊದಲ ಖಾಸಗಿ ಬಾನುಲಿ ಕೇಂದ್ರವೂ ಅಗಿದೆ. ಗೋಪಾಲಸ್ವಾಮಿ ಅವರ `ಗೃಹ ಬಾನುಲಿ’ ಒಂದೆರಡು ವರ್ಷಗಳ ನಂತರ 1939ರಲ್ಲಿ ದಸರಾ ವಸ್ತು ಪ್ರದರ್ಶನ ಕಟ್ಟಡದಲ್ಲಿ (ಈಗಿನ ಮೈಸೂರು ಮೆಡಿಕಲ್ ಕಾಲೇಜಿನ ಕೊಠಡಿ) ಯೊಂದರಿಂದ ಮೈಸೂರು ರೇಡಿಯೋ ಕೇಂದ್ರದ ಪ್ರಸಾರ ಮುಂದುವರೆಯಿತು. 6 ವರ್ಷಗಳ ಕಾಲ ಗೋಪಾಲಸ್ವಾಮಿ ಅವರು ಸ್ವಂತ ಖರ್ಚಿ ನಲ್ಲಿ ಒಬ್ಬರೇ ನಡೆಸಿ, ಆನಂತರ ಆರ್ಥಿಕ ತೊಂದರೆಯಿಂದಾಗಿ ಅದರ ಆಡಳಿತವನ್ನು ಅಂದಿನ ಪುರಸಭೆಗೆ ವಹಿಸಿದ್ದರು.

1-1-1942ರಿಂದ ಮೈಸೂರು ಸಂಸ್ಥಾನದ ಮಹಾರಾಜರ ಸರ್ಕಾರವೇ ಆಡಳಿತ ವಹಿಸಿಕೊಂಡಿತು. ಸಂಗೀತ, ನಾಟಕ, ಕೃಷಿ, ಮಹಿಳೆ ಮತ್ತು ಮಕ್ಕಳ ವಿವಿಧ ಕಾರ್ಯಕ್ರಮಗಳ ಪ್ರಸಾರದಿಂದ ಜನಪ್ರಿಯತೆ ಗಳಿಸಿದ ಮೈಸೂರು ಆಕಾಶವಾಣಿ 1955ರಲ್ಲಿ ಬೆಂಗಳೂರಿಗೆ ವರ್ಗಾವಣೆಗೊಂಡಿತು. ಕಟ್ಟಡ ಪಾಳು ಬೀಳುವಂತಾಯಿತು. 19 ವರ್ಷಗಳ ಗ್ರಹಣದ ಬಳಿಕ ದೀಪಾವಳಿಯ ಬೆಳಗಿನಲ್ಲಿ 1974 ನ.14ರಂದು ಮತ್ತೆ ಮೈಸೂರು ಆಕಾಶವಾಣಿ ಉದಯವಾಯಿತು.

ಸಂಗೀತ, ನಾಟಕ, ಕೃಷಿ ಕಾರ್ಯಕ್ರಮಗಳ ಮೂಲಕ ಜನಮನವನ್ನು ತಲುಪಿದ್ದ ಆಕಾಶವಾಣಿ, ಮಹಿಳಾ ಮತ್ತು ಮಕ್ಕಳ ಕಾರ್ಯಕ್ರಮಗಳ ಮೂಲಕವೂ ತನ್ನ ಪ್ರಭಾವ ಬೀರಿತು. 2010ರಲ್ಲಿ ಅಮೃತ ಮಹೋ ತ್ಸವ ಆಚರಿಸಿಕೊಂಡಿತು. ಮೈಸೂರು, ಮಂಡ್ಯ ಜಿಲ್ಲೆಯ ಕೇಳುಗರಿಗೆ ಉತ್ತಮ ಧ್ವನಿಯಲ್ಲಿ ಅವರ ಕಿವಿಗಳನ್ನು ತಲುಪುತ್ತಿದ್ದ ಮೈಸೂರು ಆಕಾಶವಾಣಿ ಚಾಮರಾಜನಗರ ಜಿಲ್ಲೆಯ ಜನರ ಕಿವಿ ತಲುಪುತ್ತಿಲ್ಲ ಎಂಬ ದೂರು ಇಂದಿಗೂ ಇದ್ದೇ ಇದೆ. ಈ ಬಗ್ಗೆ ಸಾಕಷ್ಟು ಆಕಾಶವಾಣಿ ಕೇಳುಗ ಅಭಿಮಾನಿಗಳು ಸ್ಪಷ್ಟ ಧ್ವನಿ ಕೇಳುವ ರೀತಿಯಲ್ಲಿ ಆಕಾಶವಾಣಿಯನ್ನು ಮೇಲ್ದರ್ಜೆಗೇರಿಸುವಂತೆ ಬೇಡಿಕೆ ಇಡುತ್ತಲೇ ಬಂದಿದ್ದರು. ಆದರೆ ಅದು ಈಡೇರದೇ ಹೋದಾಗ ಚಾಮರಾಜನಗರದಲ್ಲೇ ಪ್ರತ್ಯೇಕ ಮರು ಪ್ರಸಾರ ಕೇಂದ್ರ ಪ್ರಾರಂಭಿಸುವಂತೆ ಒತ್ತಾಯ ಹೇರುತ್ತಲೆ ಬಂದರು. ಅದೂ ಸಹ ಈಡೇರದೇ ಹೋಯಿತು.

ಇದೆಲ್ಲವನ್ನೂ ಅರಿತ ಮೈಸೂರು ಆಕಾಶವಾಣಿಯ ಸಹಾಯಕ ನಿರ್ದೇಶಕ ಹೆಚ್. ಶ್ರೀನಿವಾಸ್ ಹಾಗೂ ತಾಂತ್ರಿಕ ನಿರ್ದೇಶಕ ಸುನಿಲ್ ಭಾಟಿಯಾ ಅವರು ವೆಬ್ ಮೂಲಕ ಇಂಟರ್‌ನೆಟ್ ಮತ್ತು ಮೊಬೈಲ್ ಆ್ಯಪ್ ಮೂಲಕ ಮೈಸೂರು ಆಕಾಶವಾಣಿಯ ಪ್ರಸಾರವನ್ನು ವಿಶ್ವದ ಎಲ್ಲ ಕನ್ನಡಿಗರ ಕಿವಿಯನ್ನು ತಣಿಸಲು ನಿರ್ಧರಿಸಿದರು. ಚಾಮರಾಜನಗರವೇ ಏಕೆ, ದೂರದ, ಬಹುದೂರದ ಕನ್ನಡಿಗರು, ಹೊರನಾಡ ಕನ್ನಡಿಗರು ಆಕಾಶವಾಣಿಯ ಎಲ್ಲಾ ಕಾರ್ಯಕ್ರಮ ಗಳನ್ನು ಆಲಿಸುವ ಅವಕಾಶವಾಗಿದೆ.

ನ.1ರಿಂದ `ಪದ ಸಂಸ್ಕೃತಿ’ ವಿಶೇಷ ಕಾರ್ಯಕ್ರಮ

ಹಲವು ಪ್ರಥಮಗಳ ಮೈಸೂರು ಆಕಾಶವಾಣಿ ನ.1ರ ರಾಜ್ಯೋತ್ಸವದಿಂದ `ಪದ ಸಂಸ್ಕೃತಿ’ ವಿಶಿಷ್ಟ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದೆ. ಕನ್ನಡ ಪದಗಳ ಬಳಕೆ, ಅರ್ಥ, ವಿಶೇಷ ತಾತ್ಪರ್ಯ ಸಹಿತ ವಿವರಣೆ, ಜತೆಗೆ 2-3 ಪದಗಳಿಗೆ ಅರ್ಥ, ಪದಗಳ ದೋಷಪೂರಿತ ಬಳಕೆಯನ್ನು ಸರಿಪಡಿಸುವ ರೀತಿ, ಗೀತೆಗಳ ತಾತ್ಪರ್ಯದ ಮೂಲಕ ವಿಶೇಷ ಪದದ ಅರ್ಥವನ್ನು ಕೇಳುಗರಿಗೆ ತಲುಪಿಸಲಿದೆ. ಮರೆತು ಹೋಗಿರುವ ಕನ್ನಡ ಪದಗಳ ಬಗ್ಗೆ ನೆನಪಿಸುವ ಕಾರ್ಯಕ್ರಮವಿದು. ಭಾವಗೀತೆ, ದೇಶಭಕ್ತಿ ಗೀತೆ, ದಾಸರ ಪದ, ತತ್ವಪದ, ರಂಗಗೀತೆ, ಸರ್ವಜ್ಞ ಪದ್ಯಗಳು, ವಚನಗಳು, ಚಿತ್ರಗೀತೆಗಳ ಮೂಲಕ ಪ್ರತಿ ದಿನ ಒಂದೊಂದು ಪ್ರಾಕಾರ ಬಳಸಿ ಕಾರ್ಯಕ್ರಮ ನೀಡಲಿದೆ. ಇದರಲ್ಲಿ ಹಿರಿಯ ಭಾಷಣಕಾರರು, ಭಾಷಾ ತಜ್ಞರು, ಕನ್ನಡ, ಸಂಸ್ಕೃತಿ ಬಲ್ಲವರು, ಮೈಸೂರಷ್ಟೇ ಅಲ್ಲ, ಬೆಂಗಳೂರು, ಧಾರವಾಡ, ಕಲಬುರ್ಗಿ ಇನ್ನಿತರ ಪ್ರಮುಖ ಪ್ರದೇಶಗಳ ಆಯಾ ಪ್ರಾದೇಶಿಕ ಕನ್ನಡ ಭಾಷೆಯ ಬಳಕೆಯನ್ನು ಇಲ್ಲಿ ಅಳವಡಿಸಿಕೊಳ್ಳಲಾಗುತ್ತಿರುವುದು ವಿಶೇಷ. ಈ ಕಾರ್ಯಕ್ರಮ ಪ್ರತಿ ದಿನ ಬೆಳಿಗ್ಗೆ 6.45ರಿಂದ 6.55ರವರೆಗೆ ಪ್ರಸಾರವಾಗಲಿದೆ. – ಹೆಚ್.ಶ್ರೀನಿವಾಸ್, ಸಹಾಯಕ ನಿರ್ದೇಶಕ, ಮೈಸೂರು ಆಕಾಶವಾಣಿ.

ನಾಳೆ ಸಿಎಂ ಕುಮಾರಸ್ವಾಮಿ, ಸುಧಾಮೂರ್ತಿ ಸಂದರ್ಶನ

ದಸರಾ ಅಂಗವಾಗಿ ಮೈಸೂರು ಆಕಾಶ ವಾಣಿಯು ಅ.10ರಂದು ಬೆಳಿಗ್ಗೆ 8.30ಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಬೆಳಿಗ್ಗೆ 8.45ಕ್ಕೆ ದಸರಾ ಮಹೋತ್ಸವದ ಉದ್ಘಾಟಕರಾದ ಡಾ.ಸುಧಾಮೂರ್ತಿ ಅವರ ಸಂದರ್ಶನ ಪ್ರಸಾರ ಮಾಡಲಿದೆ. ನಂತರ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರ ಸಂದರ್ಶನವನ್ನು ರಾಜ್ಯವ್ಯಾಪಿ ಜಾಲದಲ್ಲಿ ಪ್ರಸಾರ ಮಾಡಲಿದೆ.

Air Mysuru Live  ಮೊಬೈಲ್ ಆ್ಯಪ್

ಉತ್ತಮ ಹಾಗೂ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ದೇಶದಲ್ಲೇ ಮಾದರಿ ಆಕಾಶವಾಣಿ ಕೇಂದ್ರ ಎನಿಸಿರುವ `ಮೈಸೂರು ಆಕಾಶವಾಣಿ ಎಫ್‍ಎಂ 100.6’ ಕಾರ್ಯಕ್ರಮ ಗಳನ್ನು ಮೊಬೈಲ್ ಮೂಲಕವೂ ಆಲಿಸಲು ನೀವು ಮಾಡಬೇಕಾದುದಿಷ್ಟೇ. ಗೂಗಲ್ ಪ್ಲೇ ಸ್ಪೋರ್‍ಗೆ ಹೋಗಿ ಅಲ್ಲಿ Air Mysuru Live ಆ್ಯಪ್ ಡೌನ್‍ಲೋನ್ ಮಾಡಿಕೊಳ್ಳಿ. ನೇರವಾಗಿ ಕಾರ್ಯಕ್ರಮ ಪ್ರಸಾರ ಆಲಿಸುವುದು ತೀರಾ ಸುಲಭ. ಇದಿಷ್ಟೆ ಅಲ್ಲದೆ, www.airmysuru.comಗೆ ಲಾಗಿನ್ ಆದರೆ ಸಾಕು ಅಲ್ಲಿಯೂ ಎಲ್ಲಾ ಕಾರ್ಯಕ್ರಮಗಳನ್ನು ಆಲಿಸಬಹುದಾಗಿದೆ. ವೆಬ್ ಅಥವಾ ಮೊಬೈಲ್ ಆ್ಯಪ್ ಮೂಲಕ ಮೈಸೂರು ಆಕಾಶವಾಣಿ ಕಾರ್ಯಕ್ರಮಗಳನ್ನು ಆಲಿಸುವ ಕೇಳುಗರಿಗೆ ಇಲ್ಲಿ ಕಲ್ಪಿಸಿರುವ ಇನ್ನೊಂದು ಪ್ರಮುಖ ಅವಕಾಶವೆಂದರೆ, ದಿನದ ಮೂರು ಅವಧಿಯಲ್ಲಿ ಪ್ರಸಾರವಾಗುವ ಆಯಾ ದಿನದ ವಾರ್ತಾ ಪ್ರಸಾರ, ಕೃಷಿರಂಗದ ಕಾರ್ಯಕ್ರಮಗಳನ್ನು ಮತ್ತೆ ಮತ್ತೆ ಕೇಳುವ ಅವಕಾಶ ಕಲ್ಪಿಸಿಕೊಟ್ಟಿದೆ.

Translate »