ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಇ-ಆಡಳಿತದಿಂದ ಎರಡು ದಿನಗಳ `ಇ-ಕನ್ನಡ ಕಮ್ಮಟ’ಕ್ಕೆ ಚಾಲನೆ
ಮೈಸೂರು

ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಇ-ಆಡಳಿತದಿಂದ ಎರಡು ದಿನಗಳ `ಇ-ಕನ್ನಡ ಕಮ್ಮಟ’ಕ್ಕೆ ಚಾಲನೆ

December 31, 2019

ಪ್ರಚಾರವಿಲ್ಲದೆ ಸೊರಗಿ, ದಿನೇ ದಿನೆ ಕಣ್ಮರೆಯಾಗುತ್ತಿರುವ ಕನ್ನಡ
ಮೈಸೂರು, ಡಿ.30(ಆರ್‍ಕೆಬಿ)- ಕನ್ನಡ ಪ್ರಚಾರವಿಲ್ಲದೆ ಸೊರಗುತ್ತಿದೆ ಎಂದು ಕುವೆಂಪು ಅಂದೇ ಹೇಳಿದ್ದರು. ಆದರೆ ಪ್ರಸ್ತುತ ಪರಿ ಸ್ಥಿತಿಯೂ ಹಾಗೆಯೇ ಇದೆ. ಇಂದು ಕನ್ನಡ ದಿನೇ ದಿನೆ ಕಣ್ಮರೆಯಾಗುತ್ತಿದೆ ಎಂದು ಹಿರಿಯ ವಿದ್ವಾಂಸ ಟಿ.ವಿ.ವೆಂಕಟಾಚಲ ಶಾಸ್ತ್ರಿ ಇಂದಿಲ್ಲಿ ಆತಂಕ ವ್ಯಕ್ತಪಡಿಸಿದರು.

ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಕಬಿನಿ ಚಾಣಕ್ಯ ಸಭಾಂಗಣದಲ್ಲಿ ಸೋಮ ವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ತಂತ್ರಜ್ಞಾನ ಯೋಜನೆ (ಇ-ಆಡಳಿತ) ಜಂಟಿಯಾಗಿ ಆಯೋಜಿಸಿದ್ದ ಎರಡು ದಿನಗಳ `ಇ-ಕನ್ನಡ ಕಮ್ಮಟ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕರ್ನಾ ಟಕದಲ್ಲಿ ಕನ್ನಡದ ಪ್ರಚಾರ, ಪ್ರಭಾವ, ಪ್ರಕಟಣೆ ದೃಷ್ಟಿಯಿಂದ ಬೆಳೆಸುವಂತಹ ಸರಿಯಾದ ಪ್ರಯತ್ನ ಆಗುತ್ತಿಲ್ಲ. ಸಂಸ್ಕøತ ಮತ್ತು ಇಂಗ್ಲಿಷ್ ಭಾಷೆಗಳು ಕನ್ನಡ ದೊಂದಿಗೆ ಬೆರೆತು ಕನ್ನಡದ ಮಾತು ಗಾರಿಕೆ, ದೇಸೀ ವಾಸನೆಯ ನಷ್ಟದ ಜೊತೆಗೆ ಭ್ರಷ್ಟವೂ ಆಗುತ್ತಿದೆಯೇನೋ ಎನಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.

ವ್ಯವಹಾರ ಅಡಳಿತ, ಸಾಮಾಜಿಕ ವಿದ್ಯ ಮಾನ, ಸಂಭಾಷಣೆ, ಉಪನ್ಯಾಸಗಳಲ್ಲಿ ಇಂಗ್ಲಿಷ್‍ನ ಮಾತುಗಾರಿಕೆ ನುಗ್ಗಿ ಬರು ತ್ತಿದೆ. ಇದನ್ನು ತಪ್ಪಿಸುವುದು ಹೇಗೆ? ಎಂದು ಪ್ರಶ್ನಿಸಿದ ಅವರು, ನಮ್ಮಲ್ಲಿ ಕನ್ನಡದ ಪ್ರಜ್ಞೆ ಬೆಳೆಸಿಕೊಳ್ಳದಿರುವುದೇ ಈ ಕೊರತೆಗೆ ಕಾರಣವಾಗಿದೆ ಎಂದರು.

ಕುವೆಂಪು ಕಾಲದಲ್ಲಿ ಕನ್ನಡಕ್ಕೆ ಮೊನಚು ಸಿಕ್ಕಿತ್ತು. ಇಂದು ಬಿಎಂಶ್ರೀ ಅವರಂತೆ ಅಚ್ಚ ಕನ್ನಡದಲ್ಲಿ ಬರೆಯಲು, ಮಾತನಾಡಲು ಆಗುತ್ತಿಲ್ಲ. ಕನ್ನಡದ ಅಭಿವೃದ್ಧಿಗೆ ಯಾವುದೇ ಪ್ರಯತ್ನ ನಡೆದಿಲ್ಲ. ಪಾಪಪ್ರಜ್ಞೆ ಕಾಡುತ್ತಿದ್ದು, ಮನಸ್ಸು ಕುಗ್ಗಿ ಹೋಗಿದೆ ಎಂದು ಬೇಸರದಿಂದ ನುಡಿದರು.

ಕನ್ನಡ ಭಾಷೆಯ ಬಳಕೆಯ ನಡುವೆ ಇಂಗ್ಲಿಷ್ ಮತ್ತು ಸಂಸ್ಕøತ ಪದ, ವಾಕ್ಯ ಗಳು ನುಗ್ಗಿ ಬರುತ್ತಿದ್ದು, ಈ ದೃಷ್ಟಿಯಿಂದ ಏನು ಮಾಡಬಹುದು ಎಂಬ ಬಗ್ಗೆ ಈ ಕಮ್ಮಟದಲ್ಲಿ ಉತ್ತರ ಕಂಡುಕೊಳ್ಳಬೇಕು. ಕನ್ನಡ ಭಾಷೆ ವರ್ತಮಾನಕ್ಕೆ ಸಮ ನ್ವಯಗೊಳ್ಳುವ, ಅರ್ಥಪೂರ್ಣಗೊಳ್ಳುವ ಕೆಲಸ ಆಗಬೇಕಿದೆ. ಕನ್ನಡವನ್ನು ಕನ್ನಡ ವಾಗಿ ಉಳಿಸಿಕೊಳ್ಳುವ ಕೆಲಸವನ್ನು ನಾವು ಮಾಡಬೇಕಿದೆ. ಕಳೆದುಕೊಂಡಿರುವ ಕನ್ನಡವನ್ನು ಹೇಗೆ ಉಳಿಸಿಕೊಳ್ಳಬೇಕು? ಎಂಬ ಬಗ್ಗೆ ಚಿಂತನೆ ಆಗಬೇಕಿದೆ. ಪದನಿಧಿ ದೇಸೀಯವಾಗಬೇಕು.

ವಿವಿಧ ಕ್ಷೇತ್ರಗಳ ಜ್ಞಾನಕ್ಕೆ ನಮ್ಮಲ್ಲಿರುವ ಮಾತುಗಳೆಲ್ಲವನ್ನೂ ಕೂಡಿಸಿ ನಿಘಂಟು ಮಾಡಬೇಕು. ಆಡುವ ಮಾತನ್ನೂ ಸರಿ ಯಾಗಿ ಆಡುವ ಹಾಗೆ ಕಿರಿಯ ಪೀಳಿಗೆ ಯವರಿಗೆ ಮತ್ತು ಆಸಕ್ತರಿಗೆ ತರಬೇತಿ ನೀಡಬೇಕಿದೆ. ಕನ್ನಡತನವನ್ನು ನಾವು ತಿಳಿಯಬೇಕು. ಕಲಿಯಬೇಕು, ಬೆಳೆಸ ಬೇಕು, ಕನ್ನಡವನ್ನು ಕನ್ನಡವಾಗಿ ನೋಡಲು ಸಮುದಾಯವನ್ನು ಬೆಳೆಸಬೇಕು. ಅದು ಜ್ಞಾನವಾಗುವ ಮೊದಲು ಕನ್ನಡದ ಪ್ರಜ್ಞೆ ಬರಬೇಕು ಎಂದು ಅಭಿಪ್ರಾಯಪಟ್ಟರು.

ಇಂದು ಅಧ್ಯಯನದ ಕೊರತೆ ಯಿಂದಾಗಿ ಕನ್ನಡದ ಕೆಲಸ ಮಾಡುವ ಶಕ್ತಿ ಕಿರಿಯರಲ್ಲಿ ಸಂಚಿತವಾಗುತ್ತಿಲ್ಲ. ನಮ್ಮಲ್ಲಿ ಅನೇಕ ನಿಘಂಟುಗಳಿದ್ದರೂ ಅದನ್ನು ನೋಡುತ್ತಿಲ್ಲ. ನೋಡುವ ಕಲ್ಪ ನೆಯೂ ನಮ್ಮಲ್ಲಿ ಉಳಿದಿಲ್ಲ. ನಮ್ಮಲ್ಲಿ ದೇಸೀ ನಿಘಂಟುಗಳು ಸಮೃದ್ಧವಾಗಿ ರಚನೆಯಾಗಬೇಕಿದೆ. ಅವುಗಳನ್ನು ಕ್ರೋಢೀಕರಿಸಿ, ಅನೇಕ ನಿಘಂಟುಗಳನ್ನು ಸಿದ್ಧಪಡಿಸಬೇಕಾಗಿದೆ ಎಂದರು.

ತಂತ್ರಜ್ಞಾನ ಬಳಸಿಕೊಂಡು ನಮ್ಮ ಕನ್ನಡ, ಪದ ಸಂಪತ್ತನ್ನು ದಾಖಲಿಸ ಬೇಕು. ಅದನ್ನು ಜನರ ವ್ಯವಹಾರ, ಚಟು ವಟಿಕೆ, ಉಪನ್ಯಾಸ, ಅಧ್ಯಯನಕ್ಕೆ ವಿಷಯ ವಾಗಿ ಸ್ಥಾಪನೆಯಾಗಬೇಕು. ಈ ಬಗ್ಗೆ ಆಲೋಚಿಸಿ ಕಾರ್ಯರೂಪಕ್ಕೆ ತರಬೇಕಿದೆ. ಆ ನಿಟ್ಟಿನಲ್ಲಿ `ಇ-ಕನ್ನಡ ಕಮ್ಮಟ’ದ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಮ್ಮಟದಲ್ಲಿ 30ಕ್ಕೂ ಹೆಚ್ಚು ತಂತ್ರಜ್ಞಾನ ತಜ್ಞರು, ಭಾಷಾ ತಜ್ಞರು ಭಾಗವಹಿಸಿ ದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಅಧ್ಯಕ್ಷತೆ ವಹಿಸಿ ದ್ದರು. ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕಿ ವಿ.ಭಾಗ್ಯಲಕ್ಷ್ಮಿ, ಪ್ರಭಾ ಕರ್ ಉಪಸ್ಥಿತರಿದ್ದರು.

Translate »