ಇಬ್ಬರು ದರೋಡೆಕೋರರ ಬಂಧನ, 1.5 ಲಕ್ಷ ರೂ. ನಗದು ವಶ
ಮೈಸೂರು

ಇಬ್ಬರು ದರೋಡೆಕೋರರ ಬಂಧನ, 1.5 ಲಕ್ಷ ರೂ. ನಗದು ವಶ

February 12, 2019

ಮೈಸೂರು: ಇಬ್ಬರು ದರೋಡೆಕೋರರನ್ನು ಬಂಧಿಸಿರುವ ದೇವರಾಜ ಠಾಣೆ ಪೊಲೀಸರು 1,50,000 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.

ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ, ಓಜಿಕುಪ್ಪಂ ಗ್ರಾಮದ ನಿವಾಸಿ ಲೇಟ್ ಪಂಪಿ ಪಾಟಿ ಗುಣಶೇಖರ್ ಅವರ ಮಗ ರಾಜೇಶ್ ಅಲಿಯಾಸ್ ಪಂಪಿ ಪಾಟಿ ರಾಜೇಶ್ (28) ಹಾಗೂ ಲೇಟ್ ರಾಮಯ್ಯರ ಮಗ ಷಣ್ಮುಗಂ (52) ಬಂಧಿತ ದರೋಡೆ ಕೋರರಾಗಿದ್ದಾರೆ. ಮೈಸೂರಿನ ವಿಜಯನಗರ 2ನೇ ಹಂತದ ನಿವಾಸಿ ರಾಜು ಎಂಬುವರು ಶಿವರಾಂಪೇಟೆಯ ವಿನೋಭ ರಸ್ತೆಯಲ್ಲಿರುವ ಕೆರೂರು ವೈಶ್ಯ ಬ್ಯಾಂಕಿನಿಂದ 2018ರ ನವೆಂಬರ್ 14 ರಂದು 2 ಲಕ್ಷ ರೂ. ಹಣ ಡ್ರಾ ಮಾಡಿಕೊಂಡು ತಮ್ಮ ಕಾರಿನ ಬಳಿಗೆ ಹೋಗಲು ರಸ್ತೆ ದಾಟುತ್ತಿದ್ದಾಗ ಬೈಕಿನಲ್ಲಿ ಬಂದ ಇವರಿಬ್ಬರೂ ರಾಜು ಅವರಿಂದ ಹಣವಿದ್ದ ಬ್ಯಾಗನ್ನು ಕಿತ್ತು ಪರಾರಿಯಾಗಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ದೇವರಾಜ ಠಾಣೆ ಇನ್ಸ್‍ಪೆಕ್ಟರ್ ಪ್ರಸನ್ನ ಕುಮಾರ್ ತನಿಖೆ ನಡೆಸುತ್ತಿದ್ದರು. ಫೆಬ್ರವರಿ 7 ರಂದು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ರಾಜೇಶ್ ಮತ್ತು ಷಣ್ಮುಗಂ ಅವರು ಇನ್ನೂ ನಾಲ್ವರೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾರೆ ಎಂಬುದು ದೃಢಪಟ್ಟಿತು.

ಬಂಧಿತರಿಂದ 1,50,000 ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ದೇವರಾಜ ಉಪವಿಭಾಗದ ಎಸಿಪಿ ಜಿ.ಎಸ್. ಗಜೇಂದ್ರ ಪ್ರಸಾದ್, ಇನ್ಸ್‍ಪೆಕ್ಟರ್ ಪ್ರಸನ್ನಕುಮಾರ್, ಸಬ್ ಇನ್ಸ್‍ಪೆಕ್ಟರ್ ಎಸ್. ರಾಜು, ಎಎಸ್‍ಐ ಉದಯಕುಮಾರ್, ಸಿಬ್ಬಂದಿಗಳಾದ ಸೋಮಶೆಟ್ಟಿ, ಸುರೇಶ, ವೇಣುಗೋಪಾಲ್, ಮಂಜುನಾಥ್, ನಂದೀಶ್ ಅವರು ಪಾಲ್ಗೊಂಡಿದ್ದರು.

Translate »