ಸೋಮವಾರಪೇಟೆ: ಹಿಂದೂ ಸಮಾಜದ ಹೆಣ್ಣು ಮಕ್ಕಳನ್ನು ಇತರೆ ಧರ್ಮದ ಯುವಕರು ಮುಟ್ಟಿದರೆ ಅವರ ಕೈಇರಬಾರದು. ಅಂಥ ವರ ಕೈ ತೆಗೆದು ಹಿಂದೂ ಸಂಘಟನೆಯ ಕಾರ್ಯಕರ್ತರು ಇತಿಹಾಸ ನಿರ್ಮಿಸಬೇಕು ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಭಾನುವಾರ ಹೇಳಿ ರುವುದು ಹೊಸ ವಿವಾದಕ್ಕೆ ನಾಂದಿ ಹಾಡಿದೆ.
ಸೋಮವಾರಪೇಟೆ ತಾಲೂಕು ಮಾದಾಪುರ ಗ್ರಾಮದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ನವೀಕೃತ ಕಲ್ಲುಕೋರೆ ಚೌಡಿಯಮ್ಮ ಮತ್ತು ಗುಳಿಗಪ್ಪ ದೇವಸ್ಥಾನಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅನಂತಕುಮಾರ್ ಹೆಗಡೆ ಎಂದಿನಂತೆ ತಮ್ಮ ಅಕ್ರೋಶ ಭರಿತ ಮಾತುಗಳಿಂದ ವಿವಾದದ ಕಿಡಿ ಎಬ್ಬಿಸಿದ್ದಾರೆ. ಅನ್ಯ ಧರ್ಮದ ಪ್ರಾರ್ಥನಾ ಮಂದಿರಗಳು ಬಿದ್ದರೆ ರಾಜ್ಯ ಸರ್ಕಾರದ ಮಂತ್ರಿಗಳು ಓಡೋಡಿ ಬರುತ್ತಾರೆ. ಅದರ ಮರು ನಿರ್ಮಾಣಕ್ಕೂ ಅನುವಾದ ಬಿಡುಗಡೆ ಮಾಡುತ್ತಾರೆ. ಆದರೆ ಹಿಂದೂ ದೇಗುಲಗಳು ಬಿದ್ದರೆ ಯಾರೂ ಇತ್ತ ಗಮನ ಹರಿಸುವುದಿಲ್ಲ. ಹಿಂದೂ ಸಂಘಟನೆಗಳೇ ಅದನ್ನು ದುರಸ್ತಿಪಡಿಸಿಕೊಳ್ಳುವ ಸ್ಥಿತಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇವರಿಗೆ ದುರ್ಬಲರೇ ಬೇಕು. ಅದಕ್ಕಾಗಿ ಕುರಿ, ಕೋಳಿಯನ್ನು ಬಲಿ ಕೊಡಲಾಗುತ್ತದೆ. ಆನೆ, ಹುಲಿಯನ್ನು ಬಲಿ ನೀಡುತ್ತಾರೆಯೇ? ಎಂದ ಅವರು, ನೀವು ಕುರಿ-ಕೋಳಿ ಆಗದೆ ಶೌರ್ಯ ಮೆರೆವ ವ್ಯಕ್ತಿಗಳಾಗಿ ಎಂದು ಹಿಂದೂ ಕಾರ್ಯಕರ್ತರಿಗೆ ಕರೆ ನೀಡಿದರು.
ಹಿಂದೂ ಸಮಾಜ ಒಟ್ಟಾಗಿ ನಿಲ್ಲದಿದ್ದರೆ ಮುಂದೆ ಮತ್ತಷ್ಟು ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಅನಂತ್‍ಕುಮಾರ್ ಹೆಗಡೆ, ಶಬರಿಮಲೆಯ ಅಯ್ಯಪ್ಪ ದೇಗುಲ ಪ್ರವೇಶದ ವಿಚಾರದಲ್ಲಿ ಇಬ್ಬರು ಮಹಿಳೆಯರು ಕೊಡಗಿನ ನೆಲವನ್ನು ದುರ್ಬಳಕೆ ಮಾಡಿಕೊಂಡರು. ಇನ್ಮುಂದೆ ಈ ರೀತಿ ಆಗಬಾರದು, ಅದು ನಡೆದರೆ ಇಲ್ಲಿಯೇ ಮಣ್ಣಾಗಬೇಕು ಎಂದು ಹೇಳಿದರು.
ಇದೇ ಪರಿಸ್ಥಿತಿ ಮುಂದುವರೆದರೆ ಮುಂದೊಂದು ದಿನ ಕೊಡಗು ಉಳಿಯುವುದಿಲ್ಲ. ಕೊಡಗಿನ ಗುರುತಾದ ವೀರತ್ವ ಮತ್ತೆ ಎದ್ದು ನಿಲ್ಲಬೇಕು. ಇಲ್ಲದಿದ್ದರೆ ಮಸೀದಿ, ಚರ್ಚ್‍ಗಳು ತಲೆಯೆತ್ತಲಿವೆ ಎಂದು ಎಚ್ಚರಿಸಿದರು.
ಹಿಂದೂ ಜಾಗರಣಾ ವೇದಿಕೆ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್, ಸೋಮವಾರಪೇಟೆ ವಿರಕ್ತ ಮಠದ ಶ್ರೀವಿಶ್ವೇಶ್ವರ ಸ್ವಾಮೀಜಿ ಹಾಗೂ ನೂರಾರು ಕಾರ್ಯಕರ್ತರು ಹಾಜರಿದ್ದರು. ಬೆಂಗಳೂರಿನ ಪರಿವರ್ತನಾ ಟ್ರಸ್ಟ್ ಹಾಗೂ ಹಿಂದೂ ಜಾಗರಣಾ ವೇದಿಕೆ ವತಿಯಿಂದ ದೇವಸ್ಥಾನಗಳನ್ನು ಮರು ನಿರ್ಮಾಣ ಮಾಡಲಾಗಿತ್ತು.