ಮೈಸೂರು, ಫೆ.8(ಎಸ್‍ಪಿಎನ್)-ಇಂದಿನ ಯುವ ಸಮೂಹ ಸಾಮಾಜಿಕ ಜಾಲ ತಾಣ ಬಳಕೆ ಇಲ್ಲದಿದ್ದರೆ, ಜೀವನವೇ ಇಲ್ಲ ಎನ್ನುವ ಮನಸ್ಥಿತಿಗೆ ತಲುಪಿರುವುದು ಶೋಚ ನೀಯ ಎಂದು ಶಾರದಾ ವಿಲಾಸ ಕಾಲೇಜು ಸೂಕ್ಷ್ಮಜೀವಾಣು ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಆರ್.ಎ.ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.
ಮೈಸೂರು ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಕಾಲೇಜು ಆವರಣದಲ್ಲಿ ನಡೆದ ಸಮಾರಂಭದಲ್ಲಿ ಯುವ ಬರಹಗಾರ ಎ.ಎಸ್.ಮುರುಳಿಧರ್ ರಚಿತ `ಬಾಲ್ಯದ ನೆನಪು’ ಪುಸ್ತಕವನ್ನು ಶನಿವಾರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬರಹಗಾರರಿಗೆ ಸಾಮಾಜಿಕ ಬದ್ಧತೆ ಇರಬೇಕು. ಇಲ್ಲದಿದ್ದರೆ, ಆ ಬರಹಗಾರ ಹೆಚ್ಚು ಮೌಲ್ಯಯುತ ಸಾಹಿತ್ಯ ಸೃಷ್ಟಿಸಲಾರ ಎಂದರು. ಅಪ್ಪಟ ಗ್ರಾಮೀಣ ಪ್ರತಿಭೆಯಾಗಿರುವ ಮುರುಳೀದರ್, `ಬಾಲ್ಯದ ನೆನಪು’ ಕೃತಿ ರಚಿಸಿದ್ದಾರೆ. ಈ ಕೃತಿ ಪ್ರಸ್ತುತ ಕಾಲಘಟ್ಟಕ್ಕೆ ಅರ್ಥಗರ್ಭಿತವಾಗಿದೆ. ಗ್ರಾಮೀಣ ಬದುಕನ್ನು ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿರುವ ಮುರುಳಿದರ್, ಅಲ್ಲಿನ ನೋವು-ನಲಿವಿನ ಬಗ್ಗೆ ಚಿತ್ರಿಸಿದ್ದಾರೆ. ಆದ್ದರಿಂದ ಇಂದಿನ ಯುವ ಸಮೂಹ ಸಾಮಾಜಿಕ ಜಾಲ ತಾಣಗಳಾದ ವಾಟ್ಸಾಪ್, ಫೇಸ್‍ಬುಕ್, ಟ್ವಿಟ್ಟರ್, ಲ್ಯಾಪ್‍ಟಾಪ್‍ಗಳಿಲ್ಲದೆ, ಬದುಕಿಲ್ಲ ಎನ್ನುವ ಬದಲು ಇತರೆ ಚಟುವಟಿಕೆಗಳತ್ತ ಗಮನ ಹರಿಸುವಂತೆ ಸಲಹೆ ನೀಡಿದರು.
ಪ್ರೊ.ಹೆಚ್.ಆರ್. ಪರಮೇಶ್ವರ್ ಮಾತನಾಡಿ, ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಾಹಿತ್ಯದ ಬಗ್ಗೆ ಹೆಚ್ಚು ಆಸಕ್ತಿ ಬೆಳಸಿಕೊಳ್ಳಬೇಕು. ಇದರಿಂದ ಬೇರೆ ಚಟಗಳಿಂದ ಮುಕ್ತಿ ಹೊಂದಬಹುದು. ಅಲ್ಲದೆ, ಮುಂದಿನ ಜೀವನದಲ್ಲಿ ಉತ್ತಮ ವ್ಯಕ್ತಿತ್ವ ರೂಡಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು. ವೇದಿಕೆಯಲ್ಲಿ ಪ್ರಾಂಶುಪಾಲರಾದ ಪ್ರೊ.ಪಿ.ಧನಲಕ್ಷ್ಮಿ, ಎನ್‍ಸಿಸಿ ವಿಭಾಗದ ಮುಖ್ಯಸ್ಥ ಪ್ರೊ.ಆರ್.ಎ.ಮಂಜುನಾಥ್, ಕನ್ನಡ ಉಪನ್ಯಾಸಕ ಹೊನ್ನಲಗೆರೆ ರಾಜೇಂದ್ರಪ್ರಸಾದ್ ಇದ್ದರು.