ಮೈಸೂರಿನಲ್ಲಿ ಉಪ ರಾಷ್ಟ್ರಪತಿ ದಂಪತಿ
ಮೈಸೂರು

ಮೈಸೂರಿನಲ್ಲಿ ಉಪ ರಾಷ್ಟ್ರಪತಿ ದಂಪತಿ

July 13, 2019

ಮೈಸೂರು, ಜು. 12(ಆರ್‍ಕೆ)- ಭಾರತದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಪತ್ನಿಯೊಂದಿಗೆ ಇಂದು ಸಂಜೆ ಮೈಸೂರಿಗೆ ಆಗ ಮಿಸಿದರು. ಭಾರತೀಯ ವಾಯು ಪಡೆಯ ವಿಶೇಷ ವಿಮಾನದಲ್ಲಿ ಸಂಜೆ 6.45 ಗಂಟೆಗೆ ಆಗಮಿಸಿದ ಉಪ ರಾಷ್ಟ್ರಪತಿ ದಂಪತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಮೇಯರ್ ಪುಷ್ಪಲತಾ ಜಗನ್ನಾಥ ಅವರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಪುಷ್ಪಗುಚ್ಛ ನೀಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು.

ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್, ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ, ಎಸ್ಪಿ ರಿಶ್ಯಂತ್, ಭಾರತೀಯ ಭಾಷಾ ಸಂಸ್ಥಾನ (CIIL) ಹಾಗೂ ಪ್ರಾದೇಶಿಕ ಶಿಕ್ಷಣ ಸಂಸ್ಥೆ (RIE)ಯ ಮುಖ್ಯಸ್ಥರು ಸಹ ಹಾಜರಿದ್ದು, ವೆಂಕಯ್ಯ ನಾಯ್ಡು ಅವರನ್ನು ಬರಮಾಡಿಕೊಂಡರು. ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಪೊಲೀಸ್ ಗೌರವ ವಂದನೆ ಸಲ್ಲಿಸಿದ ನಂತರ ಉಪರಾಷ್ಟ್ರಪತಿಗಳನ್ನು ಬೆಂಗಾವಲು ವಾಹನದೊಂದಿಗೆ ಭಾರೀ ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರಿನಲ್ಲಿ ರಸ್ತೆ ಮೂಲಕ ನಜರ್‍ಬಾದ್‍ನ ಸರ್ಕಾರಿ ಅತಿಥಿ ಗೃಹಕ್ಕೆ ಕರೆತರಲಾಯಿತು. ಸರ್ಕಾರಿ ಅತಿಥಿ ಗೃಹದಲ್ಲಿ ಡಿಸಿಪಿ ಎಂ. ಮುತ್ತುರಾಜ್ ನೇತೃತ್ವದಲ್ಲಿ ಭಾರೀ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ರಾತ್ರಿ ಇಲ್ಲಿಯೇ ವಾಸ್ತವ್ಯ ಹೂಡಲಿರುವ ಉಪ ರಾಷ್ಟ್ರಪತಿಗಳು, ನಾಳೆ (ಜು. 13) ಬೆಳಿಗ್ಗೆ CIIL ಮತ್ತು RIE ಸಂಸ್ಥೆಗಳಲ್ಲಿನ ಸಮಾರಂಭಗಳಲ್ಲಿ ಭಾಗವಹಿಸಿದ ನಂತರ ಬೆಳಿಗ್ಗೆ 11.45 ಗಂಟೆಗೆ ಚೆನ್ನೈನತ್ತ ಪ್ರಯಾಣ ಬೆಳೆಸುವರು.

Translate »