ಮೈಸೂರು,ಅ.31(ಪಿಎಂ)-ಮೈಸೂ ರಿನ ಬನ್ನಿಮಂಟಪದ ಜೆಎಸ್‍ಎಸ್ ವೈದ್ಯಕೀಯ ಕಾಲೇಜು ಆವರಣ ದಲ್ಲಿ ನ.2ರಂದು ನಡೆ ಯಲಿರುವ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ (ಎSS-ಂಊಇಖ) ದಶಮ ವಾರ್ಷಿಕ ಘಟಿಕೋತ್ಸ ವದಲ್ಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಪಾಲ್ಗೊಳ್ಳಲಿದ್ದಾರೆ.
ಅಂದು ಸಂಜೆ 4.30ಕ್ಕೆ ನಡೆಯ ಲಿರುವ ಘಟಿಕೋತ್ಸವದಲ್ಲಿ ಉಪ ರಾಷ್ಟ್ರಪತಿಗಳು ಶೈಕ್ಷಣಿಕ ಸಾಧನೆ ಮಾಡಿದ ಪದವೀಧರರಿಗೆ ಚಿನ್ನದ ಪದಕ ಹಾಗೂ ನಗದು ಬಹುಮಾನಗಳನ್ನು ವಿತರಿಸಿ, ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅಕಾಡೆಮಿಯ ಪ್ರಭಾರ ಕುಲಪತಿ ಡಾ.ಹೆಚ್.ಬಸವನ ಗೌಡಪ್ಪ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಅಂದು ಸಂಜೆ 5.05ಕ್ಕೆ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಸುತ್ತೂರು ಮಠದ ಪೀಠಾಧ್ಯಕ್ಷರು ಹಾಗೂ ಜೆಎಸ್‍ಎಸ್-ಎಹೆಚ್‍ಇಆರ್‍ನ ಕುಲಾಧಿಪತಿಗಳೂ ಆದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ರಾಜ್ಯಪಾಲ ವಜೂಭಾಯಿ ರೂಡಾಭಾಯಿ ವಾಲಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭಾಗವಹಿಸಲಿದ್ದಾರೆ. ಇನ್ನತರ ಜನಪ್ರತಿನಿಧಿಗಳೂ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಅಕಾಡೆಮಿ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಆರ್.ಸುಧೀಂದ್ರ ಭಟ್ ಮಾತನಾಡಿ, 734 ವಿದ್ಯಾರ್ಥಿಗಳು ಹಾಗೂ 934 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 1,668 ಮಂದಿ ವಿವಿಧ ವಿಷಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಾಕ್ಟೋರಲ್ ಪದವಿ ಸ್ವೀಕರಿಸಲಿದ್ದಾರೆ. ಈ ಪೈಕಿ ಚಿನ್ನದ ಪದಕ ಹಾಗೂ ವಿವಿಧ ನಗದು ಬಹುಮಾನಗಳು ಸೇರಿದಂತೆ ಒಟ್ಟು 60 ಪುರಸ್ಕಾರಗಳಿಗೆ 43 ವಿದ್ಯಾರ್ಥಿಗಳು ಭಾಜನರಾಗಲಿದ್ದಾರೆ. ಎಂಬಿಬಿಎಸ್‍ನಲ್ಲಿ ಸಂದೀಪ್ ಗಂಗಾ 5 ಚಿನ್ನದ ಪದಕಗಳನ್ನು ಭಾಚಿಕೊಳ್ಳುವ ಮೂಲಕ ಉತ್ಕøಷ್ಟ ಸಾಧನೆಗೈದಿದ್ದಾರೆ. 6 ಮಂದಿ ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಪದವಿ ಪಡೆಯಲಿದ್ದು, 7 ಮಂದಿ ಕ್ಲಿನಿಕಲ್ ಸೈಕಾಲಜಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಸ್ವೀಕರಿಸಲಿದ್ದಾರೆ ಎಂದು ವಿವರಿಸಿದರು.
ಕಳೆದ 10 ವರ್ಷಗಳಲ್ಲಿ ಅಕಾಡೆಮಿ ಶೈಕ್ಷಣಿಕವಾಗಿ ಉತ್ಕøಷ್ಟ ಸಾಧನೆ ಮಾಡಿದೆ. 2008ರಲ್ಲಿ ಜೆಎಸ್‍ಎಸ್ ವಿಶ್ವವಿದ್ಯಾನಿಲಯವು ಯುಜಿಸಿಯಿಂದ ಪರಿಗಣಿತ ವಿಶ್ವವಿದ್ಯಾನಿಲಯ ಎಂಬ ಮಾನ್ಯತೆ ಪಡೆದುಕೊಂಡಿತು. 2018ರಲ್ಲಿ ಜೆಎಸ್‍ಎಸ್-ಎಹೆಚ್‍ಇಆರ್ ಹೆಸರಿನಲ್ಲಿ ಪರಗಣಿತ ಹಾಗೂ ಸ್ವಾಯತ್ತತೆ ವಿಶ್ವವಿದ್ಯಾನಿಲಯವಾಗಿ ಮುಂದುವರೆಯಲು ಯುಜಿಸಿ ಅನುಮೋದಿಸಿದೆ. ನ್ಯಾಕ್ ಸಂಸ್ಥೆ 2013ರಲ್ಲಿ ಅಕಾಡೆಮಿಗೆ `ಎ’ ದರ್ಜೆ ನೀಡಿದ್ದು, ಮತ್ತೆ 2018ರಲ್ಲಿ `ಎ+’ ದರ್ಜೆ ನೀಡಿತು. 2019ರ ಎನ್‍ಐಆರ್‍ಎಫ್ ರ್ಯಾಂಕಿಂಗ್‍ನಲ್ಲಿ ದೇಶದ 4,867 ವಿಶ್ವವಿದ್ಯಾನಿಲಯಗಳ ಪೈಕಿ ಅಕಾಡೆಮಿಗೆ 55ನೇ ಸ್ಥಾನ ದೊರೆತಿದ್ದು, ಎನ್‍ಐಆರ್‍ಎಫ್‍ನ ಮತ್ತೊಂದು ವಿಭಾಗದಲ್ಲಿ 1,479 ವಿಶ್ವವಿದ್ಯಾನಿಲಯಗಳ ಪೈಕಿ ಅಕಾಡೆಮಿಗೆ 34ನೇ ಸ್ಥಾನ ಲಭಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಅದೇ ರೀತಿ ಅಕಾಡೆಮಿಯು ದೇಶದ 113 ವೈದ್ಯಕೀಯ ಸಂಸ್ಥೆಗಳ ಪೈಕಿ 17ನೇ ರ್ಯಾಂಕ್‍ಗೆ ಭಾಜನವಾಗಿದೆ. ಊಟಿಯ ಜೆಎಸ್‍ಎಸ್ ಔಷಧ ಮಹಾವಿದ್ಯಾಲಯ 2018ರಲ್ಲಿ 15ನೇ ರ್ಯಾಂಕ್ ಗಳಿಸಿಕೊಂಡಿದೆ. ಪ್ರಸ್ತುತ ಇದು ದೇಶದ 301 ಔಷಧ ಮಹಾವಿದ್ಯಾಲಯಗಳ ಪೈಕಿ 8ನೇ ಸ್ಥಾನ ಕಾಯ್ದುಕೊಂಡಿದ್ದರೆ, ಮೈಸೂರಿನ ಜೆಎಸ್‍ಎಸ್ ಔಷಧ ಮಹಾವಿದ್ಯಾಲಯ 10ನೇ ಸ್ಥಾನದಲ್ಲಿದೆ ಎಂದರು.
ಒಟ್ಟು 5,500 ವಿದ್ಯಾರ್ಥಿಗಳು ಅಕಾಡೆಮಿಯ ವಿವಿಧ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 567 ಬೋಧಕರು ಹಾಗೂ 700 ಬೋಧಕೇತರ ಸಿಬ್ಬಂದಿಯನ್ನು ಅಕಾಡೆಮಿ ಹೊಂದಿದೆ. ಒಟ್ಟು 741.32 ಲಕ್ಷ ರೂ.ಗಳನ್ನು ಸಂಶೋಧನಾ ಉಪದಾನವಾಗಿ ಹಲವು ರಾಷ್ಟ್ರೀಯ ನಿಧಿ ಸಂಸ್ಥೆಗಳಿಂದ ಸ್ವೀಕರಿಸಲಾಗಿದೆ. ಈವರೆಗೆ 636ಕ್ಕೂ ಹೆಚ್ಚು ವೈದ್ಯಕೀಯ ಸಂಶೋಧನಾ ಪ್ರಕಟಣೆಗಳನ್ನು ಪ್ರಕಟಿಸಲಾಗಿದೆ. ಈ ಪೈಕಿ 5ಕ್ಕೆ ಪೇಟೆಂಟ್ ದೊರೆತಿದೆ. ಉತ್ತಮ ಮೂಲಭೂತ ಸೌಲಭ್ಯ, ಶೈಕ್ಷಣಿಕ ಹಾಗೂ ಸಂಶೋಧನಾ ಸಾಧನೆ ಜೊತೆಗೆ ಸಂಶೋಧನಾ ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗಿದೆ. ಪ್ರಸಕ್ತ ಸಾಲಿನಲ್ಲಿ 15 ಒಡಂಬಡಿಕೆಗಳನ್ನು ಮಾಡಿಕೊಂಡಿದ್ದು, ಈ ಪೈಕಿ 5 ಒಡಂಬಡಿಕೆಗಳು ಅಂತಾರಾಷ್ಟ್ರೀಯ ಮಟ್ಟದ್ದಾಗಿವೆ ಎಂದು ವಿವರಿಸಿದರು.
ಜೆಎಸ್‍ಎಸ್-ಎಹೆಚ್‍ಇಆರ್‍ನ ಕುಲಸಚಿವ ಡಾ.ಬಿ.ಮಂಜುನಾಥ್, ಶೈಕ್ಷಣಿಕ ವಿಭಾಗದ ನಿರ್ದೇಶಕ ಡಾ.ಪಿ.ಎ.ಕುಶಾಲಪ್ಪ, ಜೆಎಸ್‍ಎಸ್ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ರವೀಂದ್ರ ಮತ್ತಿತರರು ಗೋಷ್ಠಿಯಲ್ಲಿದ್ದರು.