ವಿದ್ಯಾರಣ್ಯಪುರಂ: ವಾರದಲ್ಲಿ 12ಕ್ಕೂ ಹೆಚ್ಚು ಕೊಕ್ಕರೆ ಸಾವು-ಹಕ್ಕಿಜ್ವರ ಶಂಕೆ
ಮೈಸೂರು

ವಿದ್ಯಾರಣ್ಯಪುರಂ: ವಾರದಲ್ಲಿ 12ಕ್ಕೂ ಹೆಚ್ಚು ಕೊಕ್ಕರೆ ಸಾವು-ಹಕ್ಕಿಜ್ವರ ಶಂಕೆ

March 8, 2020

ಮೈಸೂರು, ಮಾ.7(ಪಿಎಂ)- ಮೈಸೂರಿನ ವಿದ್ಯಾರಣ್ಯಪುರಂ ಸೇರಿದಂತೆ ನಗರದ ವಿವಿಧೆಡೆ ಕೊಕ್ಕರೆಗಳು ಸಾವನ್ನಪ್ಪುತ್ತಿದ್ದು, ಹಕ್ಕಿ ಜ್ವರದ ಶಂಕೆ ವ್ಯಕ್ತವಾಗಿದೆ. ವಿದ್ಯಾರಣ್ಯಪುರಂ 5ನೇ ಮುಖ್ಯರಸ್ತೆ ಯಲ್ಲಿ ವಾರದಿಂದ ಈವರೆಗೆ 12ಕ್ಕೂ ಹೆಚ್ಚು ಕೊಕ್ಕರೆಗಳು ಸಾವನ್ನಪ್ಪಿವೆ. ಹೀಗಾಗಿ ಹಕ್ಕಿಜ್ವರದ ಶಂಕೆ ವ್ಯಕ್ತವಾಗಿದೆ.

ಶನಿವಾರವೂ 2 ಕೊಕ್ಕರೆ ಮೃತಪಟ್ಟಿವೆ. ಈ ಹಿನ್ನೆಲೆಯಲ್ಲಿ ವಾರ್ಡಿನ ಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ನಾಗರಾಜ್ ಅವರಿಗೆ ವಿಷಯ ತಿಳಿಸಿದರು.

ಬಳಿಕ ಸ್ಥಳಕ್ಕೆ ಆಗಮಿಸಿದ ಡಾ.ನಾಗರಾಜ್, ಕೊಕ್ಕರೆಗಳ ಮೃತ ದೇಹಗಳನ್ನು ಪರಿಶೀಲಿಸಿ, ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಪರೀಕ್ಷೆಗೆಂದು ಕಳುಹಿಸಿಕೊಟ್ಟರು. ಈ ಸಂಬಂಧ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಮ.ವಿ.ರಾಮಪ್ರಸಾದ್, ಮೈಸೂರಿನಲ್ಲಿ ಕೆಲವೆಡೆ ಕೊಕ್ಕರೆಗಳು ಸಾವನ್ನಪಿವೆ. ವಿದ್ಯಾರಣ್ಯಪುರಂನಲ್ಲಿ ವಾರದಿಂದ ಕೊಕ್ಕರೆಗಳು ಸಾವನ್ನಪ್ಪುತ್ತಿವೆ. ಹೀಗಾಗಿ ಸಹಜವಾಗಿಯೇ ಹಕ್ಕಿಜ್ವರ ಭೀತಿ ಎದುರಾಗಿದೆ. ಮೈಸೂರಿನಲ್ಲಿ ಮೃಗಾಲಯದ ಹಕ್ಕಿಗಳು ಸೇರಿದಂತೆ ನಗರದಲ್ಲಿರುವ ಇನ್ನಿತರ ಪಕ್ಷಿ ಸಂಕುಲಕ್ಕೆ ಅಪಾಯ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.

Translate »