ಮೈಸೂರು, ಮಾ.7(ಪಿಎಂ)- ಮೈಸೂ ರಿನ ಕೆಆರ್ ಆಸ್ಪತ್ರೆಯಲ್ಲಿನ ಚೆಲುವಾಂಬ ಆಸ್ಪತ್ರೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಶನಿವಾರ ಭೇಟಿ ನೀಡಿದಾಗ ರೋಗಿಗಳ ಸಂಬಂಧಿಕರು ಆಸ್ಪತ್ರೆಯಲ್ಲಿ ರುವ ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿ ಟ್ಟರು. ಸಚಿವರು ಆಸ್ಪತ್ರೆ ಆವರಣಕ್ಕೆ ಆಗಮಿಸಿ ಕಾರಿನಿಂದ ಇಳಿಯುತ್ತಿದ್ದಂತೆಯೇ ಸಚಿವರನ್ನು ಸುತ್ತುವರೆದು ಅಳಲು ತೋಡಿಕೊಂಡರು.
ಅನೇಕರು ಒಮ್ಮೆಗೇ ಸಮಸ್ಯೆಗಳನ್ನು ಹೇಳಲು ಮುಂದಾಗಿದ್ದರಿಂದ ಕೆಲಕಾಲ ಗೊಂದಲ ಉಂಟಾಯಿತು. ಸಚಿವರು ಅವ ರನ್ನು ಸಮಾಧಾನಪಡಿಸಿ ಒಬ್ಬೊಬ್ಬರಾಗಿ ಹೇಳುವಂತೆ ಸೂಚಿಸಿದರು. ಬಳಿಕ ಕೆಲ ವರು ಹೇಳಿದ ಸಮಸ್ಯೆಗಳನ್ನು ಸಚಿವರು ಸಮಾಧಾನದಿಂದ ಆಲಿಸಿದರು.
ವಾರ್ಡ್‍ನಲ್ಲಿ ರೋಗಿ ಒಬ್ಬರೇ ಇದ್ದರೂ ಜತೆಗಿರಲು ಸಂಬಂಧಿಕರನ್ನು ಭದ್ರತಾ ಸಿಬ್ಬಂದಿ ಒಳಗೆ ಬಿಡುವುದಿಲ್ಲ. ತಾವೇ ಒಯ್ದು ಕೊಡುತ್ತೇವೆ ಎನ್ನುತ್ತಾರೆ. ರೋಗಿಗಳಿಗೆ ಸಕಾಲದಲ್ಲಿ ಆಹಾರ ಕೊಡಲು ಆಗುತ್ತಿಲ್ಲ. ಅಲ್ಲದೆ, ಭದ್ರತಾ ಸಿಬ್ಬಂದಿ ಪರೋಕ್ಷವಾಗಿ ಹಣಕ್ಕೆ ಬೇಡಿಕೆಯಿಡುತ್ತಾರೆ ಎಂದು ಹೊಸ ಕೋಟೆ ಪುಟ್ಟರಾಜು ಮತ್ತು ನಂಜನ ಗೂಡಿನ ಗುರುಸ್ವಾಮಿ ಎಂಬುವವರು ಸಚಿವರಲ್ಲಿ ದೂರಿದರು.
ಅಲ್ಲದೇ, ರೋಗಿಗೆ ಏನು ಸಮಸ್ಯೆಯಾ ಗಿದೆ ಎಂಬುದನ್ನು ವೈದ್ಯರು ಹೇಳುವುದೇ ಇಲ್ಲ. ಆ ಬಗ್ಗೆ ಪ್ರಶ್ನಿಸಿದರೆ ನಿರ್ಲಕ್ಷ್ಯ ತೋರು ತ್ತಾರೆ. ಬೇಕಿದ್ದರೆ ಬೇರೆ ಆಸ್ಪತ್ರೆಗೆ ಹೋಗಿ ಎಂದು ಉಡಾಫೆಯಿಂದ ಮಾತನಾಡು ತ್ತಾರೆ. ಖಾಸಗಿ ಆಸ್ಪತ್ರೆಗೆ ಹೋಗುವ ಶಕ್ತಿ ಇದ್ದರೆ ಇಲ್ಲಿಗೇಕೆ ಬರುತ್ತಿದ್ದೆವು? ಎಂದು ಹಲವರು ಅಲವತ್ತುಕೊಂಡರು.
ಮುಖ್ಯವಾದ ವೈದ್ಯಕೀಯ ಪರೀಕ್ಷೆ ಮತ್ತು ಔಷಧವೇ ಆಸ್ಪತ್ರೆಯಲ್ಲಿ ಸಿಗುವುದಿಲ್ಲ. ಇದಕ್ಕೆ ಹೊರಗಡೆಯೇ ಹೋಗಬೇಕು. ಇಲ್ಲಿನ ಸಮಸ್ಯೆಗಳನ್ನು ಆದಷ್ಟೂ ಬೇಗ ಪರಿಹರಿಸಿ ಎಂದು ರೋಗಿಗಳ ಸಂಬಂಧಿಕರು ಸಚಿವ ರಲ್ಲಿ ಮನವಿ ಮಾಡಿದರು. ಸಮಸ್ಯೆಗಳನ್ನು ಆಲಿಸಿದ ಸಚಿವರು, ಸಮಸ್ಯೆ ಬಗೆಹರಿ ಸುವ ಭರವಸೆ ನೀಡಿದರು.
ವೈದ್ಯರಿಗೆ ತರಾಟೆ: ಪ್ರತಿ ವಾರ್ಡ್‍ಗೂ ಭೇಟಿ ನೀಡಿದ ಸಚಿವರು, ರೋಗಿಗಳಿಂದ ಸಮಸ್ಯೆ ಆಲಿಸುತ್ತಿದ್ದರು. ಈ ವೇಳೆ ಗುಂಡ್ಲು ಪೇಟೆಯ ಮಹದೇವಸ್ವಾಮಿ ಎಂಬು ವವರು `ನಮ್ಮ ಮಗುವಿನ ಕಾಲು ಊತವಾ ಗಿದೆ. ಕೀವು ಸುರಿಯುತ್ತಿದ್ದರೂ ವೈದ್ಯರು ಸರಿಯಾಗಿ ಸ್ಪಂದಿಸುತ್ತಿಲ್ಲ. ಚುಚ್ಚುಮದ್ದು ಕೊಡುತ್ತೇವೆ ಎಂದವರು ಇನ್ನೂ ಕೊಟ್ಟಿಲ್ಲ’ ಎಂದು ದೂರಿದರು. ಇದಕ್ಕೆ ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಮಗು ವಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿ ದರು. ಇದೇ ವೇಳೆ ಕೆಲವೆಡೆ ಹಾಸಿಗೆಗಳು ಹಾಳಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಇದೇ ವೇಳೆ ಕೆಆರ್ ಆಸ್ಪತ್ರೆ ಆವರಣದಲ್ಲಿ ನಡೆದ ಸರಳ ವೇದಿಕೆ ಕಾರ್ಯಕ್ರಮದಲ್ಲಿ ವೈದ್ಯರುಗಳನ್ನುದ್ದೇಶಿಸಿ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಅತ್ಯಂತ ಹಳೆಯ ವೈದ್ಯ ಕೀಯ ಕಾಲೇಜು ಎಂಬ ಹೆಗ್ಗಳಿಕೆಗೆ ಮೈಸೂರು ವೈದ್ಯಕೀಯ ಕಾಲೇಜು ಹೆಸರಾಗಿದೆ. ಅಲ್ಲದೆ, ರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟ ಕಾಪಾಡಿ ಕೊಂಡಿದೆ. ವೈದ್ಯಕೀಯ ವಿದ್ಯಾರ್ಥಿಗಳು ವೈದ್ಯರ ಜೊತೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ವೈದ್ಯರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದರೆ ಯಾವ ತುರ್ತು ಚಿಕಿತ್ಸೆಯೂ ಅಸಾಧ್ಯವಲ್ಲ. ಶ್ರದ್ಧೆ ಹಾಗೂ ಮಾನವೀಯ ದೃಷ್ಟಿಯಿಂದ ನಾವು ಕೆಲಸ ಮಾಡಬೇಕು. ರಾಜ್ಯದಲ್ಲಿರುವ ಪ್ರತಿ ಸರ್ಕಾರಿ ವೈದ್ಯಕೀಯ ಸಂಸ್ಥೆಯೂ ಇಂದು ಉತ್ತಮ ಚಿಕಿತ್ಸೆ ನೀಡು ವಲ್ಲಿ ಯಶಸ್ಸು ಕಾಣಬೇಕಿದೆ ಎಂದರು.
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಡೀನ್ ಮತ್ತು ನಿರ್ದೇಶಕ ಡಾ.ಸಿ.ಪಿ.ನಂಜರಾಜ್, ಚೆಲುವಾಂಬ ಆಸ್ಪತ್ರೆ ಮುಖ್ಯಸ್ಥೆ ಡಾ.ಪ್ರಮೀಳಾ ಸೇರಿ ದಂತೆ ವೈದ್ಯರು, ಸಿಬ್ಬಂದಿ ಹಾಗೂ ವೈದ್ಯ ಕೀಯ ವಿದ್ಯಾರ್ಥಿಗಳು ಹಾಜರಿದ್ದರು.
ಸರ್ಕಾರಿ ವೈದ್ಯಕೀಯ ಕಾಲೇಜು-ಆಸ್ಪತ್ರೆಗಳಿಗೆ `ಎನ್‍ಎಬಿಹೆಚ್’ ಮಾನ್ಯತೆ ದೊರಕಿಸಲು ಪ್ರಯತ್ನ
ಮೈಸೂರು: ಮೈಸೂರು ವೈದ್ಯಕೀಯ ಕಾಲೇಜು, ಕೆಆರ್ ಆಸ್ಪತ್ರೆ ಒಳಗೊಂಡಂತೆ ರಾಜ್ಯದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಿಗೆ `ಎನ್‍ಎಬಿಹೆಚ್’ ಮಾನ್ಯತೆ (ರಾಷ್ಟ್ರೀಯ ಮಾನ್ಯತೆ ಮಂಡಳಿ) ದೊರಕಿಸಿಕೊಡುವ ಉದ್ದೇಶ ಹೊಂದಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಚೆಲುವಾಂಬ ಆಸ್ಪತ್ರೆ ಪರಿಶೀಲನೆ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಎನ್‍ಎಬಿಹೆಚ್ ಮಾನ್ಯತೆ ದೊರಕಿಸಿದರೆ ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲದಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಗುಣಮಟ್ಟದ ಸೇವೆ ಲಭ್ಯವಾಗಲಿದೆ ಎಂದರು.
ಕೆಆರ್ ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆಗಿರುವ ಒತ್ತಡ ಗಮನಕ್ಕೆ ಬಂದಿದೆ. ಇಲ್ಲಿ ಅನೇಕ ವೈದ್ಯಕೀಯ ಸೌಲಭ್ಯಗಳ ಕೊರತೆ ಇದೆ. ಈ ಆಸ್ಪತ್ರೆಗಳದ್ದು ಪಾರಂಪರಿಕ ಕಟ್ಟಡ. ಇಲ್ಲಿ ಹೊಸ ಕಟ್ಟಡ ಕಟ್ಟಲು ಅವಕಾಶವಿಲ್ಲ. ಇರುವ ಕಟ್ಟಡವನ್ನು ದುರಸ್ತಿಪಡಿಸಿ ಉತ್ತಮ ಸೌಲಭ್ಯ ದೊರೆಯುವಂತೆ ಮಾಡಬೇಕು. ಈಗಾಗಲೇ ಜಿಲ್ಲಾ ಆಸ್ಪತ್ರೆ ಉದ್ಘಾಟನೆಯಾಗಿದೆ. ಇದರಿಂದ ಕೆಆರ್ ಆಸ್ಪತ್ರೆಯ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ತಿಳಿಸಿದರು.
ಶೀಘ್ರವೇ ನೇಮಕಾತಿ: ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಅಧೀನದ ಕೆಆರ್ ಆಸ್ಪತ್ರೆ, ಚೆಲುವಾಂಬ ಮಕ್ಕಳ ಆಸ್ಪತ್ರೆಯಲ್ಲಿ `ಸಿ’ ಮತ್ತು `ಡಿ’ ಗ್ರೂಪ್ ನೌಕರರ ಕೊರತೆ ಇದೆ. ಶೀಘ್ರವೇ ನೇಮಕಾತಿ ನಡೆಸ ಲಾಗುವುದು ಎಂದು ಭರವಸೆ ನೀಡಿದರು.