ಬೆಳೆ ನಷ್ಟದ ವರದಿ ಸೆ.12ರೊಳಗೆ ಸಲ್ಲಿಸಲು ತ.ಮ.ವಿಜಯ ಭಾಸ್ಕರ್ ಸೂಚನೆ
ಕೊಡಗು

ಬೆಳೆ ನಷ್ಟದ ವರದಿ ಸೆ.12ರೊಳಗೆ ಸಲ್ಲಿಸಲು ತ.ಮ.ವಿಜಯ ಭಾಸ್ಕರ್ ಸೂಚನೆ

September 9, 2018

ಮಡಿಕೇರಿ: ತೀವ್ರ ಅತಿವೃಷ್ಟಿಯಿಂದ ಹಾನಿಯಾಗಿರುವ ಕೃಷಿ, ತೋಟಗಾರಿಕೆ, ಕಾಫಿ, ಸಾಂಬಾರ ಸೇರಿದಂತೆ ವಿವಿಧ ಬೆಳೆಗಳ ನಷ್ಟದ ವರದಿಯನ್ನು ಸೆಪ್ಟೆಂಬರ್ 12ರೊಳಗೆ ಸರ್ಕಾರಕ್ಕೆ ಸಲ್ಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ತ.ಮ.ವಿಜಯ ಭಾಸ್ಕರ್ ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಕೃತಿ ವಿಕೋಪದಿಂದ ಉಂಟಾಗಿರುವ ಹಾನಿ ಸಂಬಂಧ ಇದುವರೆಗೆ ಕೈಗೊಂಡಿರುವ ಕ್ರಮಗಳು ಹಾಗೂ ಮುಂದೆ ಆಗಬೇಕಿರುವ ಕಾರ್ಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.

ಬೆಳೆ ನಷ್ಟ ಸಂಬಂಧ ಸರ್ಕಾರಕ್ಕೆ ಸೆಪ್ಟೆಂಬರ್ 15 ರೊಳಗೆ ವರದಿ ಸಲ್ಲಿಸಬೇಕಿರುವುದರಿಂದ, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸೆಪ್ಟೆಂಬರ್ 12 ರೊಳಗೆ ಜಿಲ್ಲಾಡಳಿತಕ್ಕೆ ಸಂಪೂರ್ಣ ವರದಿ ನೀಡಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಸೂಚನೆ ನೀಡಿದರು.

ಪ್ರಕೃತಿ ವಿಕೋಪದಿಂದಾಗಿ ಹಲವು ಗ್ರಾಮಗಳು ವಿದ್ಯುತ್ ಸಂಪರ್ಕ ಕಡಿದುಕೊಂಡಿದ್ದು, ಇಂತಹ ಅತಿವೃಷ್ಟಿ ಪ್ರದೇಶಗಳಿಗೆ ಸೆಪ್ಟೆಂಬರ್ 12 ರೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸೆಸ್ಕ್ ಎಂಜಿನಿಯರ್‌ಗೆ ತ.ಮ.ವಿಜಯ ಭಾಸ್ಕರ ಅವರು ಸ್ಪಷ್ಟ ಸೂಚನೆ ನೀಡಿದರು. ಸಂತ್ರಸ್ತ ಕುಟುಂಬಗಳಿಗೆ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಕಲ್ಪಿಸಬೇಕು. ಈ ಕಾರ್ಯದಲ್ಲಿ ವಿಳಂಬ ಮಾಡಬಾರದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ನಿರ್ದೇ ಶನ ನೀಡಿದರು.

ವಿಶೇಷ ಅನ್ನಭಾಗ್ಯ ಯೋಜನೆಯಡಿ ಆಹಾರ ಪದಾರ್ಥ ದೊರೆತಿದೆ. ಆದರೆ ಪ್ರತಿ ತಿಂಗಳು ನೀಡುವ 35 ಕೆ.ಜಿ.ಅಕ್ಕಿ ಇನ್ನೂ ತಲುಪಿಲ್ಲ ಎಂಬ ದೂರುಗಳು ಹಟ್ಟಿಹೊಳೆ ಗ್ರಾಮದ ಸಂತ್ರಸ್ತರಿಂದ ಕೇಳಿಬಂದಿದ್ದು, ಕೂಡಲೇ ಪ್ರತಿ ತಿಂಗಳು ನೀಡುವ ಪಡಿತರ ಆಹಾರವನ್ನು ಪೂರೈಸುವಂತೆ ಆಹಾರ ಇಲಾಖೆ ಉಪ ನಿರ್ದೇಶಕರಿಗೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಗ್ರಾಮೀಣ ರಸ್ತೆಯನ್ನು ಆದಷ್ಟು ಶೀಘ್ರ ವೈಜ್ಞಾನಿಕವಾಗಿ ನಿರ್ಮಾಣ ಮಾಡಬೇಕು. ಆ ನಿಟ್ಟಿನಲ್ಲಿ ಸಾರ್ವಜನಿಕ ಸಂಪರ್ಕಕ್ಕೆ ಯಾವುದೇ ರೀತಿಯಲ್ಲಿ ತೊಂದರೆ ಉಂಟಾಗದಂತೆ ಗಮನಹರಿಸಬೇಕು ಎಂದು ಟಿ.ಎಂ.ವಿಜಯ ಭಾಸ್ಕರ್ ಅವರು ಸೂಚನೆ ನೀಡಿದರು. ಸಂತ್ರಸ್ತ ಕುಟುಂಬಗಳಿಗೆ ಬೇಗ ಮನೆ ನಿರ್ಮಿಸಿ ಕೊಡಬೇಕಿದೆ. ಆ ನಿಟ್ಟಿನಲ್ಲಿ ಜಾಗ ಎಲ್ಲಿ ಗುರ್ತಿಸಲಾಗಿದೆ? ಗುರುತಿಸಿರುವ ಸ್ಥಳಕ್ಕೆ ಸಂತ್ರಸ್ತರು ತೆರಳುತ್ತಾರೆಯೇ? ಯಾವ ಮಾದರಿಯ ಮನೆ ನಿರ್ಮಾಣ ಮಾಡಬೇಕು ಅಥವಾ ಹಣ ನೀಡದರೆ ಸಂತ್ರ ಸ್ತರೇ ಮನೆ ನಿರ್ಮಿಸಿಕೊಳ್ಳಲು ಸಿದ್ಧರಿದ್ದಾ ರೆಯೇ? ಎಂಬ ಬಗ್ಗೆ ಮಾಹಿತಿ ಸಂಗ್ರಹಿಸ ಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಮಾತನಾಡಿ ಶಾಶ್ವತ ಮನೆ ಕಲ್ಪಿಸುವ ತನಕ ಬಾಡಿಗೆ ಮನೆಯಲ್ಲಿ ವಾಸಿಸಲು ಹಣ ಭರಿಸುವಂತಾಗಬೇಕು ಎಂಬ ಬಗೆಯೂ ಕೇಳಿ ಬರುತ್ತಿದೆ ಎಂದು ಮುಖ್ಯ ಕಾರ್ಯದರ್ಶಿ ಅವರ ಗಮನಕ್ಕೆ ತಂದರು. ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದರು.

ಜಿಪಂ ಸಿಇಒ ಪ್ರಶಾಂತ್ ಕುಮಾರ್ ಮಿಶ್ರ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು ಅವರು ಹಲವು ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠ್ಠಾಧಿ ಕಾರಿ ಸುಮನ್ ಡಿ.ಪೆನ್ನೇಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ನಾನಾ ಇಲಾಖೆ ಅಧಿಕಾರಿಗಳು ಇದ್ದರು.

Translate »