ಬೆಂಗಳೂರು,ಫೆ.22-ಮಂತ್ರಿಸ್ಥಾನ ಸಿಗದ ಅತೃಪ್ತ ಬಿಜೆಪಿ ಶಾಸಕರು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದರು. ಎಂಬುದರ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂ ರಪ್ಪ ಪುತ್ರ ವಿಜಯೇಂದ್ರ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದು ತೀವ್ರ ಕುತೂಹಲ ಮೂಡಿಸಿದೆ.
ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಇದು ಬಿಜೆಪಿ ಸೇರಿದಂತೆ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಸಚಿವ ಸಂಪುಟ ವಿಸ್ತರಣೆ ಹಿಂದಿನ ದಿನವೂ ವಿಪಕ್ಷ ನಾಯಕ ಸಿದ್ದ ರಾಮಯ್ಯ ಅವರನ್ನು ವಿಜಯೇಂದ್ರ ಅವರು ಭೇಟಿ ಮಾಡಿದ್ದರು ಎಂಬ ಮಾತು ಬಿಜೆಪಿ ವಲಯದಲ್ಲಿಯೇ ಹರಿದಾಡಿತ್ತು. ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನ್ಮ ದಿನದ ಅಭಿನಂದನಾ ಕಾರ್ಯಕ್ರಮಕ್ಕೆ ಆಹ್ವಾನಿಸುವ ನೆಪದಲ್ಲಿ ಸಿದ್ದರಾಮಯ್ಯ ಅವರನ್ನು ವಿಜಯೇಂದ್ರ ಅವರು ಭೇಟಿ ಮಾಡಿರುವುದು ಬೇರೆಯದ್ದೇ ಮುನ್ಸೂಚನೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಒಂದೊಮ್ಮೆ ಸರ್ಕಾರಕ್ಕೆ ಸಂಕಷ್ಟ ಬಂದರೆ ಸಿದ್ದರಾಮಯ್ಯ ಅವರು ತಟಸ್ಥ ರಾಗಿ ಉಳಿಯುತ್ತಾರೆ. ಯಾವುದೇ ಕಾರಣಕ್ಕೂ ಜೆಡಿಎಸ್ ನಿಲುವಿಗೆ ಬೆಂಬಲ ಕೊಡಲ್ಲ ಎನ್ನುವುದು ಇದಕ್ಕೆ ಕಾರಣ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹುಟ್ಟು ಹಬ್ಬ ಇದೇ ಫೆ.27ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಇದೇ ಸಮಾರಂಭಕ್ಕೆ ಆಹ್ವಾನಿಸಲು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ವಿಜಯೇಂದ್ರ ಭೇಟಿ ಮಾಡಿದ್ದಾರೆ. ಜೊತೆಗೆ ಸರ್ಕಾರದ ಬಗ್ಗೆಯೂ ಚರ್ಚೆ ನಡೆಸಿ ದ್ದಾರೆ. ಬಿಜೆಪಿ ಅತೃಪ್ತ ಅಸಮಾಧಾನಿತ ಶಾಸಕರು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದರು. ಸರ್ಕಾರ ಕೆಡವಲು ನನ್ನ ಸಹಾಯ ಕೇಳಬೇಡಿ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದರು ಎನ್ನಲಾಗಿತ್ತು. ಆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹಾಗೂ ವಿಜಯೇಂದ್ರ ಅವರ ಭೇಟಿಗೆ ಮಹತ್ವ ಬಂದಿದೆ.