ಪೆರ್ಪಣ ನೋಡಿ ಚಿರತೆ ಎಂದು ಬೆಚ್ಚಿದ ಗ್ರಾಮಸ್ಥರು
ಕೊಡಗು

ಪೆರ್ಪಣ ನೋಡಿ ಚಿರತೆ ಎಂದು ಬೆಚ್ಚಿದ ಗ್ರಾಮಸ್ಥರು

January 8, 2020

ಗೋಣಿಕೊಪ್ಪಲು, ಜ.7- ಚಿರತೆಯನ್ನೇ ಹೋಲುವ ಅಪರೂಪದ ವನ್ಯಜೀವಿ ಪೆರ್ಪಣ ಅಥವಾ ಲಿಪರ್ಡ್ ಕ್ಯಾಟ್ ಅನ್ನು ಕಂಡು ಚಿರತೆ ಎಂದು ಭಾವಿಸಿ ಗ್ರಾಮಸ್ಥರು ಆತಂಕಗೊಂಡ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

ದ.ಕೊಡಗಿನ ಭಾಗದಲ್ಲಿ ರೈತರ ಭತ್ತದ ಗದ್ದೆ, ಕಾಫಿ ತೋಟಗಳಲ್ಲಿ ಕಂಡು ಬರುತ್ತಿದ್ದ ವನ್ಯ ಜೀವಿಗಳ ಸಾಲಿಗೆ ಇದೀಗ ಚಿರತೆ ಮಾದರಿಯ ಪೆರ್ಪಣ(ಆಡು ಭಾಷೆ) ಸೇರಿಕೊಂಡಿದೆ. ಸಮೀಪದ ಅರಣ್ಯದಿಂದ ಪೆರ್ಪಣ ನೀರನ್ನು ಅರಸುತ್ತ ಕಾಫಿ ತೋಟದ ಮಧ್ಯೆ ಇರುವ ರೈತನ ಮನೆಯ ಬಳಿ ತೆರಳಿದೆ. ಈ ವೇಳೆ ಮನೆಯ ವರು ಭಯಗೊಂಡಿದ್ದಾರೆ. ಆದರೂ ಧೈರ್ಯದಿಂದ ದಣಿದು ಬಂದಿದ್ದ ಪೆರ್ಪಣದ ಬಾಯಾರಿಕೆಯನ್ನು ತಣಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರೊಬ್ಬರ ಕಾಫಿ ತೋಟದ ಮಧ್ಯೆ ಇರುವ ಮನೆಯಲ್ಲಿ ಸಮೀಪದ ಬ್ರಹ್ಮಗಿರಿ ಅರಣ್ಯ ಪ್ರದೇಶದಿಂದ ಬಾಯಾರಿಕೆ ಯನ್ನು ನಿವಾರಿಸಿಕೊಳ್ಳಲು ನೀರು ಹುಡುಕುತ್ತ ಅಂದಾಜು 2 ವರ್ಷದ ಪ್ರಾಯದ ಪೆರ್ಪಣ ಹೆಜ್ಜೆ ಹಾಕುತ್ತ ಈ ರೈತನ ಮನೆಯತ್ತ ಧಾವಿಸಿದೆ. ಮನೆಯೊಡತಿ ವಿಶೇಷ ಅತಿಥಿಯನ್ನು ನೀರು ಕೊಡುವ ಮೂಲಕ ಸತ್ಕರಿಸಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ತನ್ನ ಮೇಲೆ ಈ ಪ್ರಾಣಿ ಎರಗಬಹುದೆಂಬ ಭಯವಿದ್ದರೂ ಲೆಕ್ಕಿಸದೆ ಧೈರ್ಯದಿಂದ ಬಿಂದಿಗೆಯಲ್ಲಿದ್ದ ನೀರನ್ನು ಪಾತ್ರೆಗೆ ಸುರಿದು ದಣಿದು ಬಂದಿದ್ದ ಈ ಪ್ರಾಣಿಯ ಬಾಯಾರಿಕೆ ಯನ್ನು ತಣಿಸಿದ್ದಾರೆ. ಹೊಟ್ಟೆ ತುಂಬ ನೀರು ಕುಡಿದ ಈ ಪ್ರಾಣಿಯು ಕಾಫಿ ತೋಟದಲ್ಲಿ ಮಾಯವಾಗಿ ಸಮೀಪದ ಅರಣ್ಯವನ್ನು ಪ್ರವೇಶಿಸಿದೆ. ಈ ಪೆರ್ಪಣ ಎಂಬ ಪ್ರಾಣಿಯು ಚಿರತೆ ಮಾದರಿಯನ್ನು ಹೋಲುತ್ತದೆ. ಮಾತ್ರವಲ್ಲದೇ, ನಾಯಿಗಳನ್ನು ಹೆಚ್ಚಾಗಿ ಬೇಟೆಯಾ ಡುತ್ತ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತದೆ. ಕಪ್ಪು ನಾಯಿಯನ್ನು ಹೆಚ್ಚಾಗಿ ಇಷ್ಟ ಪಡುವ ಈ ಪೆರ್ಪಣ, ನಾಯಿಯ ಕುತ್ತಿಗೆ ಭಾಗಕ್ಕೆ ಕಚ್ಚುವ ಮೂಲಕ ಇದನ್ನು ದೂರದ ಸ್ಥಳಕ್ಕೆ ಎಳೆದೊಯ್ದು ಯಾರು ಇಲ್ಲದ ಪ್ರದೇಶದಲ್ಲಿ ತಿಂದು ಮುಗಿಸುತ್ತದೆ. ರೈತರು ಸಾಕಿರುವ ಕೋಳಿ ಗೂಡಿಗೂ ರಾತ್ರಿ ವೇಳೆಯಲ್ಲಿ ಲಗ್ಗೆ ಇಡುವ ಈ ಪ್ರಾಣಿಯು ಕೋಳಿಯನ್ನು ಕೂಡ ಆಹಾರವನ್ನಾಗಿ ತಿನ್ನುತ್ತದೆ.

Translate »