ಸಾಮೂಹಿಕ ವರ್ಗಾವಣೆ ಖಂಡಿಸಿ ವಿನ್ಯಾಸ್ಇ ನ್ನೋವೇಟಿವ್ ಟೆಕ್ನಾಲಜೀಸ್ ಕಾರ್ಮಿಕರ ಪ್ರತಿಭಟನೆ
ಮೈಸೂರು

ಸಾಮೂಹಿಕ ವರ್ಗಾವಣೆ ಖಂಡಿಸಿ ವಿನ್ಯಾಸ್ಇ ನ್ನೋವೇಟಿವ್ ಟೆಕ್ನಾಲಜೀಸ್ ಕಾರ್ಮಿಕರ ಪ್ರತಿಭಟನೆ

July 14, 2018

ಮೈಸೂರು: ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್ ಆಡಳಿತ ವರ್ಗವು ಕಾನೂನು ಬಾಹಿರವಾಗಿ ಕಾರ್ಮಿಕರನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಿರುವುದನ್ನು ಖಂಡಿಸಿ ಮೈಸೂರು ಡಿಸ್ಟ್ರಿಕ್ಟ್ ಜನರಲ್ ಎಂಪ್ಲಾಯಿಸ್ ಯೂನಿಯನ್ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ವಿನ್ಯಾಸ್ ಇನ್ನೋವೇಟಿವ್ ಕಂಪೆನಿಯಲ್ಲಿ 200 ಮಂದಿ ಮಹಿಳೆಯರು ಸೇರಿದಂತೆ 450 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಎಲ್ಲರೂ ಅನುಭವವುಳ್ಳ ನುರಿತ ಕಾರ್ಮಿಕರಾಗಿದ್ದಾರೆ. ಹಾಗಾಗಿ ಈ ಕಂಪೆನಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಎಲೆಕ್ಟ್ರಾನಿಕ್ಸ್ ಬೋಡ್ರ್ಸ್ ತಯಾರಿಕೆಯಲ್ಲಿ ಮೊದಲ ಸ್ಥಾನದಲ್ಲಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಜತೆಗೆ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ವಿದೇಶಗಳಿಗೆ ರಫ್ತು ಮಾಡಿ ಕೋಟ್ಯಾಂತರ ಲಾಭ ಗಳಿಸುತ್ತಿದೆ. ಆದರೂ ಕಾರ್ಮಿಕರಿಗೆ ಕಡಿಮೆ ವೇತನ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಖಾಯಂ ಕಾರ್ಮಿಕರನ್ನು ಕೆಲಸದಿಂದ ತೆಗೆದು ಆ ಸ್ಥಾನಕ್ಕೆ ಗುತ್ತಿಗೆ ಕಾರ್ಮಿಕರನ್ನು ಕಡಿಮೆ ಸಂಬಳಕ್ಕೆ ನೇಮಿಸಿಕೊಳ್ಳುತ್ತಿದ್ದಾರೆ. 2 ವರ್ಷದ ನಂತರ ಅವರನ್ನು ಕೆಲಸದಿಂದ ತೆಗೆದುಹಾಕಿ ಮತ್ತೆ ಹೊಸಬರನ್ನು ನೇಮಿಸಿಕೊಳ್ಳುವ ಮೂಲಕ ಕಾರ್ಮಿಕರಿಗೆ ಮೋಸ ಮಾಡುತ್ತಿದ್ದಾರೆ. ಇದೇ ರೀತಿ 500-600 ಮಂದಿ ಗುತ್ತಿಗೆ ಕಾರ್ಮಿಕರನ್ನು ಹಲವಾರು ವರ್ಷಗಳಿಂದ ದುಡಿಸಿಕೊಂಡು ಕೆಲಸದಿಂದ ತೆಗೆದು ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಖಾಯಂ ಕಾರ್ಮಿಕರನ್ನು ಕೆಲಸದಿಂದ ತೆಗೆಯುತ್ತಿರುವುದನ್ನು ತಡೆಗಟ್ಟಲು ಸಂಘವನ್ನು ರಚಿಸಿಕೊಂಡು ಕಾನೂನುಬದ್ದ ಸೌಲಭ್ಯಗಳನ್ನು ನೀಡುವಂತೆ ಬೇಡಿಕೆ ಇಟ್ಟಿದ್ದೆವು. ಆದರೆ, ಇಂದು ಆಡಳಿತ ವರ್ಗವು 18ಮಂದಿ ಮಹಿಳೆಯರು ಸೇರಿದಂತೆ 90 ಮಂದಿ ಕಾರ್ಮಿರನ್ನು ಆಂಧ್ರಪ್ರದೇಶದ ತಿರುಪತಿಗೆ ವರ್ಗಾವಣೆ ಮಾಡಿದ್ದು, ಕಂಪೆನಿ ನೀಡುತ್ತಿರುವ 10 ಸಾವಿರ ವೇತನದಲ್ಲಿ ಕುಟುಂಬದೊಂದಿಗೆ ತೆರಳಿ ಜೀವನ ನಡೆಸುವುದು ದುಸ್ತರವಾಗಿದೆ. ಹಾಗಾಗಿ ಅಕ್ರಮ ವರ್ಗಾವಣೆ ನಿಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಉಪವಾಸ ಸತ್ಯಾಗ್ರಹ: ವರ್ಗಾವಣೆಯನ್ನು ರದ್ದುಪಡಿಸು ವರೆಗೂ ಇಂದಿನಿಂದ ಇನ್ನೋವೇಟಿವ್ ಕಂಪೆನಿ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದರು.

ಮೈಸೂರು ಡಿಸ್ಟ್ರಿಕ್ಟ್ ಜನರಲ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಎಂ.ಕೆ.ಶಶಿಕುಮಾರ್, ಉಪಾಧ್ಯಕ್ಷ ಪಿ.ಎನ್.ಸತೀಶ್, ಕಾರ್ಯದರ್ಶಿ ಸುಷ್ಮ ಆರ್.ಗೌಡ, ಗಿರೀಶ್, ಸಂದೀಶ್, ಚಂದ್ರ, ಮುರಳೀಧರ ಪೇಶ್ವ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್ ಆಡಳಿತ ವರ್ಗವು ಕಾನೂನು ಬಾಹಿರವಾಗಿ ಕಾರ್ಮಿಕರನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಿರುವುದನ್ನು ಖಂಡಿಸಿ ಮೈಸೂರು ಡಿಸ್ಟ್ರಿಕ್ಟ್ ಜನರಲ್ ಎಂಪ್ಲಾಯಿಸ್ ಯೂನಿಯನ್ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Translate »