ವಿರಾಜಪೇಟೆ ವಕೀಲನಿಗೆ ಕೊಲೆ ಬೆದರಿಕೆ: ಪಪಂ ಮಾಜಿ ಅಧ್ಯಕ್ಷ ಸೇರಿ ಇಬ್ಬರ ವಿರುದ್ಧ ಕೇಸ್
ಕೊಡಗು

ವಿರಾಜಪೇಟೆ ವಕೀಲನಿಗೆ ಕೊಲೆ ಬೆದರಿಕೆ: ಪಪಂ ಮಾಜಿ ಅಧ್ಯಕ್ಷ ಸೇರಿ ಇಬ್ಬರ ವಿರುದ್ಧ ಕೇಸ್

September 23, 2018

ವಿರಾಜಪೇಟೆ: ವಿರಾಜಪೇಟೆ ಪಟ್ಟಣ ಪಂಚಾಯಿತಿಯ 3ನೇ ವಾರ್ಡ್‍ನಲ್ಲಿ ಸ್ಪರ್ಧಿಸಲು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿರುವ ವಕೀಲರೊಬ್ಬರಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇರೆಗೆ ಪಪಂ ಮಾಜಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ ಸೇರಿದಂತೆ ಇಬ್ಬರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಿಸಿದ್ದ ವೇಳೆ ವಿರಾಜಪೇಟೆ ಪಪಂಗೂ ಸಹ ಚುನಾವಣೆ ಘೋಷಿಸಿ, ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿತ್ತು. ಆದರೆ ಕೊಡಗಿನಲ್ಲಿ ಭೂ ಕುಸಿತ ಹಾಗೂ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಇಲ್ಲಿನ ಚುನಾವಣೆ ಮುಂದೂಡಲಾಗಿದೆ.ಆ ಸಂದರ್ಭದಲ್ಲಿ ಪಪಂನ 3ನೇ ವಾರ್ಡ್‍ಗೆ ಪಕ್ಷೇತರ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಿದ್ದ ವಕೀಲ ಟಿ.ಪಿ.ಕೃಷ್ಣ ಅವರಿಗೆ ಸಚಿನ್ ಕುಟ್ಟಪ್ಪ ಪರವಾಗಿ ಅನಾಮಧೇಯ ವ್ಯಕ್ತಿ ಕೊಲೆ ಬೆದರಿಕೆ ಹಾಕಿದ್ದಾನೆಂದು ದೂರು ಸಲ್ಲಿಸಲಾಗಿದೆ.

ವಿವರ: ವಕೀಲ ಟಿ.ಪಿ.ಕೃಷ್ಣ ಮತ್ತು ಪಪಂ ಮಾಜಿ ಅಧ್ಯಕ್ಷ ಸಚಿನ್ ಕುಟ್ಟಪ್ಪ ಇಬ್ಬರೂ ಬಿಜೆಪಿಯವರಾಗಿದ್ದು, 3ನೇ ವಾರ್ಡ್ ಟಿಕೆಟ್‍ಗಾಗಿ ಸೆಣೆಸಿದ್ದರು. ಆದರೆ, ಪಕ್ಷದ ಟಿಕೆಟ್ ಸಚಿನ್ ಕುಟ್ಟಪ್ಪ ಅವರಿಗೆ ಖಚಿತವಾಗುತ್ತಿದ್ದಂತೆಯೇ ಟಿ.ಪಿ.ಕೃಷ್ಣ ಪಕ್ಷೇತರರಾಗಿ ನಾಮ ಪತ್ರ ಸಲ್ಲಿಸಿದ್ದರು. ಸಚಿನ್ ಕುಟ್ಟಪ್ಪ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನವೇ ಚುನಾವಣಾ ಪ್ರಕ್ರಿಯೆ ಮುಂದೂಡಲ್ಪಟ್ಟಿತ್ತು. ತೆಲುಗರ ಬೀದಿಯಲ್ಲಿರುವ ಕೃಷ್ಣ ಅವರ ಸಂಬಂಧಿಕ ರಾಜಗೋಪಾಲ್ ಅವರ ಅಂಗಡಿಗೆ ಸೆ.9ರಂದು ಸಂಜೆ ಕಾರಿನಲ್ಲಿ ಬಂದ ಅನಾಮ ಧೇಯ ವ್ಯಕ್ತಿ ಅಂಗಡಿಯಲ್ಲಿದ್ದ ರಾಜಗೋಪಾಲ್ ಅವರ ಮಾವನ ಮಕ್ಕಳಾದ ಶಶಿಧರ್ ಮತ್ತು ಮಣಿಕಂಠ ಅವರನ್ನು ಕರೆದು ಕೂತಂಡ ಸಚಿನ್ ಕುಟ್ಟಯ್ಯ ವಿರುದ್ಧ ಸ್ಪರ್ಧಿಸಿದರೆ ಟಿ.ಪಿ.ಕೃಷ್ಣ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ವಕೀಲ ಟಿ.ಪಿ.ಕೃಷ್ಣ ನೀಡಿದ ದೂರಿನನ್ವಯ ಸೆ.10ರಂದು ಎಫ್‍ಐಆರ್ ದಾಖಲಿಸಿದ್ದ ವಿರಾಜಪೇಟೆ ನಗರ ಪೊಲೀಸರು, ಸೆ.19ರಂದು ಸಚಿನ್ ಕುಟ್ಟಪ್ಪ ಮತ್ತು ಅನಾಮಧೇಯ ವ್ಯಕ್ತಿ ವಿರುದ್ಧ ಕೊಲೆ ಬೆದರಿಕೆ ಪ್ರಕರಣದಡಿ ಎಫ್‍ಐಆರ್ ದಾಖಲಿಸಿದ್ದಾರೆ.

ಸಂಬಂಧವಿಲ್ಲ: ಈ ಸಂಬಂಧ `ಮೈಸೂರು ಮಿತ್ರ’ ಜೊತೆ ಮಾತನಾಡಿದ ಕೂತಂಡ ಸಚಿನ್ ಕುಟ್ಟಪ್ಪ ಅವರು, ಟಿ.ಪಿ.ಕೃಷ್ಣ ಅವರಿಗೆ ಯಾರು ಕೊಲೆ ಬೆದರಿಕೆ ಹಾಕಿದರೆಂದು ನನಗೆ ಗೊತ್ತಿಲ್ಲ. ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ವಿನಾ ಕಾರಣ ನನ್ನ ಹೆಸರನ್ನು ಪ್ರಕರಣದಲ್ಲಿ ಸೇರಿಸಲಾಗಿದೆ ಎಂದರಲ್ಲದೆ, ನಾನು ಪಪಂ ಸದಸ್ಯನಾಗಿ, ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಎಲ್ಲರೊಂದಿಗೂ ವಿಶ್ವಾಸದಿಂದಲೇ ನಡೆದುಕೊಂಡು ಬಂದಿದ್ದೇನೆ. ಯಾರಿಗೂ ಯವುದೇ ಸನ್ನಿವೇಶದಲ್ಲೂ ಬೆದರಿಕೆ ಹಾಕುವ ಪ್ರವೃತ್ತಿ ನನ್ನದಲ್ಲ ಎಂದರು.

Translate »