ನಾಳೆ ಬಿಜೆಪಿಯಿಂದ ವರ್ಚುವಲ್ ರ್ಯಾಲಿ: ಜೆಪಿ ನಡ್ಡಾರಿಂದ ಭಾಷಣ
ಮೈಸೂರು

ನಾಳೆ ಬಿಜೆಪಿಯಿಂದ ವರ್ಚುವಲ್ ರ್ಯಾಲಿ: ಜೆಪಿ ನಡ್ಡಾರಿಂದ ಭಾಷಣ

June 13, 2020

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಆಡಳಿತಾರೂಢ ಎನ್‍ಡಿಎ ಸರ್ಕಾರವು 2ನೇ ಅವಧಿಯ ಮೊದಲ ವರ್ಷವನ್ನು ಪೂರೈಸಿರುವ ಹಿನ್ನೆಲೆ ಯಲ್ಲಿ ನಗರದಲ್ಲಿ ರಾಜ್ಯ ಬಿಜೆಪಿಯು ವರ್ಚುವಲ್ ರ್ಯಾಲಿ ಯೊಂದನ್ನು ಇದೇ ಭಾನುವಾರ ನಡೆಸುತ್ತಿದ್ದು, ರ್ಯಾಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ಭಾಷಣ ಮಾಡಲಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ರಾಜ್ಯ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಅವರು, ರ್ಯಾಲಿ ಯಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷರು ಆತ್ಮ ನಿರ್ಭರ ಭಾರತ ಕುರಿತು ಮಾತನಾಡಲಿದ್ದಾರೆ. ಭಾನುವಾರ ಸಂಜೆ 6 ಗಂಟೆಗೆ ರ್ಯಾಲಿ ನಡೆಯಲಿದ್ದು, ಎಲ್ಲಾ ಸಾಮಾಜಿಕ ಜಾಲತಾಣಗಳ ವೇದಿಕೆ, ಸ್ಥಳೀಯ ಕೇಬಲ್ ನೆಟ್ವರ್ಕ್‍ಗಳನ್ನು ಬಳಸಿಕೊಂಡು 20 ಲಕ್ಷ ಜನರನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತದೆ ಎಂದು ಹೇಳಿದ್ದಾರೆ. ರ್ಯಾಲಿಯಲ್ಲಿ ಜೆಪಿ ನಡ್ಡಾ ಅವರು ಭಾಷಣ ಮಾಡಲಿದ್ದು, ಈ ವೇಳೆ ಕೊರೊನಾ ನಿಗ್ರಹಿಸುವಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಎಲ್ಲಾ ಕ್ರಮಗಳನ್ನು ವಿವರಿಸಲಿದ್ದಾರೆ. ರ್ಯಾಲಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ದಲ್ಲಿ ಸ್ಥಳೀಯ ಉತ್ಪನ್ನಗಳನ್ನು ಬಳಕೆ ಮಾಡಿ, ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆಯೂ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ದೇಶವು ಸಾಂಕ್ರಾ ಮಿಕ ರೋಗ ಎದುರಿಸಲು ಚೀನಾ ಕಾರಣ ಎಂದು ಆರೋಪಿಸಿದ್ದಾರೆ. ಕೊರೊನಾ ವೈರಸ್ ಹಬ್ಬಿದ್ದು, ಅಲ್ಲದೆ, ಗಡಿಯಲ್ಲಿ ಭಾರತಕ್ಕೆ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಚೀನಾವನ್ನು ಆರ್ಥಿಕವಾಗಿ ಸೋಲಿಸಲು ಇದೊಂದು ಸಕಾಲವಾಗಿದೆ. ಸ್ಥಳೀಯ ಉತ್ಪನ್ನಗಳ ಬಳಕೆ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಲು ನಮ್ಮ ಬಳಿ ಯೋಜನೆಗಳಿವೆ ಎಂದಿದ್ದಾರೆ.

Translate »