ಪೊಲೀಸ್ ಭದ್ರತೆಯಲ್ಲಿ ಕಡೆಗೂ ವಿಷ್ಣು ಸ್ಮಾರಕ ಕಾಮಗಾರಿ ಆರಂಭ
ಮೈಸೂರು

ಪೊಲೀಸ್ ಭದ್ರತೆಯಲ್ಲಿ ಕಡೆಗೂ ವಿಷ್ಣು ಸ್ಮಾರಕ ಕಾಮಗಾರಿ ಆರಂಭ

July 2, 2019

ಮೈಸೂರು: ಪೊಲೀಸ್ ಭಾರೀ ಭದ್ರತೆಯೊಂದಿಗೆ ಕಡೆಗೂ ಮೈಸೂರಲ್ಲಿ ಉದ್ದೇಶಿತ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಕಾಮಗಾರಿ ಇಂದು ಆರಂಭ ವಾಯಿತು. ಮೈಸೂರು ತಾಲೂಕು, ಹಾಲಾಳು ಗ್ರಾಮದ ಬಳಿ ಉದ್ಬೂರು ಗೇಟ್ ಎದುರು ಹೆಚ್.ಡಿ.ಕೋಟೆ ರಸ್ತೆಯಲ್ಲಿ ಡಾ.ವಿಷ್ಣುವರ್ಧನ್ ಅವರ ಪತ್ನಿ ಶ್ರೀಮತಿ ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್, ಗೆಳೆಯ ಆಲ್ವಿನ್, ಮೈಸೂರು ತಹಶೀಲ್ದಾರ್ ಟಿ.ರಮೇಶ್‍ಬಾಬು ಅವರ ಸಮ್ಮುಖದಲ್ಲಿ ಡಾ. ವಿಷ್ಣು ಸ್ಮಾರಕ ನಿರ್ಮಾ ಣದ ಕಾಮಗಾರಿಯನ್ನು ಆರಂಭಿಸಲಾಯಿತು.

ಈ ವೇಳೆ ಆ ಜಮೀನಿನಲ್ಲಿ ಸ್ವಾಧೀನಾ ನುಭವದಲ್ಲಿದ್ದೆವು ಎಂದು ಹೇಳಲಾದ ಕೆಲ ರೈತರು ಆಗಮಿಸಿ ತಮಗೆ ಪರಿಹಾರ ನೀಡು ವಂತೆ ಕೇಳಿಕೊಂಡರಾದರೂ, ಸದರಿ ಭೂಮಿ ಸರ್ಕಾರದ್ದಾಗಿರುವುದಲ್ಲದೆ, ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಿಸುವ ಸಲುವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಹಸ್ತಾಂ ತರಿಸಿದೆ ಹಾಗೂ ಹೈಕೋರ್ಟ್ ಸಹ ಮೈಸೂರು ಜೆಎಂಎಫ್‍ಸಿ ನೀಡಿದ್ದ ಇಂಜಂಕ್ಷನ್ ಅನ್ನು ತೆರವುಗೊಳಿಸಿ ಆದೇಶಿಸಿರುವುದರಿಂದ ಈ ಹಂತದಲ್ಲಿ ಕೋರ್ಟ್ ಆದೇಶ ಪಾಲಿಸಬೇಕೇ ಹೊರತು, ಬೇರೆ ಯಾವುದೇ ಚರ್ಚೆ ಮಾಡ ಲಾಗದು ಎಂದು ತಹಶೀಲ್ದಾರ್ ರಮೇಶ್ ಬಾಬು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಇಂದು ಜೆಸಿಬಿ ಮೂಲಕ ಉದ್ದೇಶಿತ ಜಾಗದಲ್ಲಿ ಬೆಳೆದಿರುವ ಗಿಡಗಂಟಿ ಗಳನ್ನು ತೆರವುಗೊಳಿಸುವ ಕಾರ್ಯವನ್ನು ಜಿಲ್ಲಾಡಳಿತ ಹಾಗೂ ಡಾ. ವಿಷ್ಣುವರ್ಧನ್ ಸ್ಮಾರಕ ಪ್ರತಿಷ್ಠಾನವು ಮುಂದಾಗಿದೆ.

ಈ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಡಾ.ಭಾರತಿ ವಿಷ್ಣುವರ್ಧನ್ ಅವರು ಹೈಕೋರ್ಟ್ ಆದೇಶದಂತೆ ಡಾ. ವಿಷ್ಣು ಸ್ಮಾರಕ ಕಾಮಗಾರಿ ಯನ್ನು ಆರಂಭಿಸಿದ್ದೇವೆ. ಸರ್ಕಾರ 11 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. 5 ಎಕರೆ ಜಾಗದಲ್ಲಿ ಡಾ. ವಿಷ್ಣು ಸ್ಮಾರಕ ನಿರ್ಮಿಸಿ ಅಲ್ಲಿ ಮ್ಯೂಸಿಯಂ, ಕಲಾ ಭವನ, ಫಿಲಂ ಟ್ರೈನಿಂಗ್ ಸೆಂಟರ್ ಬರಲಿವೆ ಎಂದರು.

ವಿಷ್ಣುವರ್ಧನ್ ಅವರ ಆಶಯದಂತೆ ಅವರ ಅಭಿಮಾನಿಗಳಿಗೆ ಸ್ಮಾರಕವನ್ನು ಅರ್ಪಿಸುತ್ತೇವೆ. ಇದು ಸಾರ್ವಜನಿಕರ ಸ್ವತ್ತಾಗಿರುವುದರಿಂದ ಚಲನಚಿತ್ರ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸ್ಮಾರಕ ಬಳಕೆಯಾಗಲಿದೆ ಎಂದು ಡಾ.ಭಾರತಿ ಅವರು ನುಡಿದರು. ಅನಿರುದ್ ಅವರು ಮಾತನಾಡಿ, ಮೈಸೂರಿನಲ್ಲಿ ಸ್ಮಾರಕವಾಗುತ್ತಿರುವುದು ತುಂಬಾನೆ ಖುಷಿ ಆಗಿದೆ. ವಿಷ್ಣು ಅಪ್ಪಾಜಿ ಅವರ ಕನಸೂ ಅದೇ ಆಗಿತ್ತು. ಇದು ಕೇವಲ ಸ್ಮಾರಕವಲ್ಲ. ಅದೊಂದು ರಾಜ್ಯದ ಮಾದರಿ. ರಂಗಭೂಮಿ ಹಾಗೂ ಸಿನಿಮಾಗೆ ಸಂಬಂಧಿಸಿದ ತರಬೇತಿಯನ್ನೂ ಇಲ್ಲಿ ನೀಡಲು ಉದ್ದೇಶಿಸಲಾಗಿದೆ ಎಂದರು. ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಹಾಗೂ ಜಯಪುರ ಠಾಣೆಯ ಸುಮಾರು 25ಕ್ಕೂ ಹೆಚ್ಚು ಮಂದಿ ಪೊಲೀಸರನ್ನು ಬಂದೋಬಸ್ತ್‍ಗಾಗಿ ನಿಯೋಜಿಸಲಾಗಿತ್ತು.

Translate »