ಮೈತ್ರಿ ಸರ್ಕಾರ ಪತನವಾದರೆ ನಾವು ಸರ್ಕಾರ ರಚಿಸುತ್ತೇವೆ
ಮೈಸೂರು

ಮೈತ್ರಿ ಸರ್ಕಾರ ಪತನವಾದರೆ ನಾವು ಸರ್ಕಾರ ರಚಿಸುತ್ತೇವೆ

July 2, 2019

ಬೆಂಗಳೂರು, ಜು.1(ಕೆಎಂಶಿ)- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನ ಗೊಂಡರೆ ಹೊಸ ಸರ್ಕಾರ ರಚನೆ ಮಾಡುತ್ತೇವೆ, ನಾವೇನೂ ಸನ್ಯಾಸಿಗಳಲ್ಲ, ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆಗೆ ಅವಕಾಶ ನೀಡುವುದಿಲ್ಲ ಎಂದು ವಿಧಾನ ಸಭೆಯ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ರಾಜೀನಾಮೆ ವಿಷಯಕ್ಕೆ ಸಂಬಂಧಿಸಿದಂತೆ ಈ ಸ್ಪಷ್ಟ ಉತ್ತರ ನೀಡಿದರು.

ನಾವಾಗಿಯೇ ಈ ಸರ್ಕಾರ ಉರುಳಿಸುವ ಪ್ರಯತ್ನ ಮಾಡುವುದಿಲ್ಲ ಎಂದು ಪುನ ರುಚ್ಛರಿಸಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್‍ನ 20ರಷ್ಟು ಶಾಸಕರು ರಾಜೀನಾಮೆ ಕೊಡುತ್ತಾರೆ ಎಂಬ ಮಾಹಿತಿ ಇದೆ. ಇಂತಹ ಬೆಳವಣಿಗೆ ನಡೆದರೆ ಸುಮ್ಮನೆ ನೋಡುತ್ತಾ ಕೂರಲು ನಾವು ಸನ್ಯಾಸಿಗಳಲ್ಲ, ಶಾಸಕ ಆನಂದ್ ಸಿಂಗ್ ರಾಜೀನಾಮೆ ಪ್ರಕರಣಕ್ಕೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ. ರಾಜ್ಯ ರಾಜಕೀಯ ಬೆಳವಣಿಗೆ ಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸೂಕ್ತ ಸಂದರ್ಭದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತೇವೆ. ವಿಧಾನಸಭೆಯಲ್ಲಿ 105 ಸದಸ್ಯ ಬಲ ಹೊಂದಿದ್ದರೂ, ಪ್ರತಿಪಕ್ಷ ಸ್ಥಾನದಲ್ಲಿ ಕುಳಿತಿರುವಾಗ, 37 ಶಾಸಕರನ್ನು ಹೊಂದಿರುವವರೇ ಅಧಿಕಾರ ನಡೆಸು ವಾಗ, ಅದಕ್ಕಿಂತ ಸುಮಾರು ಮೂರರಷ್ಟು ಹೆಚ್ಚು ಸದಸ್ಯ ಬಲ ಹೊಂದಿರುವ ನಾವು ಸುಮ್ಮನೆ ಕೂರಬೇಕೆ? ಸರ್ಕಾರದ ನಡವಳಿಕೆಯಿಂದ ಬೇಸತ್ತಿರುವ ಅನೇಕ ಶಾಸಕರು ರಾಜೀನಾಮೆ ನೀಡಬಹುದು, ಮುಂದೆ ಏನಾಗುತ್ತದೋ ಕಾದು ನೋಡೋಣ. ಜನರ ಪಾಲಿಗೆ ಈ ಸರ್ಕಾರ ಇದ್ದೂ ಇಲ್ಲದಂತಾಗಿದೆ. ಒಂದು ಕಡೆ ಮಳೆ ಬಾರದೆ ರೈತ ಕಂಗಾಲಾಗಿದ್ದಾನೆ, ಅನೇಕ ಕಡೆ ಕುಡಿಯುವ ನೀರಿಗೂ ಹಾಹಾಕಾರವಿದೆ. ಜಾನುವಾರುಗಳಿಗೆ ಮೇವಿಲ್ಲ, ಕೃಷಿ ಚಟುವಟಿಕೆಗಳು ನಡೆಸಲು ರಸಗೊಬ್ಬರ, ಬಿತ್ತನೆ ಬೀಜ ಪೂರೈಕೆಯಾಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು. `ರೋಮ್‍ನಗರ ಹೊತ್ತಿ ಉರಿಯುವಾಗ ನೀರೋ ದೊರೆ ಪಿಟೀಲು ಕುಯ್ಯುತ್ತಿದ್ದ’ ಎಂಬ ನಾಣ್ಣುಡಿಯಂತೆ ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದ್ದಾಗ ಮುಖ್ಯಮಂತ್ರಿ ಕುಮಾರಸ್ವಾಮಿ ಅಮೆರಿಕ ಪ್ರವಾಸ ನಡೆಸಬೇಕಾದ ಅಗತ್ಯ ಏನಿತ್ತು, ವಿದೇಶ ಪ್ರವಾಸ ಕೈಗೊಳ್ಳಬೇಕಾದರೆ ತನ್ನದೇ ಆದ ರೀತಿ ನೀತಿ ಇವೆ ಎಂದರು.

590 ಹೋಬಳಿಗಳ ಪೈಕಿ 197 ಹೋಬಳಿಗಳಲ್ಲಿ ಬಿತ್ತನೆ ಕಾರ್ಯ ನಡೆದಿಲ್ಲ, 143 ತಾಲ್ಲೂಕುಗಳಲ್ಲಿ ಮಳೆಯ ಪ್ರಮಾಣ ಇಳಿಕೆಯಾಗಿದೆ, 74.69 ಹೆಕ್ಟೇರ್ ಪ್ರದೇಶಗಳ ಪೈಕಿ ಕೇವಲ 16.25 ಹೆಕ್ಟೇರ್ ಬಿತ್ತನೆಯಾಗಿದೆ, ಸರ್ಕಾರ ಯಾವ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಂಡಿಲ್ಲ ಎಂದು ಆರೋಪಿಸಿದರು. ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಸರ್ಕಾರಕ್ಕೆ ಸೇರಿದ ಕಂದಾಯ ಮತ್ತು ಗೋಮಾಳ ಜಮೀನುಗಳನ್ನು ಹಿಂಪಡೆಯಲು ಭೂ ಕಬಳಿಕೆ ಕಾನೂನು ಜಾರಿಗೆ ತರಲಾಗಿತ್ತು. ಆದರೆ ರಾಜ್ಯ ಸರ್ಕಾರವೇ ಕೆಲವೆಡೆ ರೈತರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಕೈ ಹಾಕಿದೆ, 30-40 ವರ್ಷಗಳಿಂದ ಸಾಗುವಳಿ ಮಾಡುತ್ತಿರುವವರನ್ನು ಒಕ್ಕಲೆಬ್ಬಿಸಬಾರದು ಎಂದು ಆಗ್ರಹಿಸಿದರು.

Translate »