ಪ್ರಕೃತಿ ವಿಕೋಪ ಪ್ರದೇಶಕ್ಕೆ ಸುಧಾಮೂರ್ತಿ ಭೇಟಿ, ಪರಿಶೀಲನೆ
ಕೊಡಗು

ಪ್ರಕೃತಿ ವಿಕೋಪ ಪ್ರದೇಶಕ್ಕೆ ಸುಧಾಮೂರ್ತಿ ಭೇಟಿ, ಪರಿಶೀಲನೆ

February 1, 2019

ಚೆಟ್ಟಳ್ಳಿ: ಕೊಡಗು ಸೇವಾ ಕೇಂದ್ರದ ಸಹಯೋಗದಲ್ಲಿ ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾಮೂರ್ತಿಯವರು ತಮ್ಮ ತಂಡಗೊಡಗೂಡಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಜನರ ಬೇಡಿಕೆಗಳನ್ನು ಆಲಿಸಿದರು. ಮೊದಲಿಗೆ ದೇವಸ್ತೂರ್ ಮಾರ್ಗವಾಗಿ ತೆರಳಿ, ಪಾಣತ್ತಲೆ ಜನಾರ್ದನ್ ಅವರ ಮನೆಗೆ ಭೇಟಿ ನೀಡಿದ ಅವರು, ಅವರ ಮನೆಯ ಪರಿಸ್ಥಿತಿಯನ್ನು ಕಂಡು, ಹೊಸ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದರು.

ನಂತರ ಅಲ್ಲಿಂದ ತೆರಳಿದ ಸುಧಾಮೂರ್ತಿಯವರು ನೇರವಾಗಿ ಕುಕ್ಕೇರ ಪಳಂಗಪ್ಪ ಅವರ ಜಾಗಕ್ಕೆ ತೆರಳಿ ಅವರ ಮನೆ ಕುಸಿತಗೊಂಡಿದ್ದನು ಕಂಡು ಅವರಿಗೂ ಬದಲಿ ಮನೆ ನಿರ್ಮಿಸುವ ಭರವಸೆ ನೀಡಿದರು. ಅಲ್ಲಿಂದ ದೇವಸತ್ತೂರು ಅಂಗನವಾಡಿಗೆ ತೆರಳಿ, ಅಂಗನ ವಾಡಿಯ ಪರಿಸ್ಥಿತಿಯನ್ನು ವೀಕ್ಷಿಸಿ, ದುರಸ್ತಿ ಕಾರ್ಯಕ್ಕೆ ನೆರವು ನೀಡುವಂತೆ ತಮ್ಮ ಸಿಬ್ಬಂದಿಗೆ ಸೂಚಿಸಿದರು. ನಂತರ ದೇವಸ್ತೂರಿನ ಅರ್ಧ ಕುಸಿದಿರುವ ಶಾಲೆಯನ್ನು ಪೂರ್ಣ ತೆರವು ಗೊಳಿಸುವಂತೆ ಸಂಬಂಧ ಪಟ್ಟವರಿಗೆ ತಿಳಿಸುವಂತೆ ಕೊಡಗು ಸೇವಾ ಕೇಂದ್ರದ ಪದಾ ಧಿಕಾರಿಗಳಿಗೆ ತಿಳಿಸಿದರು. ನಂತರ ಸುಧಾಮೂರ್ತಿಯವರು ಕಾಲೂರಿನ ಅಪ್ಪನೆರವಂಡ ಚಿನ್ನವ್ವ ಅವರ ಗದ್ದೆಯನ್ನು ವೀಕ್ಷಿಸಿದರು. ಅಲ್ಲಿ ಗ್ರಾಮಸ್ಥರು ತಮಗೆ ತರಕಾರಿ ಬೆಳೆಯಲು ಒಂದು ಹಸಿರು ಮನೆ (ಪಾಲಿ ಹೌಸ್) ನಿರ್ಮಿಸಿ ಕೊಡಬೇಕೆಂದು ಕೋರಿದರು.

ಅಲ್ಲಿಂದ ಮಾಂದಲಪಟ್ಟಿ ಮಾರ್ಗವಾಗಿ ಸೂರ್ಲಬ್ಬಿ ಶಾಲೆಗೆ ಭೇಟಿ ನೀಡಿ ಶಾಲೆಯ ವ್ಯವಸ್ಥೆ ಬಗ್ಗೆ ಪರಿಶೀಲಿಸಿದರು. ನಂತರ ಮಡಿಕೇರಿಗೆ ಬಂದು ಉಸ್ತುವಾರಿ ಸಚಿವರು ಮತ್ತು ಇತರ ಜನಪ್ರತಿನಿಧಿಗಳನ್ನು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಭೇಟಿ ಮಾಡಿ ಪ್ರಕೃತಿ ವಿಕೋಪದ ಕಾರ್ಯವೈಖರಿ ಬಗ್ಗೆ ಚರ್ಚಿಸಿದರು. ಈ ಸಂದರ್ಭ ಇನ್ಫೋಸಿಸ್ ಸಂಸ್ಥೆಯ ಸಿಬ್ಬಂದಿಗಳು, ಕೊಡಗು ಸೇವಾ ಕೇಂದ್ರದ ಪದಾಧಿಕಾರಿಗಳಾದ ಅಜ್ಜಿನಂದ ಪೂವಯ್ಯ, ಬಿದ್ದಾಟಂಡ ತಮ್ಮಯ್ಯ, ತೇಲಪಂಡ ಪ್ರಮೋದ್, ಪುತ್ತರಿರ ಪಪ್ಪು ತಿಮ್ಮಯ್ಯ, ಕೊಡಂದೇರ ಮೇಜರ್ ಜನರಲ್ ಅರ್ಜುನ್ ಮುತ್ತಣ್ಣ, ಮದನ್ ವಿ.ಟಿ. ಮುಂತಾದವರು ಹಾಜರಿದ್ದರು.

Translate »