ಅತೃಪ್ತರಿಗೆ ಬಿಜೆಪಿ ವರಿಷ್ಠರ ಖಡಕ್ ವಾರ್ನಿಂಗ್
ಮೈಸೂರು

ಅತೃಪ್ತರಿಗೆ ಬಿಜೆಪಿ ವರಿಷ್ಠರ ಖಡಕ್ ವಾರ್ನಿಂಗ್

August 29, 2019

ಬೆಂಗಳೂರು, ಆ.28(ಕೆಎಂಶಿ)-ಮಂತ್ರಿ ಸ್ಥಾನ ದೊರೆಯಲಿಲ್ಲ ಎಂದು ಅಸಮಾಧಾನಗೊಂಡು ಹಾದಿ-ಬೀದಿಯಲ್ಲಿ ಸರ್ಕಾರ, ಪಕ್ಷ ಮತ್ತು ಮುಖಂಡರನ್ನು ಟೀಕಿಸುವವರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಬಿಜೆಪಿ ದೆಹಲಿ ವರಿಷ್ಠರು ಖಡಕ್ಕಾಗಿ ಸೂಚಿಸಿದ್ದಾರೆ.

ಅಸಮಾಧಾನವಿದ್ದಲ್ಲಿ ಪಕ್ಷದ ವೇದಿಕೆ ಅಥವಾ ಮುಖಂಡರ ಬಳಿ ಹೇಳಿಕೊಳ್ಳಲಿ, ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ಉಂಟು ಮಾಡುವವರು ನಮಗೆ ಬೇಕಾಗಿಲ್ಲ. ಅಧಿಕಾರದ ಲಾಲಸೆಯಿಂದ ಸರ್ಕಾರಕ್ಕೆ ಕುತ್ತು ತಂದರೆ ಮುಂಬರುವ ಚುನಾವಣೆಗಳಲ್ಲಿ ಟಿಕೆಟ್ ಅನ್ನೇ ಕಳೆದುಕೊಳ್ಳಬೇಕಾಗುತ್ತದೆ. ಅಲ್ಲದೆ ಇಂತಹ ವ್ಯಕ್ತಿ ಗಳನ್ನು ಪಕ್ಷದ ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನಿ ಸುವುದನ್ನೂ ನಿಲ್ಲಿಸಬೇಕಾಗುತ್ತದೆ ಎಂದು ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಎಚ್ಚರಿಸಿದ್ದಾರೆ.

ಮಂತ್ರಿಗಳಾಗಿ ನಿರ್ದಿಷ್ಟ ಖಾತೆ ಅಥವಾ ಬಡ್ತಿ ಸಿಗಲಿಲ್ಲ ವೆಂದು ಅಸಮಾಧಾನಗೊಂಡು ಬಹಿರಂಗ ಹೇಳಿಕೆ ನೀಡಿ ದರೆ, ಅಂತಹವರು ರಾಜೀನಾಮೆ ಕೊಟ್ಟು ಹೊರಹೋಗ ಬೇಕಾಗುತ್ತದೆ. ನಿಷ್ಠರಿಗೆ ಪಕ್ಷದಲ್ಲಿ ಸ್ಥಾನಗಳನ್ನು ನೀಡೋಣ, ನೀವು ಕೂಡ ಇಂತಹವರಿಗೆ ಸೊಪ್ಪು ಹಾಕಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ನೂತನ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರಿಗೂ ಸಲಹೆ ನೀಡಿದ್ದಾರೆ. ವರಿಷ್ಠರ ಆದೇಶದ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿ ಅವರು, ನಿನ್ನೆ ರಾತ್ರಿ ಹಾಗೂ ಇಂದು ಬೆಳಿಗ್ಗೆ ಅತೃಪ್ತ ಸಚಿವರು ಮತ್ತು ಶಾಸಕರನ್ನು ಪ್ರತ್ಯೇಕವಾಗಿ ಕರೆದು ಮಾತನಾಡಿದ್ದಾರೆ. ನಿಮಗೆ ರಾಜಕೀಯದಲ್ಲಿ ಇನ್ನೂ ಸಮಯಾವಕಾಶ ಇದೆ. ಸಚಿವ ಸ್ಥಾನ ಮುಂದಿನ ದಿನಗಳಲ್ಲಿ ದೊರೆಯಲಿದೆ, ದುಡುಕಬೇಡಿ. ನಿಮ್ಮ ಎಲ್ಲಾ ಚಲನವಲನಗಳ ಬಗ್ಗೆ ವರಿಷ್ಠರಿಗೆ ಮಾಹಿತಿ ಹೋಗು ತ್ತಿದೆ. ಅವರ ಕೆಂಗಣ್ಣಿಗೆ ಗುರಿ ಯಾಗಬೇಡಿ, ಎಲ್ಲರೂ ಶಾಂತ ರೀತಿಯಲ್ಲಿ ಸಹನೆಯಿಂದ ವರ್ತಿಸಬೇಕು ಎಂದು ಯಡಿಯೂರಪ್ಪ ಕಿವಿಮಾತು ಹೇಳಿ ದ್ದಾರೆ. ನೀವು ಮಾಧ್ಯಮಗಳ ಮುಂದೆ ಬಹಿರಂಗ ಹೇಳಿಕೆ ನೀಡಿದರೆ ನಿಮ್ಮ ಭವಿಷ್ಯಕ್ಕೆ ಮುಳುವಾಗಲಿದೆ, ಮಾಧ್ಯಮ ಗಳಲ್ಲಿ ಪ್ರಚಾರ ಸಿಗುತ್ತದೆ ಎಂದು ಹೇಳಿಕೆ ನೀಡಿದರೆ ಎಲ್ಲ ಅವಕಾಶಗಳಿಂದಲೂ ವಂಚಿತರಾಗುತ್ತೀರಿ ಎಂದು ಸ್ಪಷ್ಟ ಮಾತುಗಳಲ್ಲಿ ಎಚ್ಚರಿಸಿದ್ದಾರೆ. ಸಂಪುಟದಲ್ಲಿ ಇನ್ನೂ 16 ಸ್ಥಾನಗಳು ಖಾಲಿ ಉಳಿದಿವೆ, ನಮ್ಮನ್ನು ನಂಬಿ ಅನರ್ಹ ಗೊಂಡವರಿಗೆ ಸ್ಥಾನ ನೀಡಬೇಕಿದೆ, ಅವರಿಗೆ ಅನ್ಯಾಯ ವಾದರೆ ತಪ್ಪು ಸಂದೇಶ ಹೋಗುತ್ತದೆ. ಪಕ್ಷಕ್ಕೆ ನಿಷ್ಠೆಯಿಂದ ಇರುವ ನೀವುಗಳೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿ ದರೆ ಬೇರೆಯವರನ್ನು ಸಂತೈಸುವವರು ಯಾರು. ನಿಮ್ಮ ಕ್ಷೇತ್ರದಲ್ಲಿನ ಕೆಲಸಗಳ ಬಗ್ಗೆ ಗಮನ ಕೊಡಿ, ಆಗಬೇಕಾದ ಕಾರ್ಯಗಳ ಪಟ್ಟಿ ನೀಡಿ, ಕ್ಷಣಾರ್ಧದಲ್ಲಿ ಮಾಡಿಕೊಡುವೆ. ಅದು ಬಿಟ್ಟು ಅನಗತ್ಯ ಗೊಂದಲ ಸೃಷ್ಟಿಸಬೇಡಿ ಎಂದು ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದಾರೆ. ಇನ್ನೂ 3 ವರ್ಷ 9 ತಿಂಗಳು ನಾವೇ ಅಧಿಕಾರದಲ್ಲಿರುತ್ತೇವೆ, ಕಾಲಕ್ಕೆ ತಕ್ಕಂತೆ ಸರ್ಕಾರದಲ್ಲಿ ಬದಲಾವಣೆಗಳಾಗುತ್ತವೆ, ಮುಂದೆ ಹೊಸಬರಿಗೂ ಅವಕಾಶ ಕೊಡುವ ಸಾಧ್ಯತೆ ಇರುತ್ತದೆ. ಪಕ್ಷದ ದೆಹಲಿ ವರಿಷ್ಠರು ನನಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದರೆ, ಈಗಲೇ ನಿಮ್ಮನ್ನೂ ಸಂಪುಟಕ್ಕೆ ತೆಗೆದುಕೊಳ್ಳುತ್ತಿದ್ದೆ. ನಮ್ಮದು ಪೂರ್ಣ ಬಹುಮತದ ಸರ್ಕಾರವಲ್ಲ, ಕನಿಷ್ಠ 8 ರಿಂದ 10 ಸಚಿವ ಸ್ಥಾನಗಳನ್ನು ಅನರ್ಹಗೊಂಡ ಶಾಸಕರಿಗೆ ಮೀಸಲು ಇಡಲೇಬೇಕಿದೆ ಎಂದಿದ್ದಾರೆ.

ಮತ್ತೆ ಸಂಪುಟ ವಿಸ್ತರಣೆಗೆ ಬಿಜೆಪಿ ವರಿಷ್ಠರ ಬ್ರೇಕ್

ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಎರಡನೇ ಬಾರಿಗೆ ತಮ್ಮ ಮಂತ್ರಿಮಂಡಲ ವಿಸ್ತರಿಸಲು ಬಿಜೆಪಿ ವರಿಷ್ಠರು ಬ್ರೇಕ್ ಹಾಕಿದ್ದಾರೆ.

ಕಳೆದ ಮಂಗಳವಾರವೇ ಸಂಪುಟಕ್ಕೆ ಉಮೇಶ್ ಕತ್ತಿ ಹಾಗೂ ಅರವಿಂದ ಲಿಂಬಾವಳಿ ಅವರನ್ನು ಸೇರ್ಪಡೆ ಮಾಡಿಕೊಳ್ಳಲು ರಾಜ್ಯಪಾಲರ ಸಮಯಾವಕಾಶ ಕೋರಿದ್ದರು. ರಾಜ್ಯಪಾಲರು ಸಮಯಾವಕಾಶ ನೀಡುವ ವೇಳೆಗಾಗಲೇ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ ನಡ್ಡಾ, ಮುಖ್ಯಮಂತ್ರಿ ಅವರನ್ನು ಸಂಪರ್ಕಿಸಿ, ಸಣ್ಣ-ಪುಟ್ಟ ಪ್ರಮಾಣದಲ್ಲಿ ಮಂತ್ರಿಮಂಡಲ ವಿಸ್ತರಣೆಗೆ ಕೈಹಾಕಬೇಡಿ ಎಂದು ತಿಳಿಸಿದರು. ಕೆಲವು ಸಚಿವರಿಗೆ ಬಡ್ತಿ ಮತ್ತು ಖಾತೆ ಹಂಚಿಕೆ ನಂತರ ಎದ್ದಿರುವ ಅಸಮಾ ಧಾನ ಬಗೆಹರಿಸಿ, ಜೊತೆಯಲ್ಲೇ ಮಂತ್ರಿ ಸ್ಥಾನ ದೊರೆಯದೆ ಅತೃಪ್ತಗೊಂಡವರನ್ನು ಕರೆದು ಬುದ್ಧಿವಾದ ಹೇಳಿ. ಸದ್ಯದ ಪರಿಸ್ಥಿತಿ ತಿಳಿಗೊಂಡ ನಂತರ ನಿಮಗೆ ಬೇಕಾದವರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳಿ ಎಂದು ಹೇಳಿದ ಕಿವಿಮಾತಿಗೆ, ಮುಖ್ಯಮಂತ್ರಿ ತಮ್ಮ ನಿರ್ಧಾ ರದಿಂದ ತಾತ್ಕಾಲಿಕವಾಗಿ ಹಿಂದೆ ಸರಿದರು.

ವರಿಷ್ಠರ ನಿರ್ಧಾರವನ್ನು ಸ್ವತಃ ಮುಖ್ಯಮಂತ್ರಿ ಅವರೇ ಇಂದು ಬೆಳಿಗ್ಗೆ ಅತೃಪ್ತ ಶಾಸಕರ ಜೊತೆಗಿನ ಮಾತುಕತೆ ಸಂದರ್ಭದಲ್ಲಿ ಬಹಿರಂಗಪಡಿಸಿದ್ದಾರೆ. ಉಮೇಶ್ ಕತ್ತಿ, ಅರವಿಂದ ನಿಂಬಾವಳಿ ಅವರನ್ನು ಎರಡನೇ ಕಂತಿನ ಸಂಪುಟ ವಿಸ್ತರಣೆಯಲ್ಲಿ ತೆಗೆದುಕೊಳ್ಳಬೇಕೆಂದಿದ್ದೆ, ಮುಂದೆ ಕೆಲವು ದಿನಗಳಲ್ಲಿ ನಾಲ್ಕೈದು ಮಂದಿಯನ್ನು ಸೇರ್ಪಡೆ ಮಾಡಿಕೊಳ್ಳುತ್ತೇನೆ. ಇವರ ಜೊತೆ ದಾವಣ ಗೆರೆ ಜಿಲ್ಲೆಯಿಂದ ಶಾಸಕ ಎಂ.ಪಿ. ರೇಣುಕಾಚಾರ್ಯ, ಚಿತ್ರದುರ್ಗ ಜಿಲ್ಲೆಯಿಂದ ತಿಪ್ಪಾರೆಡ್ಡಿ, ಕಲಬುರಗಿಯಿಂದ ರಾಜೂಗೌಡ ಕಾಗೆ ಅವರನ್ನೂ ಮಂತ್ರಿ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಮಂತ್ರಿ ಸ್ಥಾನ ದೊರೆಯದವರಿಗೂ ಅವಕಾಶ ಸಿಗಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

Translate »