ಮೈಸೂರು: ಲೋಕಸಭಾ ಚುನಾವಣೆಯಲ್ಲಿ ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎಂದು ಮಾಜಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಅವರು ಇಂದಿಲ್ಲಿ ತಿಳಿಸಿದ್ದಾರೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಅವರು ನಾಮಪತ್ರ ಸಲ್ಲಿಸಿದ ನಂತರ ಜಿಲ್ಲಾಧಿಕಾರಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಮೈತ್ರಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ಜೆಡಿಎಸ್‍ನ ಸಚಿವ ಸಾ.ರಾ.ಮಹೇಶ್, ಮುಖಂಡ ಪ್ರೊ.ಕೆ.ಎಸ್.ರಂಗಪ್ಪ ಸೇರಿದಂತೆ ಹಲವು ನಾಯಕರು ಹಾಜರಿದ್ದುದು ನಾವು ಒಂದಾಗಿರುವುದಕ್ಕೆ ನಿದರ್ಶನವಾಗಿದೆ ಎಂದರು.
ರಾಜ್ಯದಲ್ಲಿ ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕರಾದ ತನ್ವೀರ್ ಸೇಠ್, ಡಾ.ಯತೀಂದ್ರಸಿದ್ದರಾಮಯ್ಯ, ಮಾಜಿ ಶಾಸಕರಾದ ಕೆ.ವೆಂಕಟೇಶ್, ಎಂ.ಕೆ.ಸೋಮಶೇಖರ್ ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಸಿ.ಹೆಚ್.ವಿಜಯಶಂಕರ್ ನಾಮಪತ್ರ ಸಲ್ಲಿಸುವ ಮುನ್ನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಒಗ್ಗಟ್ಟು ಪ್ರದರ್ಶಿಸಿದ್ದಾರೆ ಎಂದು ಅವರು ನುಡಿದರು.
ಕೋಮುವಾದಿ ಬಿಜೆಪಿ ವಿರುದ್ಧ ಸೆಣೆಸಲು ಎರಡೂ ಪಕ್ಷಗಳು ಒಂದಾಗಿ ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವ ಮೂಲಕ ರಾಜ್ಯದಲ್ಲಿ 28ಕ್ಕೆ 22 ಸ್ಥಾನ ಗಿಟ್ಟಿಸುವಲ್ಲಿ ನಾವು ಸಫಲರಾಗುತ್ತೇವೆ ಎಂದ ಡಾ.ಹೆಚ್.ಸಿ.ಮಹದೇವಪ್ಪ ಅವರು, ದೇಶದಲ್ಲಿ ರಾಹುಲ್‍ಗಾಂಧಿ ಅವರ ಕೈ ಬಲ ಪಡಿಸಲು ಪಣ ತೊಟ್ಟಿದ್ದೇವೆ ಎಂದು ತಿಳಿಸಿದರು.
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಯಾವುದೇ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷಗಳ ಹಿತಾಸಕ್ತಿಯಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಒಂದಾಗಿ ಲೋಕಸಭಾ ಚುನಾವಣೆ ಎದುರಿಸುತ್ತಿದ್ದೇವೆ ಎಂದೂ ಅವರು ಇದೇ ವೇಳೆ ಸ್ಪಷ್ಟಪಡಿಸಿದರು.