ಬಿಜೆಪಿಯ 10 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ: ಸಾ.ರಾ.ಮಹೇಶ್
ಮೈಸೂರು

ಬಿಜೆಪಿಯ 10 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ: ಸಾ.ರಾ.ಮಹೇಶ್

September 13, 2018

ಮೈಸೂರು: ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ತೆರೆಮರೆಯ ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್, 10 ಮಂದಿ ಬಿಜೆಪಿ ಶಾಸಕರು ನಮ್ಮ ಸಂಪರ್ಕ ದಲ್ಲಿದ್ದಾರೆ ಎನ್ನುವ ಮೂಲಕ ಕುತೂಹಲ ಕೆರಳಿಸಿದ್ದಾರೆ.

ಸಮ್ಮಿಶ್ರ ಸರ್ಕಾರವನ್ನು ಉರುಳಿಸುವುದಕ್ಕಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಆಪರೇಷನ್ ಕಮಲ ಮಾಡಲು ಮುಂದಾಗಿದ್ದಾರೆ ಎಂಬ ವಿಚಾರ ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿ ಮಾಡಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕೌಂಟ್‍ಡೌನ್ ಆರಂಭ ವಾಗಿದೆ ಎಂಬ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೆ ಬಿಜೆಪಿ ನಾಯಕರಿಗೆ ಜೆಡಿಎಸ್ ಶಾಕ್ ನೀಡಿದೆ. ಜೆಡಿಎಸ್‍ನ ಮುಂಚೂಣಿ ನಾಯಕರ ಸಾಲಿನಲ್ಲಿರುವ ಪ್ರವಾಸೋ ದ್ಯಮ ಸಚಿವ ಸಾ.ರಾ.ಮಹೇಶ್, ಬುಧವಾರ ಮೈಸೂರಿನಲ್ಲಿ ಬಿಜೆಪಿ ನಾಯಕರ ವಿರುದ್ದ ಗುಡುಗಿದ್ದು, ನಮಗೂ ರಾಜಕೀಯ ಮಾಡುವುದಕ್ಕೆ ಬರುತ್ತದೆ. ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಜೆಡಿಎಸ್‍ನೊಂದಿಗೆ ಬಿಜೆಪಿಯ 10 ಶಾಸಕರು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ.

ನಾನೂ 20 ವರ್ಷ ಬಿಜೆಪಿಯಲ್ಲಿದ್ದವನು. ನಮಗೂ ರಾಜಕಾರಣ ಮಾಡಲು ಬರುತ್ತದೆ. ಈಗಾಗಲೇ ಬಿಜೆಪಿಯ 10 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ನಾವು ಅಧಿಕಾರಕ್ಕೆ ಬಂದು 4 ತಿಂಗಳಷ್ಟೇ ಆಗಿದೆ. ಈ ನಡುವೆ ಕೆಲ ಬಿಜೆಪಿ ಮುಖಂಡರು ಅಧಿಕಾರದ ಆಸೆ ಇಟ್ಟುಕೊಂಡಿದ್ದಾರೆ. ಇದರಿಂದ ಇಲ್ಲ ಸಲ್ಲದ ಆಸೆ ತೋರಿಸಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ನಮ್ಮ ಶಾಸಕರಲ್ಲಿ ಒಬ್ಬರನ್ನ ಸೆಳೆಯಲು ಯತ್ನಿಸಿದ್ರೆ, ಜೆಡಿಎಸ್ ನಾಯಕರು ಮತ್ತು ಮುಖಂಡರ ಶಕ್ತಿ ಏನು ಅಂತಾ ಗೊತ್ತಾಗುತ್ತೆ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಸಿದರಲ್ಲದೆ, ನಮ್ಮ ಪಕ್ಷದ ಶಾಸಕರು ಎಲ್ಲರೂ ಒಳ್ಳೆಯ ವರಿದ್ದಾರೆ. ಯಾರೂ ಅಪರೇಷನ್ ಕಮಲಕ್ಕೆ ಬಲಿ ಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Translate »