ವಿ.ಶ್ರೀನಿವಾಸಪ್ರಸಾದ್ ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ: ಬಿಎಸ್‍ವೈ
ಮೈಸೂರು

ವಿ.ಶ್ರೀನಿವಾಸಪ್ರಸಾದ್ ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ: ಬಿಎಸ್‍ವೈ

April 15, 2019

ನಂಜನಗೂಡು: ನನಗೆ ಚುನಾವಣೆ ರಾಜಕೀಯ ಸಾಕು, ನಾನು ಯಾವುದೇ ಕಾರಣದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದರೂ ಸಹ ನಮ್ಮ ಒತ್ತಾಯಕ್ಕೆ ಮಣಿದು ವಿ.ಶ್ರೀನಿವಾಸಪ್ರಸಾದ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅವರನ್ನು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದ್ದು, ಕಾರ್ಯ ಕರ್ತರು ಶ್ರಮಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದಾರೆ.

ನಗರದ ಊಟಿ ರಸ್ತೆಯಲ್ಲಿರುವ ವಿದ್ಯಾ ವರ್ಧಕ ಶಾಲೆ ಮೈದಾನದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ಪರ ಚುನಾ ವಣೆ ಪ್ರಚಾರ ಸಮಾವೇಶ ಉದ್ದೇಶಿಸಿ ಮಾತ ನಾಡುತ್ತಿದ್ದರು. ವಿ.ಶ್ರೀನಿವಾಸಪ್ರಸಾದ್ ಅವರಂತಹ ಅನುಭವಿ ರಾಜಕಾರಣಿ ಸಿಗೊಲ್ಲ. ಈ ಭಾಗದಲ್ಲಿ ವಿ.ಶ್ರೀನಿವಾಸ ಪ್ರಸಾದ್ ಗೆಲ್ಲುವುದು ಶತಃಸಿದ್ದ. ಈ ಮೂಲಕ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ 22 ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದರು.
ನನ್ನ ರಾಜಕೀಯ ಜೀವನದಲ್ಲಿ ಜಾತಿ ರಾಜಕೀಯ ಮಾಡೋಲ್ಲ. ವೀರಶೈವ ಸಮಾಜ ವನ್ನು ಒಡೆದಾಳಲು ಕೆಲವು ಶಕ್ತಿಗಳು ಕೆಲಸ ಮಾಡುತ್ತಿವೆ. ವೀರಶೈವ ಬಂಧುಗಳು ಎಚ್ಚರ ವಹಿಸಬೇಕೆಂದು ಬಿ.ಎಸ್.ಯಡಿಯೂರಪ್ಪ ಕಿವಿಮಾತು ಹೇಳಿದರು.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಸ್ಥಾನದ ಗೌರವವನ್ನು ಮರೆತು ತಲೆ ತಿರುಕನಂತೆ ವರ್ತಿಸುತ್ತಿದ್ದಾರೆ. ಸೈನಿಕರ ಬಗ್ಗೆ ಅವಹೇಳನÀಕಾರಿ ಮಾತುಗಳು, ಆದಾಯ ತೆರಿಗೆ ಅಧಿಕಾರಿಗಳ ದಾಳಿ ಬಗ್ಗೆ ನಡೆದುಕೊಂಡ ರೀತಿಯನ್ನು ಖಂಡಿಸಿದ ಅವರು, ಜೆಡಿಎಸ್ ಹಣ, ತೋಳ್ಬಲ, ಅಧಿಕಾರ, ಹೆಂಡದ ಬಲದಿಂದ ಏನನ್ನಾದರೂ ಸಾಧಿಸುತ್ತೇನೆ ಎಂದು ತಿಳಿದು ಕೊಂಡಿದ್ದಾರೆ. ಅದು ಕೇವಲ ಭ್ರಮೆ, ಮತದಾರರು ಜಾಗೃತರಾಗಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ 5 ವರ್ಷದ ಆಡಳಿತ ದೇಶದ ಅಭಿವೃದ್ದಿ, ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡಿದ್ದಾರೆ. ಭಾರತದ ಬಗ್ಗೆ ವಿದೇಶದಲ್ಲಿ ಹೆಚ್ಚಿನ ಗೌರವ ಸಿಗುವಂತೆ ಮಾಡಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 300ಕ್ಕೂ ಹೆಚ್ಚು ಸೀಟು ಗೆಲ್ಲಲಿದೆ ಎಂದರು.

ವೇದಿಕೆಯಲ್ಲಿ ಶಾಸಕ ಬಿ.ಹರ್ಷವರ್ಧನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೋಟೆಶಿವಣ್ಣ, ಚಾ. ನಗರ ಉಸ್ತುವಾರಿ ರಾಜೇಂದ್ರ, ಮಾಜಿ ಶಾಸಕ ಭಾರತೀಶಂಕರ್, ರಾಜ್ಯ ಬಿಜೆಪಿ ಮುಖಂಡರಾದ, ಎಸ್.ಮಹದೇವಯ್ಯ, ಸುಬ್ಬಣ್ಣ, ಚಿಕ್ಕರಂಗನಾಯಕ, ಕೆ.ಕೆ.ಜಯ ದೇವು, ಜಿಪಂ ಸದಸ್ಯೆ ಮಂಗಳಾ ಸೋಮಶೇಖರ್, ತಾಲೂಕು ಅಧ್ಯಕ್ಷ ಕೆಂಡಗಣ್ಣಪ್ಪ, ನಗರಾಧ್ಯಕ್ಷ ಬಾಲಚಂದ್ರು, ಯು.ಎನ್.ಪದ್ಮನಾಭರಾವ್, ಇಲಿಯಾಸ್ ಅಹಮ್ಮದ್, ತಾಪಂ ಅಧ್ಯಕ್ಷ ಬಿ.ಎಸ್. ಮಹದೇವಪ್ಪ, ಜಿಪಂ ಮಾಜಿ ಸದಸ್ಯ ಕೆಂಪಣ್ಣ, ಮಹೇಶ್‍ಕುಮಾರ್, ಶಾಮ್ ಪಟೇಲ್, ವಳಗೆರೆ ಪುಟ್ಟಸ್ವಾಮಿ, ಹಾಡ್ಯ ಶಂಕರ, ಎನ್.ಆರ್.ಕೃಷ್ಣಪ್ಪಗೌಡ, ಪ್ರೇಮಾ ಶಂಭಯ್ಯ, ಕಪಿಲೇಶ್, ಸಂಜಯ್‍ಶರ್ಮಾ, ಮಾದೇಶ, ಕೃಷ್ಣಂ ರಾಜು, ನಗರಸಭಾ ಸದಸ್ಯರಾದ ಆನಂದ, ಮಹದೇವಸ್ವಾಮಿ, ಕಸುವಿನಹಳ್ಳಿ ಗಿರಿ, ಜಿ.ಬಸವರಾಜು, ಮಹದೇವಸ್ವಾಮಿ, ಕುರಟ್ಟಿ ಸಿದ್ದರಾಜು, ಭಾಗ್ಯ ಸೇರಿದಂತೆ ಪ್ರಮುಖರು ಇದ್ದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕಿದ್ದಾಗ ಕಾಂಗ್ರೆಸ್ ಅವರೊಂದಿಗೆ ಸರಿಯಾಗಿ ನಡೆದುಕೊಳ್ಳಲಿಲ್ಲ. ಅಲ್ಲದೆ ಚುನಾವಣೆಯಲ್ಲಿ ಅವರನ್ನೇ ಸೋಲಿಸಿದರು. ಅವರು ತೀರಿಕೊಂಡಾಗ ರಾಜ್‍ಘಾಟ್‍ನಲ್ಲಿ 6 ಅಡಿ ಜಾಗ ನೀಡಲಿಲ್ಲ, ಭಾರತರತ್ನವನ್ನೂ ನೀಡಲಿಲ್ಲ. ಈ ಪಕ್ಷ ಪರಿಶಿಷ್ಟ ವರ್ಗದವರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ.

Translate »