ಮೈಸೂರು,ಆ.30(ಎಸ್‍ಬಿಡಿ)-ಈ ಬಾರಿ ದಸರಾ ಮಹೋತ್ಸವಕ್ಕೆ ಬೆಂಗಳೂರು ಕಡೆಯಿಂದ ಬರುವ ಪ್ರವಾಸಿಗರಿಗೆ ವಿಶೇಷ ರೀತಿಯ ಸ್ವಾಗತ ಕಾದಿದೆ. ಅಂಬೇಡ್ಕರ್ ವೃತ್ತ(ಎಫ್‍ಟಿಎಸ್ ಸರ್ಕಲ್)ದಿಂದ ಗ್ರಾಮಾಂತರ ಬಸ್ ನಿಲ್ದಾಣದ ಕಡೆಗೆ ಸ್ವಲ್ಪ ದೂರ ಕ್ರಮಿಸುತ್ತಿದ್ದಂತೆ ರಸ್ತೆ ಮಧ್ಯೆ ಒಂಟಿಯಾಗಿ ನಿಂತಿರುವ ವಿರೂಪ ಸ್ಮಾರಕವೊಂದು ಸ್ವಾಗತ ಕೋರಲಿದೆ. ಜೊತೆ ಜೊತೆಗೆ ಪಾರಂಪರಿಕ ನಗರಿಯ ನಿರ್ಲಕ್ಷ್ಯ ವ್ಯವಸ್ಥೆಯನ್ನೂ ಎತ್ತಿ ತೋರಿಸಲಿದೆ.
ಹೌದು, ಅಭಿವೃದ್ಧಿ ನೆಪದಲ್ಲಿ ಮೈಸೂರು-ಬೆಂಗ ಳೂರು ಮುಖ್ಯರಸ್ತೆ ಕಡೆಗಿರುವ ಸರ್ಕಾರಿ ಅತಿಥಿ ಗೃಹದ ಸ್ವಾಗತ ಕಮಾನು(ಆರ್ಚ್) ಕೆರೆದು ಹಾಳು ಮಾಡಲಾಗಿದ್ದು, ಹೆದ್ದಾರಿ ಮಧ್ಯೆ ಅನಾಥವಾಗಿ ರೋಧಿಸುವಂತಿದೆ. ರಾಜ್ಯ ಹಣಕಾಸು ಆಯೋಗ (ಎಸ್‍ಎಫ್‍ಸಿ)ದ ಅನುದಾನದಲ್ಲಿ ನಗರ ಪಾಲಿಕೆ ವತಿಯಿಂದ ಫೈವ್‍ಲೈಟ್ ವೃತ್ತದಿಂದ ಹೈದರಾಲಿ ರಸ್ತೆವರೆಗೆ ಕೈಗೊಂಡಿರುವ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗಾಗಿ ಈ ಸ್ಮಾರಕದ ಭವ್ಯತೆಯನ್ನೇ ಬಲಿ ಪಡೆಯಲಾಗಿದೆ. ವರ್ಷದಿಂದ ನಡೆಯುತ್ತಿರುವ 6 ಪಥ ರಸ್ತೆ ಅಭಿವೃದ್ಧಿ ಕಾಮ ಗಾರಿಯೂ ಅರ್ಧಕ್ಕೆ ಮೊಟಕಾಗಿದೆ. ಆರ್ಚ್‍ಗೆ ಹೊಂದಿ ಕೊಂಡಿದ್ದ ಪಾರಂಪರಿಕ ಕಾಂಪೌಂಡ್‍ನ್ನು ತೆರವು ಮಾಡಿ, ಆರ್ಚ್ ಹಿಂಭಾಗಕ್ಕೂ ಒಂದು ಪಥ ನಿರ್ಮಿಸ ಲಾಗಿದೆ. ಹಾಗಾಗಿ ರಸ್ತೆಗಳ ನಡುವೆ ಪಾರಂಪರಿಕ ಸ್ಮಾರಕ(ಆರ್ಚ್) ಒಂಟಿಯಾಗಿ ನಲುಗುತ್ತಿದೆ.
ವಿಶಿಷ್ಟ ಹಾಗೂ ಅಪರೂಪ ಕಲಾಕೃತಿಯುಳ್ಳ ಆಕರ್ಷಕ ಆರ್ಚ್, ನಿರ್ವಹಣೆ ಕೊರತೆಯಿಂದ ಅಲ್ಲಲ್ಲಿ ಭಗ್ನವಾಗಿತ್ತು. ರಸ್ತೆ ಅಭಿವೃದ್ಧಿ ಕಾಮಗಾರಿ ಜೊತೆಗೆ ಈ ಪಾರಂಪರಿಕ ಸ್ಮಾರಕದ ನವೀಕರಣ ವನ್ನೂ ಗುತ್ತಿಗೆದಾರರಿಗೆ ವಹಿಸಲಾಗಿದೆ. ದುರಂತ ವೆಂದರೆ ಪಾರಂಪರಿಕ ಪರಿಜ್ಞಾನವೇ ಇಲ್ಲದೆ ಗಾರೆ ಉದುರಿದ್ದ ಸ್ಥಳಕ್ಕೆ ಸಿಮೆಂಟ್ ಪ್ಲಾಸ್ಟರಿಂಗ್ ಮಾಡುತ್ತಿ ದ್ದರು. ಸಂಬಂಧಪಟ್ಟ ಇಂಜಿನಿಯರ್‍ಗಳು ಇದನ್ನು ಕಂಡೂ ಕಾಣದಂತೆ ಸುಮ್ಮನಿದ್ದರು. ಈ ಬಗ್ಗೆ `ಮೈಸೂರು ಮಿತ್ರ’ ಕಳೆದ ಜೂ.26ರ ಸಂಚಿಕೆಯಲ್ಲಿ ಬೆಳಕು ಚೆಲ್ಲಿದ್ದರ ಪರಿಣಾಮ ಕೊನೆಗೂ ಪುರಾತತ್ವ ಇಲಾಖೆ ಎಚ್ಚೆತ್ತು ಅವೈಜ್ಞಾನಿಕ ನವೀಕರಣ ಕಾರ್ಯವನ್ನು ಸ್ಥಗಿತಗೊಳಿಸಿತ್ತು. ಆದರೆ ತಜ್ಞರ ಅಭಿಪ್ರಾಯ ಪಡೆದು, ಸೂಕ್ತ ರೀತಿಯಲ್ಲಿ ನವೀಕರಿಸುವ ಕಾರ್ಯಕ್ಕೆ ಈವರೆಗೂ ಮುಂದಾಗಿಲ್ಲ. 2 ತಿಂಗಳಿಂದ ಇದರತ್ತ ಗಮನ ಹರಿಸಿಲ್ಲ.
ಸರ್ಕಾರಿ ಅತಿಥಿ ಗೃಹ ಮಹಾರಾಜರ ಅವಿಸ್ಮರಣೀಯ ಕೊಡುಗೆ. ಈ ಪಾರಂಪರಿಕ, ಭವ್ಯ ಬಂಗಲೆಯ ಆವರಣಕ್ಕೆ ಮುಖ್ಯ ಪ್ರವೇಶ ದ್ವಾರವಾಗಿದ್ದ ಕಮಾನು ಇದೀಗ ಸುಂದರ ಸರಪಳಿಯಿಂದ ಕಳಚಿ ವಿರೂಪ ವಾಗಿದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ, ನ್ಯಾಯಾ ಧೀಶರು, ಮುಖ್ಯಮಂತ್ರಿ, ಕೇಂದ್ರ ಹಾಗೂ ರಾಜ್ಯದ ಸಚಿವರು, ಶಾಸಕರು, ಮುಖ್ಯ ಅಧಿಕಾರಿಗಳು ಸೇರಿ ದಂತೆ ಮೈಸೂರಿಗೆ ಬರುವ ಬಹುತೇಕ ಗಣ್ಯಾತಿ ಗಣ್ಯರು ಇದೇ ಅತಿಥಿ ಗೃಹದಲ್ಲಿ ತಂಗುತ್ತಾರೆ. ಪ್ರಮುಖ ಸಭೆ, ಸಮಾರಂಭಗಳನ್ನೂ ಇಲ್ಲಿಯೇ ನಡೆಸುತ್ತಾರೆ.
ಗಣ್ಯರು ಸದ್ಯ ವಿರೂಪವಾಗಿರುವ ಅನಾಥ ಕಮಾನು ಮೂಲಕವೇ ಸರ್ಕಾರಿ ಅತಿಥಿ ಗೃಹ ಪ್ರವೇಶಿಸಬೇಕು. ಅಲ್ಲದೆ ಮೈಸೂರು-ಬೆಂಗಳೂರು ಪ್ರಮುಖ ರಸ್ತೆಯಲ್ಲಿ ನಿತ್ಯ ಸಂಚರಿಸುವ ಸಾವಿರಾರು ಪ್ರವಾಸಿಗರಿಗೂ ಕಮಾನಿನ ದುಸ್ಥಿತಿ ಗೋಚರವಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ವಿಶ್ವವಿಖ್ಯಾತ ದಸರಾ ಮಹೋ ತ್ಸವ ಆರಂಭವಾಗುತ್ತದೆ. ಆಗ ಈ ಮಾರ್ಗದಲ್ಲಿ ದೇಶ-ವಿದೇಶಗಳ ಸಾವಿರಾರು ಪ್ರವಾಸಿಗರು ಓಡಾಡು ತ್ತಾರೆ. ಅವರೆಲ್ಲಾ ವಿರೂಪವಾಗಿರುವ ಕಮಾನು ನೋಡಿ, ಯಾವ ಬಗೆಯಲ್ಲಿ ವಿಶ್ಲೇಷಿಸಬಹುದೆಂದು ನಾವೆಲ್ಲಾ ಊಹಿಸಬೇಕು. ಪಾರಂಪರಿಕ ನಗರಿ ಮೈಸೂರಿಗೆ ಪ್ರವೇಶಿಸುತ್ತಿದ್ದಂತೆ ಅನಾಥ ಸ್ಮಾರಕ ವೊಂದು ಕಣ್ಣಿಗೆ ಬಿದ್ದರೆ ಅವರಲ್ಲಿ ಯಾವ ರೀತಿಯ ಭಾವನೆ ಮೂಡಬಹುದೆಂದು ಚಿಂತಿಸಲೇಬೇಕು. ಪಾರಂಪರಿಕ ಸ್ಮಾರಕವನ್ನು ಕಗ್ಗತ್ತಲಲ್ಲಿ ಮುಳುಗಿಸಿ, ರಸ್ತೆ, ವೃತ್ತಗಳನ್ನೆಲ್ಲಾ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಸಿಂಗರಿಸಿದರೆ ಏನು ಚೆಂದ. ಈಗಿರುವ ಸ್ಥಿತಿಯಲ್ಲಿ ಆರ್ಚ್‍ಗೆ ವಿದ್ಯುತ್ ದೀಪ ಅಳವಡಿಸಿದರೆ ನಮ್ಮ ಮೂರ್ಖತನ ಪ್ರದರ್ಶಿಸಿದಂತಾಗುತ್ತದೆ. ಯಶಸ್ವಿ ದಸರಾ ಆಶಯದೊಂದಿಗೆ ಮೈಸೂರಲ್ಲೇ ಇರುವ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನವರು ಸರ್ಕಾರಿ ಅತಿಥಿ ಗೃಹದಲ್ಲೇ ಈಗಾಗಲೇ ಹಲವು ಸಭೆ ನಡೆಸಿದ್ದಾರೆ. ಅಲ್ಲಿಯೇ ರಾತ್ರಿ ವಾಸ್ತವ್ಯ ಹೂಡಿದ್ದಾರೆ. ಅವರಿಗೂ ಈ ಅಧೋಗತಿ ಕಣ್ಣಿಗೆ ಬಿದ್ದಿಲ್ಲವೇ? ಕಂಡರೂ ಇದೆಲ್ಲಾ ನಮಗೇಕೆ ಎಂಬ ತಾತ್ಸಾರವೇ?. ಇನ್ನು ಕಾಲ ಮಿಂಚಿಲ್ಲ. ದಸರಾ ಆರಂಭ ವಾಗುವುದರೊಳಗೆ ಈ ಪಾರಂಪರಿಕ ಸ್ಮಾರಕಕ್ಕೆ ಕಾಯಕಲ್ಪ ನೀಡಲು ಕ್ರಮ ಕೈಗೊಳ್ಳುವ ಮೂಲಕ ಮೈಸೂರಿನ ಗೌರವ ಕಾಪಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪರಂಪರೆ ಕಳಚುವ ಭೀತಿ: ಪಾರಂಪರಿಕ ನಗರಿ ಮೈಸೂರು ಎಂಬ ಕೀರ್ತಿ ಕಳಚುವ ಭೀತಿ ಎದುರಾ ಗಿದೆ. ಮಹಾರಾಜರ ಕಾಲದಲ್ಲಿ ನಿರ್ಮಾಣವಾದ ಅನೇಕ ಪಾರಂಪರಿಕ ಕಟ್ಟಡಗಳು, ಸ್ಮಾರಕಗಳು ದುಸ್ಥಿತಿಯಲ್ಲಿರುವುದು ಈ ಆತಂಕಕ್ಕೆ ಕಾರಣವಾಗಿದೆ. ಶತಮಾನಗಳ ಕಾಲ ಉಳಿಯುವಂತಹ ಕೊಡುಗೆ ನೀಡುವ ಸಾಮಥ್ರ್ಯವಿರಲಿ, ಇರುವುದನ್ನು ಉಳಿಸಿ ಕೊಳ್ಳುವ ಯೋಗ್ಯತೆಯೂ ನಮಗಿಲ್ಲವೇ ಎಂಬ ವಿಷಾದ ಭಾವ ಸಾರ್ವಜನಿಕರನ್ನು ಕಾಡುತ್ತಿದೆ.