ಅಚ್ಛೇ ದಿನ್ ಎಲ್ಲಿ?
ಮೈಸೂರು

ಅಚ್ಛೇ ದಿನ್ ಎಲ್ಲಿ?

September 11, 2018

ಮೈಸೂರು:  ಅಧಿಕಾರಕ್ಕೆ ಬರುವ ಮುನ್ನ ದೇಶಕ್ಕೆ ಅಚ್ಛೇ ದಿನ್ (ಒಳ್ಳೆಯ ದಿನ) ಬರುತ್ತದೆ ಎಂದು ನರೇಂದ್ರ ಮೋದಿ ಹೇಳುತ್ತಿದ್ದರು. ಆದರೆ ಅಧಿಕಾರ ಹಿಡಿದು ನಾಲ್ಕೂವರೆ ವರ್ಷಗಳಾದರೂ ಅಚ್ಛೇ ದಿನ್ ಬರಲೇ ಇಲ್ಲ. ಎಲ್ಲಿ ಅಚ್ಛೇ ದಿನ್ ಎಂದು ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಇಂದಿಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದರು.

ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ದೇಶಾದ್ಯಂತ ಕರೆ ನೀಡಿರುವ ಬಂದ್‍ಗೆ ಪ್ರಗತಿಪರರರು ಬೆಂಬಲ ವ್ಯಕ್ತಪಡಿಸಿದ್ದು, ಅಗ್ರಹಾರ ವೃತ್ತದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮುನ್ನ ದೇಶಕ್ಕೆ ಅಚ್ಛೇ ದಿನಗಳು ಬರಲಿವೆ ಎಂದು ಹೇಳುತ್ತಿದ್ದರು. ಆದರೆ ಅಧಿಕಾರ ಹಿಡಿದು ನಾಲ್ಕುವರೆ ವರ್ಷಗಳಾದರೂ ದೇಶಕ್ಕೆ ಇನ್ನೂ ಅಚ್ಛೇ ದಿನ್ ಬಂದಿಲ್ಲ. ಬದಲಾಗಿ ಸಂಕಷ್ಟಕ್ಕೆ ಸಿಲುಕಿ ದೇಶದ ಜನ ಒದ್ದಾಡುತ್ತಿದ್ದಾರೆ ಎಂದು ಕಿಡಿಕಾರಿದರು. ದೇಶದ ಸಂವಿಧಾನ ಬದಲಿಸಿ, ಮನುಸ್ಮೃತಿ ಗಟ್ಟಿಗೊಳಿಸಲು ಮೋದಿ ಸರ್ಕಾರ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ. ವಿಚಾರವಾದಿ ಪ್ರೊ.ಮಹೇಶ್‍ಚಂದ್ರ ಗುರು, ಮೋದಿ ಸರ್ಕಾರ ಉದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿದೆ. ದೀನ ದಲಿತರನ್ನು ಸಂಪೂರ್ಣವಾಗಿ ಮರೆತಿದೆ. ಇದನ್ನು ಮನಗಂಡು ದೇಶದ ಜನತೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕು ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು. ಪ್ರತಿಭಟನೆಯಲ್ಲಿ ಕಸಾಪ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಎಡಪಕ್ಷಗಳ ಮುಖಂಡ ಲ.ಜಗನ್ನಾಥ್, ಜಾಕಿರ್ ಹುಸೇನ್, ಸಿ.ಟಿ.ಆಚಾರ್ಯ, ನಾಲಾ ಬೀದಿ ರವಿ ಇನ್ನಿತರರು ಪಾಲ್ಗೊಂಡಿದ್ದರು.

Translate »