ರಾಜ್ಯದಲ್ಲಿ ಸರ್ಕಾರಿ ಪ್ರಾಯೋಜಿತ ಬಂದ್
ಮೈಸೂರು

ರಾಜ್ಯದಲ್ಲಿ ಸರ್ಕಾರಿ ಪ್ರಾಯೋಜಿತ ಬಂದ್

September 11, 2018

ಮೈಸೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ಇಂದು ದೇಶಾದ್ಯಂತ ಬಂದ್‍ಗೆ ಕರೆ ನೀಡಿದ್ದು, ರಾಜ್ಯದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಸರ್ಕಾರಿ ಪ್ರಾಯೋಜಿತ ಬಂದ್ ಆಚರಿಸುವ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಋಣ ತೀರಿಸಲು ಮುಂದಾಗಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಟೀಕಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕರೆ ನೀಡಿದ ಭಾರತ ಬಂದ್ ರಾಜ್ಯದಲ್ಲಿ ಸರ್ಕಾ ರದ ಪ್ರಾಯೋಜಕತ್ವದಲ್ಲಿ ನಡೆಯುತ್ತಿದೆ. ವಿಧಾನ ಸಭಾ ಚುನಾವಣೆಯಲ್ಲಿ 37 ಸ್ಥಾನ ಪಡೆದವರಿಗೆ ಅಧಿಕಾರ ಕೊಟ್ಟ ಹಿನ್ನೆಲೆಯಲ್ಲಿ ಈ ರೀತಿ ಕೃತಜ್ಞತೆ ಅರ್ಪಿಸಲಾಗುತ್ತಿದೆ ಎಂದು ಲೇವಡಿ ಮಾಡಿದರು.

ರಾಜ್ಯದಲ್ಲಿ ಶಾಲಾ-ಕಾಲೇಜುಗಳಿಗೆ ಜಿಲ್ಲಾಧಿಕಾರಿ ಗಳ ಮೂಲಕ ರಜೆ ಘೋಷಣೆ ಮಾಡಿಸಲಾಗಿದೆ. ವಿಧಾನಸೌಧ, ವಿಕಾಸಸೌಧ ಸೇರಿದಂತೆ ಸರ್ಕಾರಿ ಇಲಾಖೆಗಳ ಕಾರ್ಯಚಟುವಟಿಕೆಗಳನ್ನು ಸ್ಥಗಿತ ಗೊಳಿಸಲಾಗಿದೆ. ಸಾರಿಗೆ ವ್ಯವಸ್ಥೆಯನ್ನೂ ಬಂದ್ ಮಾಡಿಸಲಾಗಿದೆ. ಒಟ್ಟಾರೆ ರಾಜ್ಯ ಮೈತ್ರಿ ಸರ್ಕಾರ ಬಂದ್‍ನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.

ಯು.ಟಿ.ಖಾದರ್ ಈಗೆಲ್ಲಿ ಹೋದರು?: ಬಿಜೆಪಿ ವತಿಯಿಂದ ಮಂಗಳೂರು ಚಲೋ ಹಮ್ಮಿಕೊಂಡಿದ್ದ ವೇಳೆ ಇದಕ್ಕೆ ಬೆಂಬಲ ನೀಡುವವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕೆಂದು ಅವಹೇಳನಕಾರಿಯಾಗಿ ಮಾತನಾಡಿದ್ದ ಕಾಂಗ್ರೆಸ್‍ನ ಯು.ಟಿ.ಖಾದರ್ ಈಗೆಲ್ಲಿ ಹೋಗಿದ್ದಾರೆ ಎಂದು ಕಿಡಿಕಾರಿದರು.

ತೈಲದ ಮೇಲೆ ರಾಜ್ಯ ಸರ್ಕಾರದ ತೆರಿಗೆ ಹೆಚ್ಚಳ: ಮೈತ್ರಿ ಸರ್ಕಾರ ರಚನೆಯಾಗುತ್ತಿದ್ದಂತೆ ರೈತರ ಸಾಲ ಮನ್ನಾ ಎಂದು ಕಣ್ಣೊರೆಸುವ ನಾಟಕವಾಡಿ ಮತ್ತೊಂದು ಬಜೆಟ್ ಮಂಡಿಸಿದಾಗ ಹೆಚ್.ಡಿ.ಕುಮಾರಸ್ವಾಮಿ, ಪೆಟ್ರೋಲ್ ಮೇಲಿದ್ದ ಶೇ.30ರಷ್ಟು ರಾಜ್ಯ ಸರ್ಕಾರದ ತೆರಿಗೆಯನ್ನು ಶೇ.32ಕ್ಕೆ ಹೆಚ್ಚಳ ಮಾಡಿದರು. ಅದೇ ರೀತಿ ಡೀಸೆಲ್ ಮೇಲಿದ್ದ ಶೇ.19ರಷ್ಟು ತೆರಿಗೆಯನ್ನು ಶೇ.21ಕ್ಕೆ ಹೆಚ್ಚಳ ಮಾಡಿದರು. ಈ ವೇಳೆ ಇವರಿಗೆ ಜನತೆಯ ಹಿತಕಾಯಬೇಕು ಎನ್ನಿಸಲಿಲ್ಲವೇಕೆ? ಎಂದು ಗುಡುಗಿದರು.

ಆಮದು ಕಡಿಮೆಯಾಗಿ ದುಬಾರಿ: 2012ರ ಮೇನಲ್ಲಿ ಪೆಟ್ರೋಲ್ ಲೀ.ಗೆ 82 ರೂ. ಇತ್ತು. ಇದನ್ನು ಅನೇಕ ಮಾಧ್ಯಮಗಳು ವರದಿ ಮಾಡಿದ್ದವು. ಪ್ರಸ್ತುತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಕಾರಣವೆಂದರೆ, ಇರಾನ್ ನಿಂದ ತೈಲ ಆಮದಿಗೆ ಅಮೇರಿಕ ಹೇರಿರುವ ನಿರ್ಬಂಧ ವಾಗಿದೆ. ಹೀಗಾಗಿ ಇರಾನ್‍ನಿಂದ ತೈಲ ಆಮದು ಹಂತ ಹಂತವಾಗಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ತೈಲ ಬೆಲೆಯಲ್ಲಿ ಏರಿಕೆ ಉಂಟಾಗಿದೆ. ಅಗತ್ಯ ತೈಲ ಆಮದಿಗಾಗಿ ತೈಲ ಪೂರೈಕೆ ಮಾಡುತ್ತಿದ್ದ ಪ್ರಮುಖ ದೇಶಗಳಿಗೆ ಬೇಡಿಕೆ ಮುಂದಿಟ್ಟಿದ್ದು, ಅವುಗಳು ಹೆಚ್ಚು ತೈಲ ರಫ್ತು ಮಾಡಲು ನಿರಾಕರಿಸಿವೆ. ಇದೊಂದು ಜಾಗತಿಕ ಸಮಸ್ಯೆಯಾಗಿದ್ದು, ಆರು ತಿಂಗಳಲ್ಲಿ ಸರಿಯಾಗಲಿದೆ ಎಂದು ಪ್ರತಿಪಾದಿಸಿದ ಅವರು, ಅಧಿಕ ಪ್ರಮಾಣದಲ್ಲಿ ತೈಲ ಆಮದಿಗಾಗಿ ಸೌದಿ ಅರೆಬಿಯಾ ಹಾಗೂ ರಷ್ಯಾದೊಂದಿಗೆ ಭಾರತದ ಮಾತುಕತೆ ಮುಂದು ವರೆದಿದೆ ಎಂದು ತಿಳಿಸಿದರು.

ಅರ್ಥ ವ್ಯವಸ್ಥೆ ಹಳ್ಳ ಹಿಡಿಸಿದ ಸಿಂಗ್: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆರ್ಥಿಕ ಚಿಂತನೆಗಳಿಂದ ಇಂದು ದೇಶದಲ್ಲಿ ಆರ್ಥಿಕ ವ್ಯವಸ್ಥೆ ಹಳ್ಳ ಹಿಡಿದಿದೆ. ಇದನ್ನು ಸರಿಪಡಿಸಲು ಪ್ರಧಾನಿ ನರೇಂದ್ರ ಮೋದಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ರೈತರ ಆದಾಯ ದ್ವಿಗುಣಗೊಳಿಸಲು ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ ಮಾಡಿದ್ದಾರೆ. ಇವತ್ತಿನ ಪರಿಸ್ಥಿತಿಯಲ್ಲಿ ಮೋದಿ ಅವರ ಜಾಗದಲ್ಲಿ ಬೇರೆ ಯಾರೇ ಇದ್ದರೂ ಚುನಾವಣೆ ಬಗ್ಗೆ ಯೋಚನೆ ಮಾಡಿ ಪಾಲಿಟಿಕ್ಸ್ ಗಿಮಿಕ್ಸ್ ಮಾಡುತ್ತಿದ್ದರು. ಆದರೆ ಮೋದಿಯವರಿಗೆ ದೇಶದ ಹಿತವೇ ಮುಖ್ಯ. ದೇಶದ ಒಳಿತಿಗಾಗಿ ಅವರು ಇಷ್ಟು ವಿರೋಧ ಹಾಗೂ ಆರೋಪಗಳನ್ನು ಸಹಿಸಿಕೊಳ್ಳುತ್ತಿದ್ದಾರೆ ಎಂದರು.

ಯುಪಿಎ ಸರ್ಕಾರದ ಅವಧಿಯಲ್ಲಿ ತೈಲ ಬೆಲೆ ಇಳಿ ಸುವ ಸಲುವಾಗಿ ಆಯಿಲ್ ಬಾಂಡ್‍ಗಳನ್ನು ತೈಲ ಕಂಪನಿ ಗಳಿಗೆ ನೀಡಲಾಯಿತು. ಈ ಬಾಂಡ್‍ಗಳ ಮೆಚೂರಿಟಿ ಹಣಕ್ಕೆ ಸಂಬಂಧಿಸಿದಂತೆ ಎನ್‍ಡಿಎ ಸರ್ಕಾರ 2014-18ರ ಅವಧಿಗೆ 40,226 ಕೋಟಿ ರೂ. ಬಡ್ಡಿ ನೀಡಿದೆ. ಕಾಂಗ್ರೆಸ್ ದುರಾಡಳಿತದಿಂದ ದೇಶದಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಮೋದಿ ಸರ್ಕಾರ ಪರಿಹರಿಸುತ್ತಿದ್ದು, ಮುಂದಿನ 50 ವರ್ಷಗಳವರೆಗೆ ಬಿಜೆಪಿ ದೇಶದ ಆಡಳಿತ ನಡೆಸಲಿದೆ. ಕಾಂಗ್ರೆಸ್‍ನವರು ಪ್ರತಿಭಟನೆ ಮಾಡಿ ಕೊಂಡು ವಿರೋಧ ಪಕ್ಷದಲ್ಲೇ ಕೂರ ಬೇಕಾಗುತ್ತದೆ ಎಂದು ಭವಿಷ್ಯ ನುಡಿದರು. ಶಾಸಕ ಎಲ್.ನಾಗೇಂದ್ರ, ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಹೆಚ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಹೆಚ್.ವಿ. ರಾಜೀವ್, ಮಾಧ್ಯಮ ಸಂಚಾಲಕ ಪ್ರಭಾಕರ್ ಸಿಂಧ್ಯಾ ಗೋಷ್ಠಿಯಲ್ಲಿದ್ದರು.

Translate »