ಯಾರು ಬೇಕಾದರೂ ಕೃಷಿ ಭೂಮಿ  ನೇರ ಖರೀದಿ ಕಾಯ್ದೆ ಜಾರಿಗೆ ರೈತ  ಸಂಘಟನೆಗಳ ಒಕ್ಕೂಟ ತೀವ್ರ ವಿರೋಧ
ಮೈಸೂರು

ಯಾರು ಬೇಕಾದರೂ ಕೃಷಿ ಭೂಮಿ ನೇರ ಖರೀದಿ ಕಾಯ್ದೆ ಜಾರಿಗೆ ರೈತ ಸಂಘಟನೆಗಳ ಒಕ್ಕೂಟ ತೀವ್ರ ವಿರೋಧ

March 17, 2020

ಮೈಸೂರು, ಮಾ.16(ಆರ್‍ಕೆಬಿ)- ಬಂಡವಾಳಶಾಹಿಗಳು, ಕೈಗಾರಿಕೋದ್ಯಮಿಗಳು ಕೃಷಿ ಭೂಮಿಯನ್ನು ನೇರವಾಗಿ ಖರೀದಿಸಬಹುದು ಎಂಬ ಕಾಯ್ದೆ ಜಾರಿಗೆ ತರುತ್ತಿರುವ ಸರ್ಕಾರದ ಕ್ರಮವನ್ನು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಖಂಡಿಸಿದೆ.
ಹಾಲಿ ಜಾರಿಯಲ್ಲಿದ್ದ 79 ಎ ಮತ್ತು ಬಿ ಕಾಯ್ದೆಯನ್ನು ರದ್ದುಗೊಳಿ ಸುವುದು, ಕೃಷಿ ಕ್ಷೇತ್ರದ ಅವನತಿಗೆ ಕಾರಣವಾಗುತ್ತದೆ. ಕೈಗಾರಿಕೋ ದ್ಯಮಿಗಳಿಗೆ ಪಾಳು ಭೂಮಿ ನೀಡುತ್ತೇವೆ ಎಂದು ಬಂಡವಾಳ ಶಾಹಿಗಳ ಒತ್ತಡಕ್ಕೆ ಮಣಿದು ಇಂಥ ಕಾಯ್ದೆ ಜಾರಿಗೆ ತರುವುದು ಸರಿಯಾದ ಕ್ರಮವಲ್ಲ. ಸರ್ಕಾರ ಈ ನಿರ್ಧಾರವನ್ನು ಕೂಡಲೇ ಕೈ ಬಿಡಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ, ಗುಲ್ಬರ್ಗ ಮತ್ತಿತರ ದೊಡ್ಡ ದೊಡ್ಡ ನಗರಗಳ ಸುತ್ತ ಲಕ್ಷಾಂತರ ಎಕರೆ ಕೃಷಿಭೂಮಿ ನಾಶವಾಗಿ ರಿಯಲ್ ಎಸ್ಟೇಟ್ ಮಾಫಿಯಾ ಮತ್ತು ಕೈಗಾರಿಕೋದ್ಯಮಿಗಳ ಪಾಲಾಗಿ ಕೃಷಿ ಉತ್ಪಾದನೆ ಕುಂಠಿತವಾಗಿದೆ. ಇದರಿಂದ ರೈತರು ಭೂಮಿ ಕಳೆದುಕೊಂಡು ಜೀತದಾಳುಗಳಾಗುತ್ತಿದ್ದಾರೆ. ಈ ಕಾಯ್ದೆ ಜಾರಿಯಾದರೆ ಕೃಷಿ ಮಾಡುವ ರೈತರೇ ಇಲ್ಲದಂತಾಗಿ ಕಂಪನಿಗಳು ಗುತ್ತಿಗೆ ಕೃಷಿ ಮೂಲಕ ರೈತರನ್ನು ಒಕ್ಕಲೆಬ್ಬಿಸುತ್ತಾರೆ. ಈಗಾಗಲೇ ಕೈಗಾರಿಕೆಗಳನ್ನು ಸ್ಥಾಪಿಸುವ ಸಲುವಾಗಿ ಸರ್ಕಾರ ಲಕ್ಷಾಂತರ ಎಕರೆ ಭೂಮಿಯನ್ನು ನೀಡಲಾಗಿದ್ದರೂ ಬಹಳಷ್ಟು ಕೈಗಾರಿಕೆಗಳು ಯಾವುದೇ ಕಾರ್ಯ ಆರಂಭ ಮಾಡಿಲ್ಲ. ಕೈಗಾರಿ ಕೋದ್ಯಮಿಗಳು ಭೂಮಿಯನ್ನು ಖಾಲಿ ಬಿಟ್ಟಿದ್ದಾರೆ. ಇಂಥ ಭೂಮಿಯನ್ನು ಸರ್ಕಾರ ವಾಪಸ್ ಪಡೆದು ಹೊಸ ಕೈಗಾರಿಕೆಗಳನ್ನು ಆರಂಭಿಸಲು ಅವಕಾಶ ಮಾಡಿಕೊಡಲಿ ಹಾಗೂ ಸಂಕಷ್ಟಕ್ಕೆ ಸಿಲುಕಿ ನಷ್ಟ ಅನುಭವಿಸುತ್ತಿರುವ ಕೈಗಾರಿಕೆಗಳನ್ನು ಅದರ ಖಾಲಿ ಭೂಮಿಯನ್ನು ವಾಪಸ್ ಪಡೆದು ಹೊಸ ಕೈಗಾರಿಕೆಗಳಿಗೆ ನೀಡಬೇಕು ಎಂದು ಅವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.

ಒಂದು ವೇಳೆ ರಾಜ್ಯ ಸರ್ಕಾರ 79 ಎ ಹಾಗೂ ಬಿ ಕಾಯ್ದೆಯನ್ನು ರದ್ದುಗೊಳಿಸುವ ಹಾಗೂ ಗುತ್ತಿಗೆ ಕೃಷಿ ಪ್ರೋತ್ಸಾಹಿಸಲು ಮುಂದಾದರೆ ರೈತರು ಬೀದಿಗಿಳಿದು ರಾಜ್ಯಾ ದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಶಾಂತಕುಮಾರ್ ಎಚ್ಚರಿಸಿದ್ದಾರೆ.

Translate »