ಪತ್ನಿ ಆತ್ಮಹತ್ಯೆ: ಪತಿ, ಅತ್ತೆಗೆ 3ವರ್ಷ ಸಜೆ
ಚಾಮರಾಜನಗರ

ಪತ್ನಿ ಆತ್ಮಹತ್ಯೆ: ಪತಿ, ಅತ್ತೆಗೆ 3ವರ್ಷ ಸಜೆ

January 10, 2019

ಚಾಮರಾಜನಗರ: ಪತ್ನಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾ ಗಿದ್ದ ಪತಿ ಹಾಗೂ ಅತ್ತೆಗೆ 3ವರ್ಷ ಸಾದಾ ಸಜೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ನಗರದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಗ್ರಾಮದ ಎಸ್.ಆರ್.ರಂಗಯ್ಯ ಅವರ ಮಗ ಗೋಪಾಲಸ್ವಾಮಿ ಹಾಗೂ ಇವರ ತಾಯಿ ಚಿನ್ನಮ್ಮ ಶಿಕ್ಷೆಗೆ ಒಳಗಾದವರು.

ಘಟನೆಯ ವಿವರ: ಸೋಮಹಳ್ಳಿ ಗ್ರಾಮದ ಗೋಪಾಲಸ್ವಾಮಿ ತನ್ನ ಪತ್ನಿ ತ್ರಿವೇಣಿಗೆ ಕೆಟ್ಟ ಶಬ್ದಗಳಿಂದ ನಿಂದಿಸಿ ಜಗಳ ಮಾಡುತ್ತಿದ್ದನು. ಪತ್ನಿಯ ಶೀಲ ಶಂಕಿಸಿ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದನು. ಇದನ್ನು ತಾಳಲಾರದೆ ತ್ರಿವೇಣಿ ಅವರು 2014, ಮಾರ್ಚ್ 29ರಂದು ಮೈಮೇಲೆ ಸೀಮೆಎಣ್ಣೆ ಸುರಿದು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ತೀವ್ರ ಸುಟ್ಟಗಾಯಗಳಾಗಿದ್ದ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ 2014, ಏ.2ರಂದು ಅವರು ಮೃತಪಟ್ಟಿದ್ದರು. ಈ ಸಂಬಂಧ ತ್ರಿವೇಣಿ ಪತಿ ಗೋಪಾಸ್ವಾಮಿ ಹಾಗೂ ಅತ್ತೆ ಚಿನ್ನಮ್ಮ ವಿರುದ್ಧ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು ನ್ಯಾಯಾಲಯಕ್ಕೆ ಆರೋ ಪಿಗಳ ವಿರುದ್ಧ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ನಗರದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಾದ-ವಿವಾದ ನಡೆದು, ಆರೋಪ ಸಾಬೀತಾದ ಕಾರಣ ಗೋಪಾಲಸ್ವಾಮಿ ಮತ್ತು ಚಿನ್ನಮ್ಮ ಅವರಿಗೆ ಸಜೆ ಹಾಗೂ ದಂಡ ವಿಧಿಸಿ ನ್ಯಾಯಾಧೀಶರಾದ ಡಿ.ವಿನಯ್ ಅವರು ತೀರ್ಪು ನೀಡಿದರು. ಸರ್ಕಾರದ ಪರವಾಗಿ ಅಭಿಯೋಜಕರಾದ ಎಂ.ಎಸ್.ಉಷಾ ವಾದಿಸಿದರು

Translate »