ಮೈಸೂರು ದಸರಾ ವಸ್ತು ಪ್ರದರ್ಶನದಲ್ಲೊಂದು ಅಭಯಾರಣ್ಯ…!
ಮೈಸೂರು

ಮೈಸೂರು ದಸರಾ ವಸ್ತು ಪ್ರದರ್ಶನದಲ್ಲೊಂದು ಅಭಯಾರಣ್ಯ…!

September 27, 2019

ಮೈಸೂರು, ಸೆ.26-ವಸ್ತು ಪ್ರದರ್ಶನ ದಲ್ಲೊಂದು ಅಭಯಾರಣ್ಯ…! ಹೌದು, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿ ಕಾರದ ಮೈದಾನದಲ್ಲಿ ಅಭಯಾರಣ್ಯ ವೊಂದು ತಲೆ ಎತ್ತುತ್ತಿದೆ! ಹುಲಿ-ಸಿಂಹ ಗಳ ಘರ್ಜನೆ… ಜಿಂಕೆಗಳ ಓಟ… ಕ್ರಿಮಿ ಕೀಟಗಳ ವೈವಿಧ್ಯಮಯ ನೋಟ… ಜುಳು ಜುಳು ಹರಿಯುವ ನದಿ… ಅರಣ್ಯ ಇಲಾಖೆಯ ಕಾರ್ಯವೈಖರಿ ಈ ಎಲ್ಲವೂ ಇರುವ ಕಾಡೊಂದು ಇಲ್ಲಿ ಅನಾವರಣಗೊಳ್ಳುತ್ತಿದೆ.

ದಸರಾ ಮಹೋತ್ಸವದ ಪ್ರಮುಖ ಆಕ ರ್ಷಣೆಯಾದ ವಸ್ತು ಪ್ರದರ್ಶನ ಆವರಣ ದಲ್ಲಿ ಅರಣ್ಯ ಇಲಾಖೆ ನಿರ್ಮಿಸುತ್ತಿರುವ ಮಳಿಗೆಯಲ್ಲಿ ಈ ಕಾನನ ಸೃಷ್ಟಿಯಾಗು ತ್ತಿದೆ. ಮಳಿಗೆಯ ಮುಖ್ಯ ದ್ವಾರದಲ್ಲಿ 24 ಅಡಿ ಎತ್ತರದ ಬೃಹತ್ ಕಲಾಕೃತಿ ನಿರ್ಮಿಸ ಲಾಗುತ್ತಿದೆ. ಇದು ಇಲ್ಲಿನ ಪ್ರಪ್ರಥಮ ವಿಶೇಷ ಆಕರ್ಷಣೆ. ಮಾನವನಂತೆಯೇ ಜೀವ-ಭಾವ ಕಳೆಗಟ್ಟಿರುವಂತೆ ವಿನ್ಯಾಸ ಗೊಳಿಸುತ್ತಿರುವುದು ಈ ಕಲಾಕೃತಿ ವಿಶೇಷ. ಖ್ಯಾತ ಚಿತ್ರಕಲಾವಿದ ಬಿ.ಕೆ.ಎಸ್.ವರ್ಮಾ ಸಸ್ಯ ಸಂಕುಲಕ್ಕೆ ಮಾನವನ ಸ್ಪರ್ಶ ನೀಡಿ ಅದಕ್ಕೂ ನೋವು ನಲಿವು ಇದೆ. ಅವುಗಳ ಮೇಲಿನ ಶೋಷಣೆ ನಿಲ್ಲಬೇಕೆಂಬ ಪರಿ ಕಲ್ಪನೆಯಲ್ಲಿ ಹಲವು ವರ್ಷಗಳ ಹಿಂದೆಯೇ ತಮ್ಮ ಕುಂಚದಲ್ಲಿ ಚಿತ್ರಕಲೆ ಮೂಡಿಸಿ ದ್ದರು. ಇದೇ ಮಾದರಿಯಲ್ಲಿ ಮಳಿಗೆಯ ಪ್ರವೇಶ ದ್ವಾರದಲ್ಲಿ ಮಾತೆ ಸ್ವರೂಪದ ಮುಖಭಾವದೊಂದಿಗೆ `ಸಸ್ಯ ಸಂಕುಲ’ ಜೀವ ತುಂಬಿದ ಕಲಾಕೃತಿ ಥರ್ಮಾಕೋಲ್ ಮೂಲಕ ಮೂಡಿಬರುತ್ತಿದೆ.

ಇನ್ನು ಮಳಿಗೆ ಒಳ ಹೋಗುತ್ತಿದ್ದಂತೆ ಎಡಭಾಗದಲ್ಲಿ ಪರಿಸರ, ಸಸ್ಯ ಸಂಪತ್ತು, ವನ್ಯ ಜೀವಿಗಳ ಮಹತ್ವ ಹಾಗೂ ಅವು ಗಳಿಂದ ಆಗುತ್ತಿರುವ ಪ್ರಕೃತಿ ಸಮತೋ ಲನ ಸೇರಿದಂತೆ ಹಲವು ಆಯಾಮಗಳನ್ನು ಕಟ್ಟಿಕೊಡಲು ಸಿದ್ಧತೆ ನಡೆಯುತ್ತಿದೆ. ಅದೇ ರೀತಿ ಬಲಭಾಗದಲ್ಲಿ ಅರಣ್ಯ, ವನ್ಯಜೀವಿ ಗಳ ಮೇಲೆ ನಡೆಯುವ ಶೋಷಣೆಯಿಂದ ಉಂಟಾಗುವ ದುಷ್ಪರಿಣಾಮಗಳ ಚಿತ್ರಣ ಮೂಡಿಸಲು ಉದ್ದೇಶಿಸಲಾಗಿದೆ.

ಮಳಿಗೆ ಒಳಗೆ ಪ್ರವೇಶ ಪಡೆಯುತ್ತಿ ದ್ದಂತೆ `ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ’ದ ಕಾರಣ, ಪರಿಣಾಮ ಮತ್ತು ತಡೆಗಟ್ಟುವ ಬಗೆಯ ಕುರಿತು ಹಲವು ಮಾಹಿತಿಗಳು ಚಿತ್ರಸಹಿತ ದೊರೆಯಲಿವೆ. ವನ್ಯಜೀವಿಗಳು ನಾಡಿಗೆ ಲಗ್ಗೆಯಿಟ್ಟಾಗ ಸಾರ್ವಜನಿಕರ ವರ್ತನೆ ಹೇಗಿರಬೇಕು? ಎಂಬ ಪಾಠವೂ ಇಲ್ಲಿರಲಿದ್ದು, ಅರಣ್ಯ ಸಂಪತ್ತು ಇದ್ದರಷ್ಟೇ ಸ್ವಚ್ಛ ಗಾಳಿ, ಶುದ್ಧ ನೀರು ಪ್ರಾಪ್ತವಾಗುತ್ತದೆ ಎಂಬ ಅರಿವಿನ ಮಾದರಿಗಳು ಸಹ ಅನಾವರಣಗೊಳ್ಳಲಿದೆ.

`ರಾಜ್ಯ ಚಿಟ್ಟೆ’: `ಸದರನ್ ಬರ್ಡ್ ವಿಂಗ್’ ಚಿಟ್ಟೆಯನ್ನು `ರಾಜ್ಯ ಚಿಟ್ಟೆ’ ಎಂದು ಘೋಷಿಸ ಲಾಗಿದ್ದು, ಈ ಚಿಟ್ಟೆಯ ವೈಶಿಷ್ಟ್ಯದ ಮಾಹಿ ತಿಯೂ ಚಿತ್ರಸಹಿತ ಬಿತ್ತರವಾಗಲಿದೆ. ಈ ಚಿಟ್ಟೆಯನ್ನು ದೇಶದ ಅತೀ ದೊಡ್ಡ ಗಾತ್ರದ ಚಿಟ್ಟೆ ಎಂದು ಗುರುತಿಸಲಾಗಿದ್ದು, ಕಪ್ಪು ಬಣ್ಣದ ಹಿನ್ನೆಲೆಯಲ್ಲಿ ಕನ್ನಡ ಧ್ವಜದ ಕೆಂಪು (ರೆಕ್ಕೆ ಮಡಚಿದಾಗ ಕೆಂಪು ಬಣ್ಣ ಚುಕ್ಕೆ ಚುಕ್ಕೆಯಾಗಿ ಗೋಚರಿಸಲಿದೆ) ಮತ್ತು ಹಳದಿ ಬಣ್ಣ ಗಳು ಈ ಚಿಟ್ಟೆ ದೇಹದಲ್ಲಿರುವುದು ವಿಶೇಷ.

ಆಯಾಯ ಪ್ರಾಣಿ-ಪಕ್ಷಿಗಳ ನೈಜ ಗಾತ್ರ ದಲ್ಲಿ ಪ್ರತಿಕೃತಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಮಳಿಗೆಯ ಒಂದು ವಿಭಾಗದಲ್ಲಿ ಹೀಗೆ ಪ್ರಾಣಿ-ಪಕ್ಷಿಗಳ ಮಾದರಿ ಸಿದ್ಧಪಡಿಸಿ, ಅವುಗಳ ಚಟುವಟಿಕೆಗಳ ಬಗ್ಗೆಯೂ ಸಮಗ್ರ ಮಾಹಿತಿ ನೀಡಲು ಸಿದ್ಧತೆ ನಡೆಸಲಾಗುತ್ತಿದೆ. ಮಳಿಗೆ ಹಿಂಭಾಗ ದಲ್ಲಿ ಸಮೃದ್ಧವಾದ ಗಿಡ-ಮರ ಬೆಳೆದು ನಿಂತಿದ್ದು, ಇದು ಸುಮಾರು 4 ಎಕರೆ ಪ್ರದೇಶವಾಗಿದೆ. ಇದನ್ನು ಬಳಸಿಕೊಂಡು ಸಹಜವಾದ ಕಾನನ ಸೃಜಿಸಲು ಕಾರ್ಯ ಚಟುವಟಿಕೆ ನಡೆಸಲಾಗುತ್ತಿದೆ. ಎರಡು ವರ್ಷಗಳಿಂದ ಈ ಪ್ರದೇಶವನ್ನು ಬಳಕೆ ಮಾಡಿರಲಿಲ್ಲ. ಇದೀಗ ಇಲ್ಲಿ ಸಹಜವಾದ ಕಾನನ ಸೃಷ್ಟಿಗೆ ಚಾಲನೆ ನೀಡಲಾಗಿದೆ. ಕಾಡಿ ನಲ್ಲಿ ಸಂಚರಿಸಿದರೆ ಆಗುವ ಅನುಭವ ಆಗುವಂತೆ ಮಾಡುವ ಉದ್ದೇಶದಿಂದ ಈ ವಿಶಿಷ್ಟ ವಿನ್ಯಾಸಕ್ಕೆ ಆದ್ಯತೆ ನೀಡಲಾಗಿದೆ.

ಅರಣ್ಯದಲ್ಲಿ ಮಳೆ ನೀರು ಭೂಮಿಯಲ್ಲಿ ಇಂಗಲು ಅರಣ್ಯ ಇಲಾಖೆ ನಿರ್ಮಿಸುವ `ಚೆಕ್ ಡ್ಯಾಂ’ ಮಾದರಿಯೂ ನೈಜತೆಗೆ ಹತ್ತಿರ ವಾಗಿ ಕಾಣಸಿಗಲಿದೆ. ಅರಣ್ಯ ಇಲಾಖೆ ಕಾರ್ಯವೈಖರಿಯೂ ಪ್ರತಿಬಿಂಬಿತವಾಗ ಲಿದ್ದು, `ಆ್ಯಂಟಿ ಪೌಚಿಂಗ್ ಕ್ಯಾಂಪ್ (ಕಳ್ಳಬೇಟೆ ತಡೆ ಶಿಬಿರ)’ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ನೀಡಲು ಕ್ಯಾಂಪಿನ ವಾತಾವರಣ ಮೂಡಿಸಲಾಗುತ್ತಿದೆ.

ರಂಗನತಿಟ್ಟು ಮಾದರಿ: ಸೃಜಿಸುತ್ತಿ ರುವ ಸಹಜವಾದ ಕಾನನದ ಮಡಿಲಲ್ಲಿ ಮಂಡ್ಯ ಜಿಲ್ಲೆಯ `ರಂಗನತಿಟ್ಟು’ ಪಕ್ಷಿ ಧಾಮ ಮಾದರಿಯೂ ನೈಜತೆಗೆ ಸಾಮೀಪ್ಯದಲ್ಲಿ ಸೃಷ್ಟಿಯಾಗಲಿದೆ. ಆ ಮೂಲಕ ಲಕ್ಷಾಂತರ ಪಕ್ಷಿಗಳ ವಾಸ ಸ್ಥಳವೊಂದರ ವೈವಿಧ್ಯತೆಯನ್ನು ಅನಾವರಣಗೊಳಿಸಲಾಗುತ್ತಿದೆ. ಮತ್ತೊಂದೆಡೆ ಬುಡಕಟ್ಟು ಸಮು ದಾಯಗಳ ಗುಡಿಸಲು ಮಾದರಿಗಳು ತಲೆ ಎತ್ತುತ್ತಿದ್ದು, ಅವರ ಜೀವನ ಪದ್ಧತಿ ಗಳ ಮಾಹಿತಿಯೂ ಬಿತ್ತರವಾಗಲಿದೆ. ಜೊತೆಗೆ 3ರಿಂದ 4 ಕಡೆ ಸೆಲ್ಫಿ ಪಾಯಿಂಟ್ ಹಾಕಲಾಗುತ್ತಿದ್ದು, ಇಲ್ಲಿ ಅಡ್ಡಾಡುವಾಗ ಸೆಲ್ಫಿಯ ಸಂಭ್ರಮ ದಲ್ಲೂ ತೇಲಬಹುದಾಗಿದೆ.

ಎಂ.ಬಿ.ಪವನ್‍ಮೂರ್ತಿ

Translate »