ಬಹು ವರ್ಣಗಳಿಂದ ಅತ್ಯಾಕರ್ಷಕವಾಗಿ ಕಾಣುತ್ತಿರುವ ಚಾಮುಂಡಿಬೆಟ್ಟದ `ಮಹಿಷಾಸುರ’
ಮೈಸೂರು

ಬಹು ವರ್ಣಗಳಿಂದ ಅತ್ಯಾಕರ್ಷಕವಾಗಿ ಕಾಣುತ್ತಿರುವ ಚಾಮುಂಡಿಬೆಟ್ಟದ `ಮಹಿಷಾಸುರ’

September 27, 2019

ಮೈಸೂರು, ಸೆ.26(ಆರ್‍ಕೆಬಿ)- ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದ ಮಹಿಷಾಸುರನ ಪ್ರತಿಮೆಗೆ ಬಣ್ಣ ಹಚ್ಚುವ ಕಾರ್ಯ ಪೂರ್ಣಗೊಂಡಿದ್ದು, ಮಹಿಷನ ಪ್ರತಿಮೆ ಬಹು ವರ್ಣಗಳಿಂದ ಈಗ ಅತ್ಯಾಕರ್ಷಕ ರೀತಿಯಲ್ಲಿ ಕಂಗೊಳಿಸುತ್ತಿದೆ. ಮೈಸೂರಿನ ಕಲಾವಿದ ಎಂ. ಆನಂದ್ ನೇತೃತ್ವದ ತಂಡ ಕಳೆದ 5 ದಿನಗಳಿಂದ ಮಹಿಷನ ಪ್ರತಿಮೆಗೆ ವಿವಿಧ ಬಣ್ಣಗಳಿಂದ ಅಲಂ ಕರಿಸುವ ಕಾರ್ಯ ಕೈಗೊಂಡಿದೆ. ಹೀಗಾಗಿ ಮಹಿಷನ ಪ್ರತಿಮೆ ಮತ್ತಷ್ಟು ಆಕರ್ಷಣೀಯವಾಗಿ ಕಾಣುತ್ತಿದೆ.

ಕಲಾವಿದ ಎಂ.ಆನಂದ್ ಕಾವಾ ಪದವೀಧರ. 2005 ರಲ್ಲಿ ಫೌಂಡೇಷನ್ ಆರ್ಟ್‍ನಲ್ಲಿ ಪದವಿ ಪಡೆದಿ ರುವ ಅವರು ಕಳೆದ 5 ವರ್ಷಗಳಿಂದಲೂ ಪ್ರತೀ ವರ್ಷ ಮಹಿಷಾಸುರ ಪ್ರತಿಮೆಗೆ ಹೀಗೆ ಅಲಂಕರಿಸುತ್ತಾ ಬಂದಿದ್ದಾರೆ. ಈ ಬಾರಿಯೂ ಆಯಿಲ್ ಪೇಯಿಂಟ್ ಮೂಲಕ ಮಹಿಷನನ್ನು ಮತ್ತಷ್ಟು ಆಕರ್ಷಣೀಯ ಗೊಳಿಸಿದ್ದಾರೆ. ಬಣ್ಣ ಬಳಿಯುವ ಮುನ್ನ ಎಮ್ರಿ ಪೇಪರ್‍ನಿಂದ ಪ್ರತಿಮೆಯ ಹಳೆಯ ಮಾಸಿದ ಬಣ್ಣವನ್ನೆಲ್ಲಾ ಉಜ್ಜಿ ತೆಗೆದು ಬಳಿಕ ಬಿಳಿ ಬಣ್ಣದ ಪ್ರೈಮರ್ ಬಳಿದು, ನಂತರ ಆಯಿಲ್ ಪೇಯಿಂಟ್ ನಿಂದ ಮಹಿಷ ಆಕರ್ಷಣೆಗೊಳ್ಳುವಂತೆ ಮಾಡುತ್ತಾರೆ.

ಬಲಗೈಯಲ್ಲಿ ಕತ್ತಿ, ಎಡಗೈಯಲ್ಲಿ ಹಾವು ಹಿಡಿದು ನಿಂತಿರುವ ಭಂಗಿಯ ಮಹಿಷಾಸುರ ಚಾಮುಂಡಿ ಬೆಟ್ಟದ ವಿಶೇಷ ಆಕರ್ಷಣೆ. ಮೈಸೂರು ರಾಜ ವಂಶಸ್ಥರು ಮಹಿಷನ ಪ್ರತಿಮೆಯನ್ನು ಸ್ಥಾಪಿಸಿ ದರೆಂಬುದು ಇತಿಹಾಸ. ಅಂದಿನಿಂದಲೂ ಪ್ರತಿ ದಸರಾ ಸಂದರ್ಭದಲ್ಲೂ ಮಹಿಷನ ಪ್ರತಿಮೆಗೆ ಬಣ್ಣಗಳಿಂದ ಅಲಂಕರಿಸುವುದು ವಾಡಿಕೆ.

ಅಂತೆಯೇ ಈ ಬಾರಿ ಹಳದಿ ವರ್ಣದ ಕಚ್ಚೆ ಪಂಚೆ, ಹಸಿರು ಬಣ್ಣದ ಶಾಲು ತೊಟ್ಟಿರುವ ಮಹಿಷನ ಹಣೆ ಬೊಟ್ಟು, ನಾಮ, ಕಣ್ಣುಗಳನ್ನು ರೇಡಿಯಂ ಸ್ಟಿಕ್ಕರ್‍ನಿಂದ ಸಿಂಗರಿಸಲ್ಪಟ್ಟಿದ್ದು, ಅದು ವಿದ್ಯುತ್ ಬೆಳಕಿಗೆ ಜಗಮಗಿಸುವಂತಿದೆ. ಈ ಆಕರ್ಷಣೆಗೆ ಒಳಗಾದ ಪ್ರವಾಸಿಗರು ಮಹಿಷನ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡು ಸಂತಸಪಡುತ್ತಿದ್ದಾರೆ.

ಮೈಸೂರಾದ ಮಹಿಷೂರು: ಮಹಿಷ ಎಂದರೆ ಮಹಿ ಷಾಸುರ ಎಂಬುದು ಪುರಾಣಗಳಲ್ಲಿ ಬರುವ ಹೆಸರು. ಇತಿಹಾಸದಲ್ಲಿ ಉಲ್ಲೇಖಿಸಲ್ಪಟ್ಟಿರುವ ಪ್ರಕಾರ ಇಂದಿನ ಮೈಸೂರು ಮಹಿಷಪುರಿ, ಮಹಿಷೂರು ಎಂಬ ಮೂಲ ಹೆಸರು ಹೊಂದಿತ್ತು. ಹಿಂದೂ ಪುರಾಣದ ಪ್ರಕಾರ ಈ ಪ್ರದೇಶವನ್ನು ರಾಕ್ಷಸ ಮಹಿಷಾಸುರನು ಆಳುತ್ತಿದ್ದ. ಆತ ಚಾಮುಂಡೇಶ್ವರಿಯಿಂದ ಸಂಹಾರ ಗೊಳ್ಳುತ್ತಾನೆ. ಬಳಿಕ ಚಾಮುಂಡೇಶ್ವರಿಯು ಅದೇ ಬೆಟ್ಟದ ಮೇಲೆ ನೆಲೆಗೊಳ್ಳುತ್ತಾಳೆ. ನಂತರ ಮಹಿ ಷೂರು, ಮಹಿಸೂರು ಆಗಿ, ತದನಂತರ ಕೊನೆಯ ದಾಗಿ ಮೈಸೂರು ಎಂದು ಬದಲಾವಣೆ ಆಗಿದೆ.

Translate »