ಸಿಎಂ ಕುಮಾರಸ್ವಾಮಿ ಚಿತ್ತ ಬಿಜೆಪಿಯತ್ತ?
ಮೈಸೂರು

ಸಿಎಂ ಕುಮಾರಸ್ವಾಮಿ ಚಿತ್ತ ಬಿಜೆಪಿಯತ್ತ?

May 30, 2018

ಬೆಂಗಳೂರು: ಕಾಂಗ್ರೆಸ್ ಮುಖಂಡರ ವರ್ತನೆಯಿಂದ ಬೇಸತ್ತಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿಯತ್ತ ಒಲವು ತೋರಿದ್ದಾರೆ ಎಂದು ಹೇಳಲಾಗುತ್ತಿದ್ದು, ಸಂಪುಟ ವಿಸ್ತರಣೆಗೂ ಮುನ್ನವೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುರಿದು ಬೀಳುವ ಲಕ್ಷಣಗಳು ಕಂಡು ಬರುತ್ತಿವೆ. ಆರಂಭದಲ್ಲಿ ಬೇಷರತ್ ಬೆಂಬಲ ಎಂದು ಘೋಷಿಸಿದ್ದ ಕಾಂಗ್ರೆಸ್ ಮುಖಂಡರು ಖಾತೆ ಹಂಚಿಕೆ ವಿಚಾರದಲ್ಲಿ ಹಲವಾರು ಷರತ್ತುಗಳನ್ನು ವಿಧಿಸುತ್ತಿರುವುದರಿಂದ ಕುಮಾರಸ್ವಾಮಿ ಕಾಂಗ್ರೆಸ್ ಸಹವಾಸ ಸಾಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿಗಳು ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದು ಔಪಚಾರಿಕ ಎಂದು ಹೇಳಲಾಗುತ್ತಿದೆಯಾದರೂ, ಈ ವೇಳೆ ರಾಜಕೀಯ ವಿಚಾರಗಳೂ ಕೂಡ ಪ್ರಸ್ತಾಪವಾಗಿವೆ ಎಂದು ಹೇಳಲಾಗುತ್ತಿದೆ. ತಮಗೆ ಸಂಕಟವನ್ನು ತಂದಿಟ್ಟಿರುವ ಕಾಂಗ್ರೆಸ್ ಜೊತೆ ಮೈತ್ರಿ ಮುರಿದುಕೊಂಡು ಬಿಜೆಪಿ ಸಖ್ಯ ಬೆಳೆಸಿದರೆ ತಮ್ಮ ಮಹತ್ವಾಕಾಂಕ್ಷಿಯಾಗಿರುವ ರೈತರ ಸುಮಾರು 53 ಸಾವಿರ ಕೋಟಿ ರೂ. ಸಾಲ ಮನ್ನಾಗೆ ಕೇಂದ್ರ ಸರ್ಕಾರದ ಸಹಕಾರವೂ ಸಿಗುತ್ತದೆ ಎಂಬುದು ಕುಮಾರಸ್ವಾಮಿ ಲೆಕ್ಕಾಚಾರ ಎನ್ನಲಾಗಿದೆ.

ಕುಮಾರಸ್ವಾಮಿ ಬಿಜೆಪಿಯತ್ತ ಒಲವು ಹೊಂದಿದ್ದಾರೆ ಎಂಬುದನ್ನು ಉಪ ಮುಖ್ಯಮಂತ್ರಿ ಗಳೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಅಲ್ಲಗಳೆದಿದ್ದಾರೆ. ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಪರಸ್ಪರ ಚರ್ಚೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಲಿದ್ದೇವೆ. ಯಾರೇ ಪ್ರಧಾನಿಯಾಗಿದ್ದರೂ ಮುಖ್ಯಮಂತ್ರಿಗಳು ಅವರನ್ನು ಭೇಟಿ ಮಾಡುವುದು ಸಂಪ್ರದಾಯ. ಅದರಂತೆ ಕುಮಾರಸ್ವಾಮಿಯವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಅವರ ಈ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಅವರು ಹೇಳಿದರು.

ಮತ್ತೊಂದೆಡೆ ಹಣಕಾಸು ಸೇರಿದಂತೆ ಹಲವು ಫಲವತ್ತಾದ ಖಾತೆಗಳಿಗೆ ರಾಜ್ಯ ಕಾಂಗ್ರೆಸ್ ಮುಖಂಡರು ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗಿದೆ. ಖಾತೆ ಹಂಚಿಕೆ ವಿಚಾರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಎರಡು ದಿನ ರಾಜ್ಯ ಕಾಂಗ್ರೆಸ್ ಮುಖಂಡರು ಚರ್ಚೆ ನಡೆಸಿದರಾದರೂ, ಒಮ್ಮತಕ್ಕೆ ಬರಲಾಗಲಿಲ್ಲ. ಈ ಸಮಸ್ಯೆಯನ್ನು ಸುಗುಮವಾಗಿ ಇತ್ಯರ್ಥಪಡಿಸಬೇಕಾದ ರಾಹುಲ್ ಗಾಂಧಿಯವರು ಅದರ ಪರಿವೆಯೇ ಇಲ್ಲದಂತೆ ವಿದೇಶ ಪ್ರವಾಸ ಕೈಗೊಂಡಿರುವುದರಿಂದ ಖಾತೆ ಹಂಚಿಕೆ ಸಮಸ್ಯೆಗೆ ಅವರು ವಾಪಸ್ಸಾದ ನಂತರವೇ ಪರಿಹಾರ ದೊರೆಯಬಹುದಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್‍ನ ಈ ಧೋರಣೆಯಿಂದಾಗಿ ಸಂಪುಟ ವಿಸ್ತರಣೆ ಮಾಡಲಾಗ ದಂತಹ ಪರಿಸ್ಥಿತಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ತಳ್ಳಲ್ಪಟ್ಟಿದ್ದಾರೆ. ಈ ಎಲ್ಲಾ ವಿದ್ಯಮಾನಗಳ ಹಿನ್ನೆಲೆಯಲ್ಲಿಯೇ ಹತಾಶ ಮನೋಭಾವ ಹೊಂದಿದ ಮುಖ್ಯಮಂತ್ರಿಗಳು ಭಾನುವಾರ `ನಾನು ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ’ ಎಂಬ ಹೇಳಿಕೆ ನೀಡಿದರು ಎಂದು ಹೇಳಲಾಗಿದೆ.

Translate »