ಕಾಂಗ್ರೆಸ್‍ನಿಂದ ಮೈತ್ರಿ ಮುಜುಗರ: ಜೆಡಿಎಸ್ ಶಾಸಕ ಬೇಸರ
ಮೈಸೂರು

ಕಾಂಗ್ರೆಸ್‍ನಿಂದ ಮೈತ್ರಿ ಮುಜುಗರ: ಜೆಡಿಎಸ್ ಶಾಸಕ ಬೇಸರ

May 30, 2018

ಮಂಡ್ಯ: ಅಧಿಕಾರಕ್ಕೆ ಬರುವಾಗ ಬೇಷರತ್ ಬೆಂಬಲ ಘೋಷಿಸಿದ್ದ ಕಾಂಗ್ರೆಸ್ ಇದೀಗ ಕ್ಷಣ ಕ್ಷಣಕ್ಕೂ ಷರತ್ತು ವಿಧಿಸುತ್ತಿದೆ. ಕಾಂಗ್ರೆಸ್ ನಾಯಕರ ಈ ನಡೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮಾತ್ರವಲ್ಲ ನಮಗೂ ಬೇಸರ ತಂದಿದೆ ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತಂತ್ರ ಫಲಿತಾಂಶದಿಂದಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆರಂಭದಲ್ಲಿ ಬೇಷರತ್ ಬೆಂಬಲ ಎಂದಿದ್ದ ಕಾಂಗ್ರೆಸ್ ನಾಯಕರು ಅಧಿಕಾರಕ್ಕೆ ಬಂದ ನಂತರ ನಾನಾ ಷರತ್ತು ವಿಧಿಸುತ್ತಿದ್ದಾರೆ. ಸರ್ಕಾರ ರಚನೆಯಾಗಿ ವಾರವಾದರೂ ಸಂಪುಟ ರಚನೆ ಗೊಂದಲವಾಗುತ್ತಿದೆ. ಇದಕ್ಕೆ ಕಾಂಗ್ರೆಸ್ ನಾಯಕರ ನಡೆಯೇ ಕಾರಣ ಎಂದರು. ಹಿಂದಿನಿಂದಲೂ ಮುಖ್ಯಮಂತ್ರಿಗಳೇ ಹಣಕಾಸು ಖಾತೆ ನೋಡಿಕೊಳ್ಳುವುದು ವಾಡಿಕೆ. ಆದರೆ ಕಾಂಗ್ರೆಸ್ ನಾಯಕರು ಹಣಕಾಸು ಖಾತೆ ವಿಚಾರದಲ್ಲಿ ಗೊಂದಲ ಸೃಷ್ಟಿಸುತ್ತಿ ದ್ದಾರೆ. ಅಲ್ಲದೆ ನಮ್ಮ ನಾಯಕ ಕುಮಾರಸ್ವಾಮಿ ಅವರನ್ನು ಗೊಂದಲಕ್ಕೆ ಸಿಲುಕಿಸುತ್ತಿದ್ದಾರೆ ಎಂದು ದೂರಿದರು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ನಮಗೆ ಬೆಂಬಲ ನೀಡಲು ಕಾಂಗ್ರೆಸ್‍ನವರೇ ಮುಂದಾಗಿದ್ದರು. ಆದರೆ ಈಗ ಇಲ್ಲದ ಬೇಡಿಕೆ ಮುಂದಿಟ್ಟು ಕುಮಾರಸ್ವಾಮಿ ಅವರನ್ನು ಮುಜುಗರಕ್ಕೆ ಗುರಿಪಡಿಸಿದ್ದಾರೆ. ಅನೇಕ ಆಲೋಚನೆಗಳ ಅನುಷ್ಠಾನಕ್ಕೆ ಮುಖ್ಯಮಂತ್ರಿಗಳೇ ಹಣಕಾಸು ಖಾತೆ ಹೊಂದಿರಬೇಕಿದೆ. ಇದಕ್ಕೆ ಕಾಂಗ್ರೆಸ್‍ನವರು ಅವಕಾಶ ಮಾಡಿಕೊಡುತ್ತಿಲ್ಲ. ಖಾತೆ ಹಂಚಿಕೆಯಲ್ಲಿ ಸಮಸ್ಯೆಯಾಗಿ ಮೈತ್ರಿ ಮುರಿದುಕೊಂಡು ಜೆಡಿಎಸ್ ಹೊರಗೆ ಬಂದರೂ ನಾವು ನಮ್ಮ ನಾಯಕರ ಜೊತೆ ಇರುತ್ತೇವೆ ಎಂದು ತಿಳಿಸಿದರು.
ಸಾಲ ಮನ್ನಾ ಅಥವಾ ಸರ್ಕಾರ ಅಂತ ಬಂದರೆ ನಮ್ಮ ನಾಯಕರು ಅಧಿಕಾರಕ್ಕೆ ಅಂಟಿ ಕೂರುವುದಿಲ್ಲ. ಸಾಲ ಮನ್ನಾ ಮಾಡಬೇಕೆಂಬುದು ಮಂಡ್ಯ ಜಿಲ್ಲೆಯ ಎಲ್ಲಾ ಶಾಸಕರ

ಒತ್ತಾಯವಾಗಿದೆ. ಈ ವಿಚಾರದಲ್ಲಿ ಕುಮಾರಸ್ವಾಮಿ ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ಜೆಡಿಎಸ್‍ನ ಎಲ್ಲಾ ಶಾಸಕರು ಅವರ ಜೊತೆ ಇರುತ್ತಾರೆ ಎಂದು ಪ್ರತಿಕ್ರಿಯಿಸಿದರು. ರವೀಂದ್ರ ಶ್ರೀಕಂಠಯ್ಯ ಅವರು ನೀಡಿರುವ ಇಂದಿನ ಹೇಳಿಕೆಯು ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಮುಂದುವರಿಕೆ ಅನುಮಾನ ಸೃಷ್ಟಿಸಿದೆ. ಕೈ ಜೊತೆಗಿನ ಮೈತ್ರಿ ಕಡಿದುಕೊಳ್ತಾರ ಹೆಚ್ಡಿಕೆ? ಚರ್ಚೆ ಈಗ ಎಲ್ಲೆಡೆ ಶುರುವಾಗಿದೆ.

Translate »