ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಹೆಚ್‍ಡಿಕೆಚಿನ್ನದ ರಥ ಕೊಡುಗೆ ನೀಡುವರೇ?
ಮಂಡ್ಯ

ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಹೆಚ್‍ಡಿಕೆಚಿನ್ನದ ರಥ ಕೊಡುಗೆ ನೀಡುವರೇ?

April 29, 2019

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪುತ್ರ ನಿಖಿಲ್ ಜಯಭೇರಿ ಭಾರಿಸಲಿ ಹಾಗೂ ರಾಜ್ಯ ದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಸುಭದ್ರವಾಗಿ ರಲಿ ಎಂದು ದೇವರ ಮೊರೆ ಹೋಗಲು ಮುಂದಾ ಗಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಒಂದೂವರೆ ದಶಕದಿಂದ ಬಾಕಿ ಇರುವ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಚಿನ್ನದ ರಥ ಮಾಡಿಸಿಕೊಡುವ ರಾಜ್ಯ ಸರ್ಕಾರದ ಭರವಸೆಯನ್ನು ಈಗ ಈಡೇರಿಸಲು ಸಜ್ಜಾಗಿದ್ದಾರೆಯೇ?

ಜ್ಯೋತಿಷಿಯೊಬ್ಬರ ಸಲಹೆ ಮೇರೆಗೆ ಈ ತೀರ್ಮಾನಕ್ಕೆ ಬಂದಿರುವ ಮುಖ್ಯಮಂತ್ರಿಗಳು, ಚಿನ್ನದ ರಥ ಮಾಡಿಸಿಕೊಡುವ ಭರವಸೆ ಈಡೇರಿಸುವುದಾಗಿ ಕುಕ್ಕೆ ಸುಬ್ರಹ್ಮಣ್ಯ ದೇಗುಲ ಹಾಗೂ ಆ ದೇಗುಲದ ನಿರ್ವಹಣೆ ಹೊಣೆ ಹೊತ್ತಿರುವ ಮುಜರಾಯಿ ಇಲಾಖೆಗೆ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಚಿನ್ನದ ರಥ ಮಾಡಿಸಿಕೊಡುವ ಭರವಸೆ ನೀಡಿದ್ದು, 15 ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್. ಈಗ ಆ ಭರವಸೆಯನ್ನು ಈಡೇರಿಸಲು ಮುಂದಾಗಿರುವುದು ಮುಖ್ಯಮಂತ್ರಿ ಕುಮಾರಸ್ವಾಮಿ. ಆಗ ಕಾಂಗ್ರೆಸ್-ಜೆಡಿಎಸ್ `ಸಮ್ಮಿಶ್ರ’ ಸರ್ಕಾರವಿತ್ತು. ಈಗ ಜೆಡಿಎಸ್-ಕಾಂಗ್ರೆಸ್ `ಮೈತ್ರಿ’ ಸರ್ಕಾರವಿದೆ.

2004-06ರಲ್ಲಿ `ಸಮ್ಮಿಶ್ರ’ ಸರ್ಕಾರದಲ್ಲಿ ಮುಖ್ಯ ಮಂತ್ರಿಯಾಗಿದ್ದ ಧರ್ಮಸಿಂಗ್ ಅವರು, ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಚಿನ್ನದ ರಥ ಮಾಡಿಸಿಕೊಡಲು ಅಗತ್ಯ ವಾದ 200 ಕೋಟಿ ಹಣವನ್ನು ಬಿಡುಗಡೆ ಮಾಡುವುದಾಗಿ ಹೇಳಿ ದ್ದರು. ಆದರೆ, ಅವರ ಸರ್ಕಾರ ಅಲ್ಪಾವಧಿಯಲ್ಲೇ ಅಂತ್ಯ ಕಂಡಿದ್ದ ರಿಂದ ಚಿನ್ನದ ರಥದ ಭರವಸೆ ಬಾಕಿ ಉಳಿದಿತ್ತು. ನಂತರದಲ್ಲಿ ಜೆಡಿಎಸ್-ಬಿಜೆಪಿ ಜತೆಗೂಡಿ ಸರ್ಕಾರ ರಚಿಸಿದಾಗ ಮುಖ್ಯಮಂತ್ರಿಯಾದ ಹೆಚ್.ಡಿ.ಕುಮಾರ ಸ್ವಾಮಿ ಈ ವಿಚಾರದತ್ತ ಗಮನ ಹರಿಸಲಿಲ್ಲ.

ಆದರೆ, ಈಗ 12 ವರ್ಷಗಳ ನಂತರ ಮತ್ತೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿರುವ ಹೆಚ್.ಡಿ.ಕುಮಾರ ಸ್ವಾಮಿ ಅವರಿಗೆ ಪ್ರೀತಿಯ ಪುತ್ರನ ಲೋಕಸಭೆ ಪ್ರವೇಶದ ಅನುಮಾನದ ಭೀತಿ ಕಾಡುತ್ತಿದೆ. ಇದೇ ವೇಳೆಗೆ ಮೈತ್ರಿ ಸರ್ಕಾರಕ್ಕೂ ಅಪಾಯ ಎದುರಾದಂತಿದೆ. ಈ ವೇಳೆಗೇ ಸರಿಯಾಗಿ ಹೆಸರಾಂತ ಜ್ಯೋತಿಷಿ ದ್ವಾರಕಾನಾಥ್ (ರಾಜಗುರು ಎಂದೇ ಹೇಳಿಕೊಳ್ಳುತ್ತಾರೆ) ಅವರೂ ಚಿನ್ನದ ರಥದ ಭರವಸೆ ಈಡೇರದೇ ಇರುವುದನ್ನು ಸಿಎಂಗೆ ನೆನಪಿಸಿದ್ದಾರೆ.

ಏ.27ರ ಶನಿವಾರ ರಾತ್ರಿ ಮುಖ್ಯಮಂತ್ರಿಗಳ ಗೃಹ ಕಚೇರಿ `ಕೃಷ್ಣಾ’ಕ್ಕೆ ಆಗಮಿಸಿದ ಜ್ಯೋತಿಷಿ ದ್ವಾರಕಾನಾಥ್ ಅವರು, `ನಿಮ್ಮ ಪಕ್ಷ ಪಾಲುದಾರರಾಗಿದ್ದ ಹಿಂದಿನ ಸಮ್ಮಿಶ್ರ ಸರ್ಕಾರ ಮಾತುಕೊಟ್ಟಿದ್ದಂತೆ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಚಿನ್ನದ ರಥದ ಭರವಸೆ ಈಡೇರಿಸಲೇಬೇಕು. ಒಂದೊಮ್ಮೆ ಆ ಮಾತನ್ನು ನಿರ್ಲಕ್ಷಿಸಿದ್ದೇ ಆದರೆ ಭಗವಾನ್ ಸುಬ್ರಹ್ಮಣ್ಯನ ಶಾಪಕ್ಕೂ ಗುರಿಯಾಗಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ. ಜ್ಯೋತಿಷಿಯ ಮಾತಿಗೆ ಸಮ್ಮತಿಸಿ ರುವ ಕುಮಾರಸ್ವಾಮಿ ಅವರು, ತಕ್ಷಣವೇ ಮುಜರಾಯಿ ಇಲಾಖೆಗೆ ಚಿನ್ನದ ರಥ ಮಾಡಿಸುವ ಬಗ್ಗೆ ನಿರ್ದೇಶನ ವನ್ನೂ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ಮಧ್ಯೆ, ಸುದ್ದಿಗಾರರ ಜತೆ ಮಾತನಾಡಿರುವ ಜ್ಯೋತಿಷಿ ದ್ವಾರಕಾನಾಥ್, `ಧರ್ಮಸಿಂಗ್ ಅವರ ಸರ್ಕಾರ ಚಿನ್ನದ ರಥದ ವಚನ ನೀಡಿತ್ತು. ಆದರೆ ಆ ಭರವಸೆ ಈವರೆಗೂ ಈಡೇರಲೇ ಇಲ್ಲ. ಅಲ್ಲದೇ, ಈ ವಿಚಾರವಾಗಿ ಸರ್ಕಾರಿ ಅಧಿಕಾರಿಗಳೂ ಆಸಕ್ತಿ ತೋರಲಿಲ್ಲ. ಹಾಗಾಗಿ ಈ ವಿಚಾರವನ್ನು ಕುಮಾರಸ್ವಾಮಿ ಅವರಿಗೆ ನೆನಪಿಸಿದೆ. ಚಿನ್ನದ ರಥದ ಕಾರ್ಯ ಪೂರ್ಣಗೊಂಡರೆ ನಿಮಗೆ ಸದ್ಯ ಎದುರಾಗಿರುವ ಎಲ್ಲಾ ಸಮಸ್ಯೆಗಳೂ ಪರಿಹಾರ ಕಾಣುತ್ತವೆ ಎಂದು ಹೇಳಿದೆ. ಅದಕ್ಕೆ ಕುಮಾರಸ್ವಾಮಿ ಅವರು, ಚಿನ್ನದ ರಥದ ಯೋಜನೆ ಕಾರ್ಯಾರಂಭ ಮಾಡಿಸುವುದಾಗಿ ಹೇಳಿದ್ದಾರೆ’ ಎಂದು ವಿವರಿಸಿದರು.

ಗುಪ್ತಚರ ವರದಿ: ಈ ಮಧ್ಯೆ ಗುಪ್ತಚರ ವರದಿ ಪ್ರಕಾರ ನಿಖಿಲ್ ಕುಮಾರಸ್ವಾಮಿಗೆ ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮೂರು ತಾಲೂಕುಗಳಾದ ಮಂಡ್ಯ, ಮಳವಳ್ಳಿ ಹಾಗೂ ಮದ್ದೂರಲ್ಲಿ ಹಿನ್ನಡೆಯಾಗಿ, ಈ ತಾಲೂಕುಗಳಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಮೇಲುಗೈ ಸಾಧಿಸಬಹುದಾದ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವ ಸಾರಿಗೆ ಸಚಿವರೂ ಆದ ಡಿ.ಸಿ. ತಮ್ಮಣ್ಣ, ಮಳವಳ್ಳಿಯ ಡಾ. ಅನ್ನದಾನಿ ಹಾಗೂ ಮಂಡ್ಯದ ಶ್ರೀನಿವಾಸ್ ಅವರನ್ನು ತರಾಟೆಗೆ ತೆಗೆದುಕೊಂಡು, ವೈಫಲ್ಯದ ಬಗ್ಗೆ ವಿವರಣೆ ಪಡೆದಿದ್ದಾರೆಂದು ಹೇಳಲಾಗುತ್ತಿದೆ.

Translate »