ಮೈಸೂರು, ಜ.13(ಆರ್ಕೆ)- ಅಂಗಡಿಯಿಂದ ಮನೆಗೆ ನಡೆದು ಕೊಂಡು ಹೋಗುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ರಾಮಕೃಷ್ಣನಗರದಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ. ರಾಮಕೃಷ್ಣನಗರ ‘ಇ’ ಅಂಡ್ ‘ಎಫ್’ ಬ್ಲಾಕ್ ನಿವಾಸಿ ಪಾರ್ವತಿ ಎಂಬುವರೇ 1.2 ಲಕ್ಷ ರೂ. ಮೌಲ್ಯದ 40 ಗ್ರಾಂ ಚಿನ್ನದ ಮಾಂಗಲ್ಯ ಸರ ಕಳೆದುಕೊಂಡವರು. ಜ.10ರಂದು ಸಂಜೆ 4 ಗಂಟೆ ವೇಳೆಗೆ ರಾಮಕೃಷ್ಣನಗರದ ರೂಬಿ ಬೇಕರಿ ಬಳಿಯ ಕ್ರಾಸ್ ರೋಡ್ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎದುರಿನಿಂದ ಬೈಕ್ನಲ್ಲಿ ಬಂದ ಅಪರಿಚಿತ ಯುವಕನೋರ್ವ ಏಕಾಏಕಿ ತಮ್ಮ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಗುವ ಟೈರ್ ಡಿಸೈನ್ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾದ ಎಂದು ದೂರಿನಲ್ಲಿ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಕುವೆಂಪುನಗರ ಠಾಣೆ ಪೊಲೀಸರು ಮಹಜರು ನಡೆಸಿ, ಸರ ಅಪಹರಣಕಾರನ ಪತ್ತೆಗೆ ಶೋಧ ನಡೆಸಿದರಾದರೂ ಪ್ರಯೋಜನವಾಗಲಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
