ಗುಂಡ್ಲುಪೇಟೆ: ಮತಯಾಚನೆಗೆ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿ ಸಚಿವೆ ಡಾ.ಎಂ.ಸಿ.ಮೋಹನಕುಮಾರಿ (ಗೀತಾಮಹದೇವಪ್ರಸಾದ್) ಅವರನ್ನು ತರಾಟೆಗೆ ತೆಗೆದುಕೊಂಡ ಮಹಿಳೆಯರು ತಮ್ಮ ಬೀದಿಗಳಿಗೆ ಬಂದು ಸಮಸ್ಯೆಗಳನ್ನು ಕಣ್ಣಾರೆ ನೋಡುವಂತೆ ಒತ್ತಾಯಿಸಿದ ಪ್ರಸಂಗ ತಾಲೂಕಿನ ಹಿರಿಕಾಟಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿಕ್ಕಹುಂಡಿ ಗ್ರಾಮದಲ್ಲಿ ರೋಡ್ ಶೋ ನಡೆಸಿ ನಂತರ ಹಿರಿಕಾಟಿಗೆ ಆಗಮಿಸಿದಾಗ ಗ್ರಾಮದ ಮಹಿಳೆಯರು ಮತ್ತು ಯುವಕರು ಸಚಿವರನ್ನು ತರಾಟೆಗೆ ತೆಗೆದುಕೊಂಡರು. ನಮಗೆ ಮೂಲ ಸೌಕರ್ಯ ಕಲ್ಪಿಸಿಲ್ಲ. ಗ್ರಾಮದಲ್ಲಿ ರಸ್ತೆ, ಚರಂಡಿ ಮತ್ತು ಸ್ಮಶಾನ ಸೇರಿದಂತೆ ಹಲವು ಮೂಲಸೌಕರ್ಯಗಳ ಕೊರತೆ ಇದೆ. ಗ್ರಾಮದಲ್ಲಿನ ಚರಂಡಿಗಳ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲಾ. ಎಲ್ಲಾ ನಿವಾಸಿಗಳೂ ಮನೆ ಬಳಕೆಯ ನೀರು ಇಂಗಿಸಲು ಇಂಗುಗುಂಡಿ ಮಾಡಿಕೊಂಡಿದ್ದು ಸೊಳ್ಳೆಗಳ ಕಾಟದಿಂದ ಬಳಲುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮರ್ಪಕ ಕುಡಿಯುವ ನೀರು ದೊರಕದೆ ಎರಡು ಕಿ.ಮೀ ಕಾಲ್ನಡಿಗೆಯಲ್ಲಿ ಚಿಕ್ಕಹುಂಡಿಗೆ ತೆರಳಿ ನೀರನ್ನು ತರಬೇಕಾಗಿದೆ. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಕಲ್ಲು ಲಾರಿಗಳ ಸಂಚಾರದಿಂದ ರಸ್ತೆಗಳು ಹಾಳಾಗಿದ್ದು ಧೂಳು ಸೇವನೆಯಿಂದ ಆರೋಗ್ಯ ಹಾಳಾಗುತ್ತಿದೆ. ಪ್ರತಿ ಚುನಾವಣೆಯ ಸಂದರ್ಭ ಹೊರತುಪಡಿಸಿ ಬೇರೆ ಯಾವಾಗಲೂ ಯಾವ ಜನಪ್ರತಿನಿಧಿಯೂ ನಮ್ಮ ಕಷ್ಟವನ್ನು ಕೇಳುತ್ತಿಲ್ಲ. ಮತದಾನ ಬಹಿಷ್ಕಾರ ಹಾಕುವ ತೀರ್ಮಾನಕ್ಕೆ ಬಂದು ತಿಂಗಳುಗಳು ಕಳೆದರೂ ಸಹ ಗ್ರಾಮದಲ್ಲಿನ ಯಾವುದೇ ಸಮಸ್ಯೆಗಳು ಪರಿಹಾರವಾಗಿಲ್ಲ. ಆದ್ದರಿಂದ ನೀವೇ ಕಣ್ಣಾರೆ ಪರಿಶೀಲಿಸಿ ಎಂದು ಸಚಿವರನ್ನು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಸಚಿವೆ ಡಾ.ಎಂ.ಸಿ.ಮೋಹನಕುಮಾರಿ, ನಾನು ಕೇವಲ ಹನ್ನೊಂದು ತಿಂಗಳ ಹಿಂದೆ ಅಧಿಕಾರಕ್ಕೆ ಬಂದಿದ್ದು, ಕುಡಿಯುವ ನೀರಿನ ಸಮಸ್ಯೆ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ನನಗೆ ಸಾಧ್ಯವಾದಷ್ಟು ಸಮಸ್ಯೆಗಳನ್ನು ಪರಿಹರಿಸಿದ್ದೇನೆ.
ನಾನು ಒಬ್ಬ ಮಹಿಳೆಯಾಗಿ ಮಹಿಳೆಯರ ಸಮಸ್ಯೆಯ ಬಗ್ಗೆ ಅರಿವಿದೆ. ಹನ್ನೊಂದು ತಿಂಗಳಿನಲ್ಲಿ ನನ್ನ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ನಿಮ್ಮ ಗ್ರಾಮದಲ್ಲಿನ ಕುಡಿಯುವ ನೀರಿನ ಮತ್ತು ಮೂಲಸೌಕರ್ಯಗಳ ಕೊರತೆಯ ಬಗ್ಗೆ ನನಗೆ ಅರಿವಿದೆ. ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಸಮಸ್ಯೆಯಾಗಲು ಬಿಡುವುದಿಲ್ಲ. ಮೂಲ ಸೌಕರ್ಯಗಳ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿ ಮತಯಾಚನೆ ಮಾಡಿ ಮುಂದಿನ ಗ್ರಾಮಗಳಿಗೆ ತೆರಳಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಎ.ಸಿದ್ದರಾಜು, ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್, ತಾ.ಪಂ. ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು ಸೇರಿದಂತೆ ಪಕ್ಷದ ಹಲವು ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.