ಚಾಮುಂಡೇಶ್ವರಿಯಲ್ಲಿ ಸೋಲುವ ಭೀತಿಯಿಂದ ಬಾದಾಮಿಗೆ ಸಿಎಂ ವಲಸೆ
ಚಾಮರಾಜನಗರ

ಚಾಮುಂಡೇಶ್ವರಿಯಲ್ಲಿ ಸೋಲುವ ಭೀತಿಯಿಂದ ಬಾದಾಮಿಗೆ ಸಿಎಂ ವಲಸೆ

May 5, 2018

ಕೊಳ್ಳೇಗಾಲ:  ಚಾಮುಂಡೇಶ್ವರಿಯಲ್ಲಿ ಸೋಲುವ ಭೀತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿಗೆ ವಲಸೆ ಬಂದಿದ್ದಾರೆ. ನಾನು ಮೊಳಕಾಲ್ಮೂರು ಹಾಗೂ ಬಾದಾಮಿ ಎರಡು ಕ್ಷೇತ್ರಗಳಲ್ಲೂ ಸ್ಪರ್ಧಿಸಿದ್ದು, ಎರಡು ಕ್ಷೇತ್ರದಲ್ಲೂ ಕಾರ್ಯಕರ್ತರು ಹಾಗೂ ಮತದಾರರ ಆಶೀರ್ವಾದದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಸಂಸದ ಹಾಗೂ ಮಾಜಿ ಸಚಿವ ಶ್ರೀರಾಮುಲು ಹೇಳಿದರು.

ಅವರು ಹನೂರು ಕ್ಷೇತ್ರ ವ್ಯಾಪ್ತಿಯ ಪಾಳ್ಯ ಹಾಗೂ ಕೌದಳ್ಳಿ ಗ್ರಾಮದಲ್ಲಿ ಅಯೋಜಿಸಲಾಗಿದ್ದ ರೋಡ್ ಶೋನಲ್ಲಿ ಪಾಲ್ಗೊಂಡು ಬಿಜೆಪಿ ಅಭ್ಯರ್ಥಿ ಡಾ.ಪ್ರೀತನ್ ನಾಗಪ್ಪ ಪರ ಮತಯಾಚಿಸಿ ಮಾತನಾಡಿ. ರಾಜ್ಯದಲ್ಲಿ 80 ಕ್ಷೇತ್ರಗಳಲ್ಲಿ ಈಗಾಗಲೇ ಪ್ರಚಾರ ಕೈಗೊಂಡಿದ್ದೇನೆ. ಬಾದಾಮಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲಲಿದ್ದಾರೆ. ಅದೇ ರೀತಿಯಲ್ಲಿ ರಾಜ್ಯದಲ್ಲೂ ಕಾಂಗ್ರೆಸ್ ಸೋಲು ಖಚಿತ ಎಂದು ಭವಿಷ್ಯ ನುಡಿದರು.

ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 24ಗಂಟೆಯೊಳಗೆ ವಾಲ್ಮೀಕಿ ಸಮಾಜಕ್ಕೆ ಈಗಿರುವ ಶೇ.3.5ರಷ್ಟು ಮೀಸಲಾತಿ ರದ್ದುಗೊಳಿಸಿ 7.5ರಷ್ಟು ಮೀಸಲಾತಿ ಜಾರಿಗೊಳಿಸಲಾಗುವುದು. ವಾಲ್ಮೀಕಿ ಸಮಾಜದಿಂದ ಬಂದ ನಾನು ಮಾತಿಗೆ ತಪ್ಪುವವನಲ್ಲ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ಯಡಿಯೂರಪ್ಪ ಕೈ ಬಲಪಡಿಸಲು ಡಾ.ಪ್ರೀತನ್ ನಾಗಪ್ಪ ಅವರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿಕೊಡಿ ಎಂದು ಮನವಿ ಮಾಡಿದರು.

ಬಿಜೆಪಿಯದ್ದು ಉತ್ತಮ ಪ್ರಣಾಳಿಕೆ: ರಾಜ್ಯದಲ್ಲಿನ ಬಿಜೆಪಿ ಗೆಲುವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುವ ಗೆಲುವಾಗಿದೆ. ಈಗಾಗಲೇ ರಾಜ್ಯಾದ್ಯಂತ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ಮೋದಿಯವರ ಜನಪರ ಕಾರ್ಯಕ್ರಮದಿಂದಾಗಿ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಗೆಲ್ಲಲಿದೆ ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ರೈತರ ಸಾಲಮನ್ನಾ ಮಾಡಲಾಗುವುದು ಎಂದು ಭರವಸೆ ನೀಡಿದರಲ್ಲದೆ, ರಾಜ್ಯದಲ್ಲಿ ಸುಮಾರು 30 ವರ್ಷಗಳಿಂದ ನಮ್ಮ ವಾಲ್ಮೀಕಿ ಸಮಾಜದ ಪರಿವಾರ ಮತ್ತು ತಳವಾರದವರು ನಡೆಸುತ್ತಿದ್ದ ಹೋರಾಟಕ್ಕೆ ಕೇಂದ್ರ ಸರ್ಕಾರ ಮನ್ನಣೆ ನೀಡಿದೆ. ಜನಾಂಗವನ್ನು ಪ್ರಧಾನಿ ಮೋದಿ ಅವರು ಎಸ್‍ಟಿ ಜನಾಂಗಕ್ಕೆ ಸೇರ್ಪಡೆ ಮಾಡಿದ್ದಾರೆ ಎಂದರು.
ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಇಲ್ಲಿನ ಜನರು ಕೂಲಿ ಕೆಲಸವಿಲ್ಲದೆ ಹೊಟ್ಟೆಪಾಡಿಗಾಗಿ ವಲಸೆ ಹೋಗುತ್ತಿದ್ದಾರೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಇಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಯಡಿಯೂರಪ್ಪ ಅವರ ಗಮನಸೆಳೆದು ಬಗೆಹರಿಸಲಾಗುವುದು. ನಿರುದ್ಯೋಗ ನಿವಾರಣೆಗಾಗಿ ರಾಜ್ಯದಲ್ಲಿ 1 ಕೋಟಿ ಉದ್ಯೋಗ ಸೃಷ್ಟಿಸಲಾಗುವುದು. ರಾಜಕೀಯ ಕುಟುಂಬದ ಹಿನ್ನಲೆಯಿಂದ ಬಂದಿರುವ ಡಾ. ಪ್ರೀತನ್‍ನಾಗಪ್ಪ ಅವರಿಗೆ ಮತ ನೀಡುವ ಮೂಲಕ ಅವರನ್ನು ಜಯಶೀಲರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಅಭ್ಯರ್ಥಿ ಡಾ. ಪ್ರೀತನ್‍ನಾಗಪ್ಪ ಮಾತನಾಡಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರ ಏಳಿಗೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದರು. ಪ್ರತ್ಯೇಕ ರೈತ ಬಜೆಟ್ ಮಂಡಿಸುವ ಮೂಲಕ ರಾಜ್ಯದ ಅನ್ನದಾತರನ್ನು ಕಾಪಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗುತ್ತಿದ್ದಂತೆ ಕ್ಷೇತ್ರದಲ್ಲಿನ ಬಹುದೊಡ್ಡ ಸಮಸ್ಯೆಯಾದ ವಲಸೆ ಹೋಗುವಿಕೆಯನ್ನು ತಪ್ಪಿಸಲು ವಿಶೇಷ ಯೋಜನೆಯನ್ನು ಜಾರಿಗೊಳಿಸಲು ಕ್ರಮ ವಹಿಸಲಾಗುವುದು ಎಂದರು.

ಜಿಪಂನ ಮಾಜಿ ಅಧ್ಯಕ್ಷ ರಾಮಚಂದ್ರ. ಸದಸ್ಯೆ ಮಂಜುಳಾ ರಂಗಸ್ವಾಮಿ. ಡಾ.ದತ್ತೇಶ್ ಕುಮಾರ್. ಅನಿಲ್‍ಕುಮಾರ್. ಇರ್ಷಾದ್ ಪಾಶಾ. ಮಾದೇಶ್, ಬಿ.ಕೆ.ಶಿವಕುಮಾರ್, ನಾಗರಾಜು, ಆನಾಪುರ ಉಮೇಶ್, ಉದ್ದನೂರು ಪ್ರಸಾದ್, ಶಿವರಾಮು. ಚೇತನ್. ಮಹೇಶ್ ರುದ್ರಸ್ವಾಮಿ ಇನ್ನಿತರರು ಇದ್ದರು.

Translate »