ವಿರಾಜಪೇಟೆಯಲ್ಲೂ ಕಾರ್ಮಿಕರ ಹೋರಾಟ
ಕೊಡಗು

ವಿರಾಜಪೇಟೆಯಲ್ಲೂ ಕಾರ್ಮಿಕರ ಹೋರಾಟ

January 9, 2019

ವಿರಾಜಪೇಟೆ: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನ ವಿರೋಧಿ ನೀತಿ ವಿರೋಧಿಸಿ ಇಂದು ವಿರಾಜಪೇಟೆ ತಾಲೂಕಿನ ಕಾರ್ಮಿಕ ಸಂಘಟನೆಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ತಾಲೂಕಿನ ಕಟ್ಟಡ ಕಾರ್ಮಿಕರು, ತೋಟ ಕಾರ್ಮಿಕರು, ಬಿಎಸ್‍ಎನ್‍ಎಲ್, ಎಲ್.ಐ.ಸಿ ಹಾಗೂ ಜೆ.ಸಿ.ಟಿ.ಯು ನೇತೃತ್ವದಲ್ಲಿ ಪಟ್ಟಣದ ತೆಲುಗರ ಬೀದಿಯಿಂದ ಮೆರವಣಿಗೆ ಹೊರಟು ಜೈನರ ಬೀದಿ, ದೊಡ್ಡಟ್ಟಿ ಚೌಕಿ, ಮುಖ್ಯ ರಸ್ತೆಗಾಗಿ ಗಡಿಯಾರ ಕಂಬದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ ಮಿನಿ ವಿಧಾನ ಸೌಧ ತಾಲೂಕು ಕಚೇರಿ ಎದುರು ಧರಣಿ ನಡೆಸಿದರು.

ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ಜೆ.ಸಿ.ಟಿ.ಯು. ಸಂಘಟನೆಯ ಎ.ಸಿ.ಸಾಬು, ಜನರಲ್ ವರ್ಕರ್ಸ್ ಯೂನಿಯನ್‍ನ ಪ್ರಧಾನ ಕಾರ್ಯ ದರ್ಶಿ ಮಹದೇವ, ಸಿ.ಐ.ಟಿ.ಯು.ನ ಜಿಲ್ಲಾ ಅಧ್ಯಕ್ಷ ಐ.ಆರ್.ದುರ್ಗ ಪ್ರಸಾದ್, ಬಿಸಿಯೂಟ ನೌಕರರ ಜಿಲ್ಲಾ ಕಾರ್ಯದರ್ಶಿ ಕುಸುಮ, ತಾಲೂಕು ಅಧ್ಯಕ್ಷೆ ನ್ಯಾನ್ಸಿ, ತಾಲೂಕು ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಎಂ.ಕೆ. ಹರೀಶ್, ಜೆ.ಸಿ.ಟಿ.ಯು. ನಾಗರಾಜು, ಕಟ್ಟಡ ಕಾರ್ಮಿಕ ಸಂಘಟನೆಯ ಎಂ.ಕೆ.ಮೋಹನ್ ಹಾಗೂ ಸಾಲಿ ಪೌಲಸ್, ತೋಟ ಕಾರ್ಮಿಕರ ಸಂಘದ ಅಧ್ಯಕ್ಷ ಮಂಜು, ಬಿ.ಎಸ್.ಎನ್.ಎಲ್. ನಾಯಕ್ ಅವರುಗಳು ಮಾತನಾಡಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಸಿದ್ದಾಪುರ, ತಿತಿಮತಿ, ಪಾಲಿಬೆಟ್ಟ, ಹುದಿಕೇರಿ, ಕಾಕೋಟುಪರಂಬು, ಹೆಗ್ಗಳ, ಹಾಗೂ ತಾಲೂಕಿನ ಇತರ ಏಸ್ಟೇಟ್‍ಗಳಿಂದಲೂ ಬಂದ ಕಾರ್ಮಿಕರು ಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು, ಪೊಲೀಸ್ ಇಲಾಖೆಯಿಂದ ಬಂದೊಬಸ್ತ್ ಏರ್ಪಡಿಸಲಾಗಿತ್ತು. ಸರ್ಕಲ್ ಇನ್ಸ್‍ಪ್ಯೆಕ್ಟರ್ ಎನ್.ಕುಮಾರ್ ಆರಾಧ್ಯ, ನಗರ ಠಾಣಾಧಿಕಾರಿ ಸಂತೋಷ್ ಕಶ್ಯಪ್, ಗ್ರಾಮಾಂತರ ಠಾಣಾಧಿಕಾರಿ ಸುರೇಶ್ ಭೋಪಣ್ಣ ಖುದ್ದು ಹಾಜರಿದ್ದರು. ವಿರಾಜಪೇಟೆ ಪಟ್ಟಣದಲ್ಲಿ ಬೆಳಿಗ್ಗೆ ಯಿಂದಲೇ ಅಂಗಡಿ, ಹೋಟೆಲ್‍ಗಳ ಮುಂಗಟ್ಟುಗಳನ್ನು ತೆರೆದಿತ್ತು, ಬ್ಯಾಂಕ್‍ಗಳು ಕಛೇರಿಗಳು ದಿನನಿತ್ಯದಂತೆ ಕಾರ್ಯನಿರ್ವ ಹಿಸುತ್ತಿದ್ದವು, ಬಸ್ ಹಾಗೂ ಇತರ ವಾಹನಗಳು ಓಡಾಡುತ್ತಿದ್ದವು.

Translate »