ಮೈಸೂರು ಮೃಗಾಲಯದಲ್ಲಿ ವಿಶ್ವ ಘೇಂಡಾಮೃಗ ದಿನಾಚರಣೆ
ಮೈಸೂರು

ಮೈಸೂರು ಮೃಗಾಲಯದಲ್ಲಿ ವಿಶ್ವ ಘೇಂಡಾಮೃಗ ದಿನಾಚರಣೆ

September 24, 2019

ಮೈಸೂರು, ಸೆ.23(ಎಂಟಿವೈ)- `ವಿಶ್ವ ಘೇಂಡಾಮೃಗ’ ದಿನದ ಹಿನ್ನೆಲೆಯಲ್ಲಿ ಮೈಸೂ ರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರವಾಸಿಗರಿಗೆ ಫೇಂಡಾಮೃಗಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಅವುಗಳ ಸಂತತಿ ರಕ್ಷಣೆಗೆ ಜಾಗೃತಿ ಮೂಡಿಸಲಾಯಿತು.

ಮೃಗಾಲಯದಲ್ಲಿನ ಘೇಂಡಾಮೃಗಗಳ ಕೇಜ್ ಬಳಿ ಮೃಗಾಲಯದ ವತಿ ಯಿಂದ `ವಿಶ್ವ ಘೇಂಡಾ ಮೃಗ’ಗಳ ದಿನದ ಶುಭಾ ಶಯ ಕೋರುವ ಬ್ಯಾನರ್ ಹಾಕಿ, ಘೇಂಡಾ ಮೃಗ ಗಳ ಜೀವನ ಕ್ರಮ ವಿವರಣೆ ನೀಡಲು ಓರ್ವ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಭಾನುವಾರವಾಗಿದ್ದ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಅಲ್ಲದೆ ಯೂತ್ ಕ್ಲಬ್ ವಿದ್ಯಾರ್ಥಿಗಳ ತರಗತಿಯೂ ಇಂದು ನಡೆಯುತ್ತಿದ್ದರಿಂದ ಘೇಂಡಾಮೃಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾಹಿತಿ ಕಲೆ ಹಾಕಿದರು.

ಪ್ರವಾಸಿಗರಿಗೆ ವಿವರಿಸಲು ಮೃಗಾಲಯದ ಜೀವಶಾಸ್ತ್ರಜ್ಞರಾದ ಸಿ.ಸ್ನೇಹ ಎಂಬು ವರನ್ನು ನಿಯೋಜಿಸಲಾಗಿತ್ತು. ಸಸ್ಯಹಾರಿ ಪ್ರಾಣಿಯಾಗಿರುವ ಘೇಂಡಾಮೃಗವು 5 ಪ್ರಬೇಧಗಳಲ್ಲಿ ಕಂಡು ಬರುತ್ತವೆ. ಬಿಳಿ ಮತ್ತು ಕಪ್ಪು ಘೇಂಡಾಮೃಗ, ಒಂದು ಕೊಂಬಿನ ಘೇಂಡಾಮೃಗ, ಸುಮಾತ್ರ ಘೇಂಡಾಮೃಗ ಹಾಗೂ ಜಾವನ್ ಘೇಂಡಾಮೃಗ ಎಂದು ವಿಂಗಡಿಸಲಾಗಿದೆ. ವಿಶ್ವದಲ್ಲಿಯೇ ಕೇವಲ 30 ಸಾವಿರವಷ್ಟೇ ಘೇಂಡಾಮೃಗಗಳಿದ್ದು, ಅಳಿವಿ ನಂಚಿನಲ್ಲಿರುವ ಪ್ರಾಣಿಯಾಗಿದೆ. ಭಾರತದಲ್ಲಿ 2600 ಘೇಂಡಾಮೃಗವಿದೆ. ಅಸ್ಸಾಂ ಹೆಚ್ಚಿನ ಸಂಖ್ಯೆಯಲ್ಲಿ ಘೇಂಡಾಮೃಗ ಹೊಂದಿರುವ ರಾಜ್ಯವಾಗಿದೆ. ಕೊಂಬಿಗಾಗಿ ಬೇಟೆ ಯಾಡುತ್ತಿದ್ದಾರೆ. ಇದನ್ನು ತಪ್ಪಿಸಿ ಮುಂದಿನ ಪೀಳಿಗೆಗೆ ಕೊಡುಗೆ ನೀಡುವ ನಿಟ್ಟಿನಲ್ಲಿ ವಿಶ್ವ ವನ್ಯಜೀವಿ ನಿಧಿ ಸಂಸ್ಥೆಯು 2010ರಿಂದ ಸೆ.22ರಂದು `ವಿಶ್ವ ಘೇಂಡಾ ಮೃಗ ದಿನ’ವಾಗಿ ಆಚರಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಮೈಸೂರು ಮೃಗಾಲದಲ್ಲಿ ಒಂದು ಜೊತೆ ಬಿಳಿ ಘೇಂಡಾಮೃಗ, ಒಂದು ಜೋಡಿ ಭಾರತೀಯ ಘೇಂಡಾಮೃಗವಿದೆ ಎಂದು ಪ್ರವಾಸಿಗರಿಗೆ ಮಾಹಿತಿ ನೀಡಿದರು. ಇದೇ ವೇಳೆ ಘೇಂಡಾಮೃಗಗಳ ಜೀವಿತಾವಧಿ, ಆಹಾರ ಪದ್ಧತಿ, ಸಂತಾನೋತ್ಪತ್ತಿ ಸೇರಿದಂತೆ ಇನ್ನಿತರ ವಿಷಯವನ್ನು ಪ್ರವಾಸಿಗರು ಕೇಳಿ ತಿಳಿದುಕೊಂಡರು. ಕಾರ್ಯಕ್ರಮದಲ್ಲಿ ಆರ್‍ಎಫ್‍ಓ ರಕ್ಷಿತ್ ಇನ್ನಿತರರು ಉಪಸ್ಥಿತರಿದ್ದರು.

Translate »