ಧ್ರುವನಾರಾಯಣ್ ಪರ ಪ್ರಚಾರದ ನಡುವೆಯೇ ‘ಕೈ’ ಸೇರ್ಪಡೆಗೂ ಯತೀಂದ್ರ ಆಹ್ವಾನ
ಮೈಸೂರು

ಧ್ರುವನಾರಾಯಣ್ ಪರ ಪ್ರಚಾರದ ನಡುವೆಯೇ ‘ಕೈ’ ಸೇರ್ಪಡೆಗೂ ಯತೀಂದ್ರ ಆಹ್ವಾನ

March 29, 2019

ತಿ.ನರಸೀಪುರ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ್ ಪರ ಪ್ರಚಾರ ನಡೆಸಿರುವ ಶಾಸಕ ಡಾ.ಎಸ್.ಯತೀಂದ್ರ ಅವರು ಕ್ಷೇತ್ರದಲ್ಲಿ ಜೆಡಿಎಸ್ ಮುಖಂಡರನ್ನು ಭೇಟಿ ಮಾಡಿ ಬೆಂಬಲ ಕೋರುತ್ತಿದ್ದಾರೆ. ಕಾಂಗ್ರೆಸ್‍ಗೆ ಸೇರ್ಪಡೆಯಾಗಿ ಎಂದೂ ಆಹ್ವಾನಿಸುತ್ತಿದ್ದಾರೆ.

ತಾಲೂಕಿನ ಹೊಸ ಕೆಂಪಯ್ಯನಹುಂಡಿ ಗ್ರಾಮದಲ್ಲಿರುವ ಉಪ್ಪಾರ ಮಹಾಸಭಾ ರಾಜ್ಯ ಉಪಾಧ್ಯಕ್ಷ ಹಾಗೂ ಜೆಡಿಎಸ್ ಕಾರ್ಯದರ್ಶಿ ಆರ್.ಬಸವರಾಜು ಅವರ ನಿವಾಸಕ್ಕೆ ಭೇಟಿ ನೀಡಿದ ಎಸ್.ಯತೀಂದ್ರ ಅವರು ಅಭ್ಯರ್ಥಿ ಆರ್.ಧ್ರುವನಾರಾಯಣ್ ಅವರ ಗೆಲುವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಲೋಕಸಭಾ ಚುನಾವಣೆಗೂ ಮೈತ್ರಿ ಮುಂದುವರೆಸಲಾಗಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮುಖಂಡರುಗಳು ಬಿಜೆಪಿ ಮಣಿಸಲು ಸಹಕಾರ ನೀಡಬೇಕು. ಕ್ಷೇತ್ರದಲ್ಲಿ ಉಪ್ಪಾರ ಸಮುದಾಯದ ಹಿತದೃಷ್ಟಿಯಿಂದ ಸಮುದಾಯ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಬೇಕು ಎಂದು ಆರ್.ಬಸವರಾಜು ಅವರಿಗೆ ಆಹ್ವಾನ ನೀಡಿದರು.

ಸದ್ಯ ಕಾಂಗ್ರೆಸ್ ಸೇರುವ ಚಿಂತನೆಯಿಲ್ಲ ಎಂದು ಸ್ಪಷ್ಟಪಡಿಸಿದ ಆರ್.ಬಸವರಾಜು ಅವರು, ಮೈತ್ರಿ ಧರ್ಮ ಪಾಲಿಸುವಂತೆ ಜೆಡಿಎಸ್ ವರಿಷ್ಠರ ಸೂಚನೆಯಿರುವುದರಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುತ್ತೇನೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದರು. ಅಭ್ಯರ್ಥಿ ಆರ್.ಧ್ರುವನಾರಾಯಣ ಹಾಗೂ ಶಾಸಕರಾದ ನಿಮ್ಮ ಮೇಲೆ ವೈಯುಕ್ತಿಕವಾಗಿ ಗೌರವವಿರುವುದರಿಂದ ಕಾಂಗ್ರೆಸ್ ಗೆಲ್ಲಲು ಬೆಂಬಲ ನೀಡುತ್ತೇನೆ ಎಂದು ಭರವಸೆ ನೀಡಿದರು.

ಜಿ.ಪಂ ಮಾಜಿ ಸದಸ್ಯ ಕೆ.ಮಹದೇವ, ಗ್ರಾ.ಪಂ ಸದಸ್ಯ ಗುಂಡಶೆಟ್ಟಿ, ಸುಂದರ, ಮುಖಂಡರಾದ ನಾಗರಾಜು, ಪಟೇಲ್ ಶೆಟ್ಟರು, ವೆಂಕಟರಾಮು, ಭೀಮಶೆಟ್ಟರು, ಸೋಮಶೆಟ್ಟರು, ರಾಚಶೆಟ್ಟಿ, ಗುರುಸ್ವಾಮಿ, ರಂಗಶೆಟ್ಟರು, ಜಯರಾಮು, ಕೆಂದಶೆಟ್ಟಿ, ನಾರಾಯಣಶೆಟ್ಟಿ ಹಾಗೂ ಇನ್ನಿತರರು ಹಾಜರಿದ್ದರು.

ವರುಣ ಶಾಸಕ ಡಾ.ಎಸ್.ಯತೀಂದ್ರ ಹೊಸ ಕೆಂಪಯ್ಯನಹುಂಡಿಯಲ್ಲಿ ಉಪ್ಪಾರ ಸಮುದಾಯದ ಮುಖಂಡ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಆರ್.ಬಸವರಾಜು ಅವರನ್ನು ಭೇಟಿ ಮಾಡಿ ಲೋಕಸಭಾ ಚುನಾವಣೆಗೆ ಬೆಂಬಲ ಕೋರಿದರು. ಜಿ.ಪಂ ಮಾಜಿ ಸದಸ್ಯ ಕೆ.ಮಹದೇವ ಇನ್ನಿತರರು ಇದ್ದಾರೆ.

Translate »