ಇಂತಹುದೇ ಖಾತೆ ಬೇಕೆಂದು ಬೇಡಿಕೆ ಇಟ್ಟಿಲ್ಲ
ಮೈಸೂರು

ಇಂತಹುದೇ ಖಾತೆ ಬೇಕೆಂದು ಬೇಡಿಕೆ ಇಟ್ಟಿಲ್ಲ

December 11, 2019
  •  ಯಶವಂತಪುರ ನೂತನ ಶಾಸಕ ಎಸ್.ಟಿ.ಸೋಮಶೇಖರ್ ಸ್ಪಷ್ಟನೆ
  • ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ನಂತರ ಅಡಗೂರು ಹೆಚ್.ವಿಶ್ವನಾಥ್ ಭೇಟಿಯಾಗಿ ಚರ್ಚೆ

ಮೈಸೂರು,ಡಿ.10(ಎಸ್‍ಬಿಡಿ)-ನಾವು ಯಾವುದೇ ಖಾತೆಗೆ ಬೇಡಿಕೆ ಇಟ್ಟಿಲ್ಲ ಎಂದು ಯಶವಂತಪುರ ಕ್ಷೇತ್ರದ ನೂತನ ಶಾಸಕ ಎಸ್.ಟಿ. ಸೋಮಶೇಖರ್ ಇಂದಿಲ್ಲಿ ಸ್ಪಷ್ಟಪಡಿಸಿದರು.

ಉಪ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮಂಗಳ ವಾರ ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀ ರ್ವಾದ ಪಡೆದ ಎಸ್.ಟಿ.ಸೋಮಶೇಖರ್, ಹುಣಸೂರು ಕ್ಷೇತ್ರದ ಪರಾಜಿತ ಅಭ್ಯರ್ಥಿ ಎ.ಹೆಚ್.ವಿಶ್ವನಾಥ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾವು 17 ಮಂದಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್‍ನಿಂದ ಹೊರ ಬಂದು ಬಿಜೆಪಿ ಸೇರುವ ಸಂದರ್ಭದಲ್ಲಿ ನಮ್ಮ ಕ್ಷೇತ್ರಗಳಿಗೆ ಅನುದಾನ ಮಾತ್ರ ಕೇಳಿ ದ್ದೆವು. ಬಿಜೆಪಿಯವರು ನಮಗೆಲ್ಲಾ ಟಿಕೆಟ್ ನೀಡಿ, ಚುನಾವಣೆಯಲ್ಲಿ ನಮ್ಮ ಪರವಾಗಿ ಪ್ರಚಾರ ಮಾಡಿದ್ದಾರೆ. ಎಲ್ಲರನ್ನೂ ಗೌರವ ದಿಂದ ನಡೆಸಿಕೊಂಡಿದ್ದಾರೆ. ಇದರ ಹೊರತು ನಾವು ಯಾವುದೇ ಖಾತೆ ನೀಡುವಂತೆ ಮುಖ್ಯಮಂತ್ರಿ ಯಡಿ ಯೂರಪ್ಪನವರ ಬಳಿ ಕೇಳಿಲ್ಲ. ಆ ಬಗ್ಗೆ ಚರ್ಚೆಯನ್ನೂ ನಡೆಸಿಲ್ಲ. ಹೀಗೆ ಕಂಡೀ ಷನ್(ಷರತ್ತು) ಹಾಕುವ ಮಟ್ಟದಲ್ಲಿ ನಾವಿಲ್ಲ. ಎಲ್ಲರೂ ಸಭೆ ನಡೆಸಿ, ಗೆದ್ದವರು ಹಾಗೂ ಸೋತವರ ಸಂಬಂಧ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಸಿದ್ದರಾಮಯ್ಯ ನಮ್ಮ ಆಪ್ತರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಆಪ್ತರು ಎನ್ನುವುದರಲ್ಲಿ ಯಾವುದೇ ಅನು ಮಾನ ಬೇಡ. ಸಿದ್ದರಾಮಯ್ಯನವರು ಉಪ ಚುನಾವಣೆಯಲ್ಲಿ 10-12 ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅವರ ನಿರೀಕ್ಷೆಯಂತೆ ಫಲಿತಾಂಶ ಬಂದಿಲ್ಲ ವಾದ್ದರಿಂದ ಮನಸ್ಸಿಗೆ ಬೇಸರವಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರಬ ಹುದು. ಆದರೆ ಹೈಕಮಾಂಡ್ ಅವರ ರಾಜೀ ನಾಮೆ ಅಂಗೀಕರಿಸುವುದಿಲ್ಲ ಅನ್ನಿಸುತ್ತದೆ. ಅಧಿ ಕಾರದಲ್ಲಿರುವ ಪಕ್ಷವೇ ಉಪ ಚುನಾ ವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು. ಈ ಚುನಾವಣೆಯಲ್ಲೂ ಇದೇ ಆಗಿದೆ. ಇದರಿಂದ ಕಾಂಗ್ರೆಸ್ ದುರ್ಬಲವಾಗಿದೆ ಎನ್ನಲಾಗದು. ಜೆಡಿಎಸ್‍ನ ಇಂದಿನ ಸ್ಥಿತಿಗೆ ಅವರು ಒಂದೂ ವರೆ ವರ್ಷ ನಡೆಸಿದ ಆಡಳಿತವೇ ಕಾರಣ. ನಮ್ಮೆಲ್ಲರನ್ನೂ ಸರಿಯಾಗಿ ನಡೆಸಿ ಕೊಂಡಿದ್ದರೆ ಈ ಉಪ ಚುನಾವಣೆಯೇ ಬರುತ್ತಿರಲಿಲ್ಲ ಎಂದು ಹೇಳಿದರು.

ಗುರು: ಹೆಚ್.ವಿಶ್ವನಾಥ್ ಅವರು ನಮ್ಮ ಗುರುಗಳು. ಬಾಂಬೆಯಲ್ಲಿ ಇದ್ದಾಗ ನಮ್ಮೆಲ್ಲರಿಗೂ ಸದನದ ನಡಾವಳಿಗಳ ಬಗ್ಗೆ ತಿಳಿಸುತ್ತಿದ್ದರು. ಈಗ ಸೋತಿದ್ದರೂ ಅವರನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ಬೆಂಗಳೂರಿನಲ್ಲಿ 17 ಮಂದಿಯೂ ಸಭೆ ಸೇರಿ, ಚರ್ಚಿಸಿ ಮುಂದಿನ ನಡೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಈ ವಿಚಾರವಾಗಿ ಮುಖ್ಯಮಂತ್ರಿಗಳ ಜೊತೆ ಸಮಾಲೋಚಿಸುತ್ತೇವೆ ಎಂದು ಎಸ್.ಟಿ. ಸೋಮಶೇಖರ್ ತಿಳಿಸಿದರು.

ಯಡಿಯೂರಪ್ಪ ನಮ್ಮ ಕೈ ಬಿಡಲ್ಲ
ಮೈಸೂರು,ಡಿ.10-ಮುಖ್ಯಮಂತ್ರಿ ಯಡಿಯೂರಪ್ಪನವರು ನಮ್ಮ ಕೈ ಬಿಡುವುದಿಲ್ಲ ಎಂದು ಹುಣಸೂರು ಉಪ ಚುನಾವಣೆ ಪರಾಜಿತ ಬಿಜೆಪಿ ಅಭ್ಯರ್ಥಿ ಎ.ಹೆಚ್.ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದರು.

ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ತಮ್ಮ ಮೈಸೂರು ನಿವಾಸಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವಿಶ್ವನಾಥ್, ಯಡಿಯೂರಪ್ಪ ನಮ್ಮ ಜೊತೆ ಇರೋದಲ್ಲ. ನಾವೇ ಅವರ ಜೊತೆ ಇದ್ದೇವೆ. ಯಾವ ಕ್ಷಣದಲ್ಲೂ ಅವರು ನಮ್ಮ ಕೈ ಬಿಡುವುದಿಲ್ಲ ಎಂಬ ಭರವಸೆ ಇದೆ. ಯಡಿಯೂರಪ್ಪ ಒಮ್ಮೆ ಮಾತು ಕೊಟ್ಟರೆ ಎಂದೂ ತಪ್ಪುವುದಿಲ್ಲ ಎಂದರು.

ಶುದ್ಧ ರಾಜಕಾರಣಕ್ಕಾಗಿ ನಾವು ತ್ಯಾಗ ಮಾಡಿದ್ದೇವೆ. ನನಗೆ ಉಪ ಚುನಾವಣೆ ಸೋಲಿನ ನೋವಿಗಿಂತ ಸದೃಢ ಸರ್ಕಾರ ತಂದಿರುವ ಖುಷಿ ಇದೆ. ನಮ್ಮ ಜನರಿಗೆ ಯಾರನ್ನು ಗೆಲ್ಲಿಸಬೇಕೆಂದು ಗೊತ್ತಿರಬೇಕು. ನಾವು ಜನರನ್ನು ದೂರುವುದಲ್ಲ. ನಮ್ಮನ್ನು ನಾವೇ ದೂರಿಕೊಳ್ಳಬೇಕು. ಜನರಿಗೆ ಮತ್ತಷ್ಟು ಮಾಹಿತಿ ಬೇಕಿದೆ. ಉಪ ಚುನಾವಣೆಯಲ್ಲಿ ನನ್ನ ಸೋಲಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರು. ಜಿಟಿಡಿ, ಸಿದ್ದು, ಕುಮಾರಸ್ವಾಮಿ ಎಲ್ಲರೂ ಸೇರಿಕೊಂಡು ನನ್ನನ್ನು ಸೋಲಿಸಿದ್ದಾರೆ ಎಂದು ಆರೋಪಿಸಿದರು. ಸಿದ್ದರಾಮಯ್ಯ ಅವರ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿ, `ನೀವೇ ನೋಡಿ, ಭಗವಂತ ಎಲ್ಲೋ ಒಂದು ಕಡೆ ತೋರಿಸುತ್ತಾನೆ’ ಎಂದು ಮಾರ್ಮಿಕವಾಗಿ ನುಡಿದರು.

Translate »