ಬಜೆಟ್‍ನಲ್ಲಿ ಕೊಡಗಿಗೆ ಶೂನ್ಯ ಕೊಡುಗೆ
ಕೊಡಗು

ಬಜೆಟ್‍ನಲ್ಲಿ ಕೊಡಗಿಗೆ ಶೂನ್ಯ ಕೊಡುಗೆ

July 6, 2018

ಮಡಿಕೇರಿ:  ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್ ಮಂಡನೆ ಯಾಗಿದೆ. ಈ ಬಾರಿಯ ಬಜೆಟ್‍ನಲ್ಲಿ ಕಾಫಿ, ಕರಿಮೆಣಸು ಸೇರಿದಂತೆ ಆರ್ಥಿಕ ಬೆಳೆಗಳನ್ನು ನಂಬಿಕೊಂಡಿರುವ ಜಿಲ್ಲೆಯ ಕೃಷಿಕರು, ಸಾಲಮನ್ನಾ, ಕೃಷಿಭಾಗ್ಯ, ಕಾಡಾನೆ ಹಾವಳಿ ಸಮಸ್ಯೆ ಪರಿಹಾರ, ಬೆಳೆಹಾನಿ ಪರಿಹಾರ ಹೆಚ್ಚಳ ಸೇರಿದಂತೆ ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಬಜೆಟ್ ನಲ್ಲಿ ಅನುದಾನ ಮೀಸಲಿಡುವ ಕುರಿತು ಆಶಾಭಾವನೆ ಹೊಂದಿದ್ದರು.

ವಿಶೇಷವಾಗಿ ಈ ಹಿಂದಿನ ಸರ್ಕಾರ ದಂತೆ ಜಿಲ್ಲೆಯ ರಸ್ತೆಗಳ ಅಭಿವೃದ್ದಿಗೆ ವಿಶೇಷ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿತ್ತು. ಇದ ರೊಂದಿಗೆ ಕೊಡಗು ಜಿಲ್ಲೆ ಪ್ರವಾಸೋದ್ಯ ಮದಲ್ಲೂ ವಿಶ್ವಭೂಪಟದಲ್ಲಿ ಗುರುತಿಸಿ ಕೊಂಡಿದ್ದರೂ ಕೂಡಾ, ಬಜೆಟ್‍ನಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಮಹತ್ವವನ್ನೇ ನೀಡದಿರುವುದು ಪ್ರವಾಸೋದ್ಯಮವನ್ನು ನಂಬಿ ಬದುಕುತ್ತಿರುವ ಜಿಲ್ಲೆಯ ಜನರಿಗೆ ನಿರಾಸೆ ಮೂಡಿಸಿದೆ.

ಕುಮಾರಸ್ವಾಮಿ ಮಾತು ಕೊಟ್ಟಂತೆಯೇ ರಾಜ್ಯದ ಕೃಷಿಕರ ಸಾಲವನ್ನು ಕೆಲವು ನಿಬಂಧನೆಗೊಳಪಟ್ಟು ಮನ್ನಾ ಮಾಡಿದ್ದಾರೆ. ಆದರೆ ಆದಾಯ ತೆರಿಗೆ ಕಟ್ಟುವ ಕೃಷಿಕರಿಗೆ ಸಾಲಮನ್ನಾ ಅನ್ವಯಿಸದು ಎಂಬ ನಿಯಮದ ಮೂಲಕ ಕಾಫಿ ಬೆಳೆಗಾರರಿಗೆ ಸಾಲಮನ್ನಾದ ಪ್ರಯೋಜನಕ್ಕೆ ಕತ್ತರಿ ಪ್ರಯೋಗ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಜೆಡಿಎಸ್ ಪ್ರಾಬಲ್ಯದ ಜಿಲ್ಲೆಗಳಿಗೆ ಸಾಕಷ್ಟು ಕೊಡುಗೆ ನೀಡಿ ಕೊಡಗಿನಂಥ ಜಿಲ್ಲೆಗೆ ಏನೇನೂ ನೀಡದೇ ಕುಮಾರಸ್ವಾಮಿ ನಿರಾಶೆ ಮೂಡಿಸಿದ್ದಾರೆ ಎಂಬ ಅಭಿಪ್ರಾಯ ಜಿಲ್ಲೆಯ ಜನರಿಂದ ವ್ಯಕ್ತವಾಗಿದೆ.

ರಾಜ್ಯ ಸರ್ಕಾರದ ಬಜೆಟ್ ಅತ್ಯಂತ ನಿರಾಶದಾಯಕವಾಗಿದ್ದು, ಮುಖ್ಯ ಮಂತ್ರಿಗಳು ಕೇವಲ ಐದು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗುವಂತೆ ಕೆಲವು ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದಾರೆ. ರೈತರ ಸಾಲಮನ್ನಾಕ್ಕೆ ಸಂಬಂಧಿಸಿ ದಂತೆ ಕೇವಲ ಸುಸ್ತಿದಾರರ ಸಾಲವನ್ನು ಮಾತ್ರ ಮನ್ನಾ ಮಾಡಿದ್ದಾರೆ. ಸಾಲ ಮನ್ನಾ ಮಾಡಿದ ಮುಖ್ಯಮಂತ್ರಿಗಳು ಪೆಟ್ರೋಲ್, ಡಿಸೇಲ್ ಹಾಗೂ ವಿದ್ಯುತ್ ದರ ಹೆಚ್ಚಳ ಮಾಡಿದ್ದು, ಒಂದು ಅರ್ಥ ದಲ್ಲಿ ರೈತರಿಂದ ತಗೊಂಡು ವಾಪಾಸ್ಸು ಕೊಟ್ಟ ನಾಟಕ ಮಾಡಿದ್ದಾರೆ. ಬಜೆಟ್‍ನಲ್ಲಿ ಕೊಡಗನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ. ಫೆಬ್ರುವರಿ 16ರ ಬಜೆಟ್‍ನಲ್ಲಾಗಲಿ ಇಂದಿನ ಬಜೆಟ್‍ನಲ್ಲಾಗಲಿ ಕೊಡಗಿಗೆ ಏನೂ ಕೊಡುಗೆ ನೀಡದೇ ಸಂಪೂರ್ಣ ನಿರ್ಲಕ್ಷಿಸಲಾಗಿದೆ. – ಕೆ.ಜಿ.ಬೋಪಯ್ಯ, ಶಾಸಕರು, ವೀರಾಜಪೇಟೆ ವಿಧಾನಸಭಾ ಕ್ಷೇತ್ರ

 

ಸಿಎಂ ಕುಮಾರಸ್ವಾಮಿ ಅವರು ಮಂಡಿಸಿರುವ ಬಜೆಟ್ ಕೇವಲ ರಾಮನಗರ, ಮಂಡ್ಯ, ಹಾಸನ ಜಿಲ್ಲೆಗಳಿಗೆ ಮಾತ್ರ ಸೀಮಿತವಾದಂತಿದೆ. ಅವರು ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ ಎಂಬುದನ್ನು ಮರೆತಿದ್ದಾರೆ. ಕೊಡ ಗನ್ನು ಬಜೆಟ್‍ನಲ್ಲಿ ಸಂಪೂರ್ಣ ಕಡೆಗಣ ಸಿದ್ದಾರೆ. ಕಾಫಿ ಬೆಳೆ ಗಾರರ ಸಾಲಮನ್ನಾದ ಕುರಿತು ಬಜೆಟ್‍ನಲ್ಲಿ ಪ್ರಸ್ತಾಪವಿಲ್ಲ. ಒಟ್ಟಿನಲ್ಲಿ ಇದೊಂದು ನಿರಾಶದಾಯಕ ಬಜೆಟ್ ಆಗಿದೆ. – ಅಪ್ಪಚ್ಚು ರಂಜನ್, ಶಾಸಕರು, ಮಡಿಕೇರಿ ವಿಧಾನಸಭಾ ಕ್ಷೇತ್ರ.

 

ಇದೊಂದು ಉಪ್ಪು ಖಾರವಿಲ್ಲದ ನೀರಸ ಬಜೆಟ್ ಆಗಿದೆ. ಕೊಡಗನ್ನು ಸಂಪೂರ್ಣ ಕಡೆಗಣ ಸಲಾಗಿದೆ. ಕುಮಾರಸ್ವಾಮಿ ಅವರು ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ ಎಂಬುದನ್ನು ಮರೆತಿದ್ದಾರೆ. ಇದು ಜೆಡಿಎಸ್ ಸೀಮಿತ ಬಜೆಟ್. – ಸುನೀಲ್ ಸುಬ್ರಮಣ , ವಿಧಾನ ಪರಿಷತ್ ಸದಸ್ಯರು

 

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡಿಸಿರುವ ಬಜೆಟ್ ಜನಪರ ವಾಗಿದ್ದು, ರೈತರ ಸಾಲಮನ್ನಾ, ವೃದ್ಧರಿಗೆ ಮಾಸಾಶನ ಹೆಚ್ಚಳ, ಗರ್ಭಿಣ ಸ್ತ್ರೀಯರಿಗೆ ಮಾಸಾಶನ ಘೋಷಿಸಲಾಗಿರುವ ಜೊತೆಗೆ ಬಜೆಟ್‍ನಲ್ಲಿ ಘೋಷಿಸಿರುವ ಹಲವು ಯೋಜನೆಗಳು ಸ್ವಾಗತಾರ್ಹವಾಗಿದೆ. ಕೊಡಗಿನ ಮಟ್ಟಿಗೆ ಬಜೆಟ್ ನಲ್ಲಿ ಏನೂ ಘೋಷಣೆಯಾಗದಿರುವುದು ಅಸಮಾಧಾನ ಉಂಟು ಮಾಡಿದೆ. ಪ್ರತ್ಯೇಕವಾಗಿ ಕೊಡಗಿಗೆ ಒಳ್ಳೆಯ ಯೋಜನೆಗಳನ್ನು ನೀಡ ಬೇಕೆಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಳ್ಳುತ್ತೇನೆ. -ವೀಣಾ ಅಚ್ಚಯ್ಯ, ವಿಧಾನ ಪರಿಷತ್ ಸದಸ್ಯರು

 

ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿರುವ ಬಜೆಟ್‍ನಲ್ಲಿ ಕೊಡಗಿಗೆ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲೆಗೆ ಶೂನ್ಯ ಕೊಡುಗೆ ನೀಡುವ ಮೂಲಕ ಕೊಡಗನ್ನು ಕತ್ತಲೆಯಲ್ಲಿಡಲಾಗಿದೆ. ಕಾಫಿ ಬೆಳೆಗಾರರ ಸಾಲಮನ್ನಾದ ಬಗ್ಗೆ ಸ್ಪಷ್ಟತೆ ಇಲ್ಲಾ. ಇದು ಬೆಳೆಗಾರರನ್ನು ಗೊಂದಲಕ್ಕೆ ದೂಡಿದೆ. ಸಣ್ಣ ವರ್ತಕರ ಬಗ್ಗೆ ಪ್ರಸ್ತಾಪಿಸಲಾಗಿದೆಯಾದರೂ ಅದರ ಪ್ರಯೋ ಜನದ ಬಗ್ಗೆ ನಿಖರತೆ ಹೊಂದಿಲ್ಲ ಅದರಲ್ಲೂ ಈ ಬಾರಿಯ ಬಜೆಟ್‍ನ ಅಂಶಗಳು ಗುಪ್ತವಾಗಿಯೇ ಉಳಿದುಕೊಂಡಿವೆ. – ಜಿ.ಚಿದ್ವಿಲಾಸ್, ಮಾಜಿ ಅಧ್ಯಕ್ಷರು, ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್

 

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಡಿಸಿದ ಬಜೆಟ್ ಉತ್ತಮ ವಾಗಿದೆ. ಸಾಮಾಜಿಕ ಕಳಕಳಿಯಿಂದ ಸಂಧಿಗ್ದ ಪರಿಸ್ಥಿತಿ ಯಲ್ಲಿಯೂ ರೈತರ ಪರ ಕಾಳಜಿಯಿಂದ ಪ್ರತಿ ರೈತ ಕುಟುಂ ಬಕ್ಕೆ ಎರಡು ಲಕ್ಷದ ವರೆಗೆ ಸಾಲ ಮನ್ನಾ ಮಾಡಿರುವುದು ಉತ್ತಮ ಕಾರ್ಯ. -ಮಾಂಗೇರ ಪದ್ಮಿನಿ ಪೊನ್ನಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ, ಜೆಡಿಎಸ್

 

ಈ ಬಾರಿಯ ಬಜೆಟ್ ಸ್ವಾಗತಾರ್ಹವಾದರೂ ರೈತರ ಸಮಸ್ಯೆ ನೀಗಿಲ್ಲ. ಬೆಳೆದ ಬೆಳೆಗೆ ಬೆಲೆಯಿಲ್ಲದೆ ರೈತ ಕಂಗಲಾಗಿದ್ದಾನೆ.
ರೈತರ ಪರಿಸ್ಥಿತಿ ಸುಧಾರಣೆಯಾಗಬೇಕಾದರೆ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕು ಸ್ವಾಮಿನಾಥನ್ ವರದಿ ಜಾರಿಯಾಗಬೇಕು. -ಕಾಡ್ಯಮಾಡ ಮನು ಸೋಮಯ್ಯ, ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ, ಕೊಡಗು

Translate »