ಲಕ್ಷಗಟ್ಟಲೆ ಸಂಬಳ ಪಡೆಯುವ ಪ್ರೊಫೆಸರ್‍ಗಳು ನಾಲ್ಕು ಗಂಟೆಯೂ ಪಾಠ ಮಾಡುತ್ತಿಲ್ಲ…
ಮೈಸೂರು

ಲಕ್ಷಗಟ್ಟಲೆ ಸಂಬಳ ಪಡೆಯುವ ಪ್ರೊಫೆಸರ್‍ಗಳು ನಾಲ್ಕು ಗಂಟೆಯೂ ಪಾಠ ಮಾಡುತ್ತಿಲ್ಲ…

October 8, 2018

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ವಿಷಾದ
ಮೈಸೂರು:  ಲಕ್ಷಗಟ್ಟಲೆ ಸಂಬಳ ತೆಗೆದುಕೊಳ್ಳುವ ಪ್ರೊಫೆಸರ್‍ಗಳು ಸರಿಯಾಗಿ ನಾಲ್ಕು ಗಂಟೆ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿಲ್ಲ. ವಿಶ್ವವಿದ್ಯಾನಿಲಯಗಳಿಗೆ ಮಾರ್ಗದರ್ಶನ ನೀಡಬೇಕಾಗಿರುವ ಸಿಂಡಿಕೆಟ್ ಸಮಿತಿಯೇ ಸರಿಯಿಲ್ಲ. ಹೀಗಿರು ವಾಗ ಶಿಕ್ಷಣ ಕ್ಷೇತ್ರ ಬೆಳೆಯುವುದು ಹೇಗೆ? ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಬೇಸರ ವ್ಯಕ್ತಪಡಿಸಿದರು.

ಮೈಸೂರಿನ ವಿಜಯನಗರದಲ್ಲಿರುವ ಕೃಷಿಕ್ ಸರ್ವೋದಯ ಫೌಂಡೇಷನ್ ಮೈಸೂರು ಶಾಖೆಯ ಕೃಷಿಕ್ ಭವನದ ಆವರಣದಲ್ಲಿ ಭಾನುವಾರ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ.ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಫೌಂಡೇ ಷನ್‍ನ ಸರ್ವ ಸದಸ್ಯರ, ಹಿತೈಷಿಗಳ ಸ್ನೇಹ ಕೂಟ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಲಕ್ಷಾಂತರ ರೂ. ವೇತನ ಪಡೆಯುವ ಪ್ರೊಫೆಸರ್‍ಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುವುದಿಲ್ಲ. ಉನ್ನತ ಶಿಕ್ಷಣದ ಅಭಿವೃದ್ಧಿಗೆ ಪೂರಕವಾದ ನಿರ್ಧಾರ ಕೈಗೊಳ್ಳುವ ಜವಾಬ್ದಾರಿ ಹೊಂದಿರುವ ಸಿಂಡಿಕೇಟ್ ಸಮಿತಿಯೂ ಸರಿಯಾಗಿಲ್ಲ. ರಾಜ್ಯದ ಪ್ರತಿ ವಿಶ್ವವಿದ್ಯಾಲಯಗಳು ಐದು ಹಳ್ಳಿಗಳನ್ನು ದತ್ತು ತೆಗೆದುಕೊಂಡು ಶಿಕ್ಷಣ ಅಭಿವೃದ್ಧಿಗೊಳಿಸಿ ಎಂದು ಸಲಹೆ ನೀಡಿದ್ದೆ, ಅದೂ ಜಾರಿಗೆ ಬಂದಿಲ್ಲ ಎಂದು ವಿಷಾಧಿಸಿದರು.

ನಾನು ಮಂತ್ರಿಯಾದ ಮೇಲೆ ಭಾರೀ ಸಮಸ್ಯೆಗಳನ್ನು ಎದುರಿಸು ತ್ತಿz್ದÉೀನೆ. ಇತ್ತ ದಸರಾ ಸಮೀಪಿಸಿದೆ. ಪೌರಕಾರ್ಮಿಕರು ಅನಿರ್ಧಿಷ್ಟಾವದಿ ಧರಣಿ ಕುಳಿತಿದ್ದಾರೆ. ಸಂಧಾನ ನಡೆಸಿದರೂ ಫಲಪ್ರದವಾಗುತ್ತಿಲ್ಲ. ನಗರದೆಲ್ಲೆಡೆ ತ್ಯಾಜ್ಯದ ರಾಶಿ ಬೀಳುತ್ತಿದೆ. ಗ್ರಾಮಾಂತರ ಪ್ರದೇಶದಿಂದ ಕೂಲಿ ಕಾರ್ಮಿಕರ ಕರೆತಂದು ಸ್ವಚ್ಛಗೊಳಿಸೋಣವೆಂದರೆ ಪೌರಕಾರ್ಮಿಕರ ಹೊಟ್ಟೆ ಮೇಲೆ ಹೊಡೆದಂಗಾಗುತ್ತದೆ. ಮತ್ತೊಂದೆಡೆ ಮೈಸೂರು ವಿವಿ ತಾತ್ಕಾಲಿಕ ನೌಕರರೂ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ವಾಸ್ತವತೆಯನ್ನು ಬಿಚ್ಚಿಟ್ಟ ಜಿಟಿಡಿ, ಉನ್ನತ ಶಿಕ್ಷಣ ಸಚಿವ ಸ್ಥಾನವನ್ನು ಕೇಳಿ ಪಡೆದುಕೊಳ್ಳಲಿಲ್ಲ. ನನ್ನ ಪಾಲಿಗೆ ಬಂದದ್ದನ್ನು ನನ್ನ ಕ್ಷೇತ್ರದ ಜನರ ಒತ್ತಾಯದ ಮೇರೆಗೆ ಉತ್ತಮವಾಗಿ ನಿಭಾಯಿಸು ತ್ತಿದ್ದೇನೆ. ಮಂತ್ರಿ ಹುದ್ದೆ ಅಲಂಕರಿಸಿದ ಮೇಲೆ ಸಮಸ್ಯೆಗಳ ಮೇಲೆ ಸಮಸ್ಯೆ ಬಿಗಡಾಯಿಸುತ್ತಿದೆ. ಈ ನಡುವೆ ಸ್ಥಳೀಯ ಚುನಾವಣೆ ಯಿಂದ ಸರಿಯಾಗಿ ಆಡಳಿತ ನಡೆಸಲು ಸಾಧ್ಯವಾಗಿರಲಿಲ್ಲ. ಆದರೆ, ಇನ್ನು ಮುಂದೆ ಸಮಗ್ರ ಅಭಿವೃದ್ಧಿಗೆ ಗಮನ ನೀಡುತ್ತೇನೆ. ಅಧಿಕಾರವಿರುವುದು ಮೆರೆಯುವುದಕ್ಕಲ್ಲ ನಿಮ್ಮ ಸೇವೆಗೆ. ಇದಕ್ಕೆ ಬದ್ಧನಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ನಾನಂತೂ ಯಾವುದೇ ಆಸೆ ಇಟ್ಟುಕೊಂಡವನಲ್ಲ, ರಾಜಕೀಯ ವನ್ನು ದಿಕ್ಕರಿಸಿದ್ದವನು. ಇಂದಿರಾ ಗಾಂಧಿಯವರು ಬ್ಯಾಂಕ್‍ಗಳನ್ನು ರಾಷ್ಟ್ರೀಕರಣಗೊಳಿಸುವ ಸಂದರ್ಭದಲ್ಲಿ ಸಹಕಾರ ಸಂಘದ ಕಾರ್ಯದರ್ಶಿಯಾಗಿದ್ದೆ. ನನಗೇನೂ ಗೊತ್ತಿರಲಿಲ್ಲ. 70ರ ದಶಕದಲ್ಲಿ ಸಹಕಾರ ಸಂಘಗಳು ಹಾಗೂ ಕೆನರಾ ಬ್ಯಾಂಕ್ ಸಹಯೋಗದಲ್ಲಿ ನನಗೆ ಅತ್ಯುತ್ತಮ ಕಾರ್ಯದರ್ಶಿ ಎಂಬ ಪ್ರಶಸ್ತಿ ಬಂದಿತ್ತು. ಹಾಗೆಯೇ ರಾಜಕೀಯ ಪ್ರವೇಶಕ್ಕೂ ಮೊದಲು ನಾನು ಕಾಂಗ್ರೆಸ್ ಕಚೇರಿಯಲ್ಲಿ ವೈ.ಕೆ.ಪುಟ್ಟಸ್ವಾಮಿ ಅವರ ಜತೆ ಕುಳಿತುಕೊಳ್ಳುತ್ತಿದ್ದೆ. ಅವರೊಂದಿಗೆ ಓಡಾಡಿಕೊಂಡಿದ್ದೆ. ಆಗ ದಲಿತರು ಮಾತ್ರವಲ್ಲಾ ನಾವೂ ಅಸ್ಪೃಶ್ಯರೇ ಎಂದು ತಿಳಿಯಿತು. ಮಹಿಳಾ ಅಸಮಾನತೆ, ಬಡತನ ಎಲ್ಲವೂ ನನ್ನನು ರಾಜಕೀಯ ಪ್ರವೇಶಕ್ಕೆ ಪ್ರೇರೆಪಿಸಿದವು ಎಂದು ಅವರು ತಿಳಿಸಿದರು.

ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಇವತ್ತು ರಾಜ್ಯದಲ್ಲಿ 15 ವರ್ಷಗಳಿಂದ ನಾವೂ ಬಾರಿ ಸಂಕಷ್ಟದಲಿದ್ದೆವು. ಶಾಸಕರಾದರೂ ಯಾವುದಾದರು ಕೆಲಸವಾಗಬೇಕಾದರೆ ಇನ್ನೊಬ್ಬರನ್ನು ಕೇಳಬೇಕಾಗಿತ್ತು. ಆದರೆ ಇಂದು ನಿಮ್ಮೆಲ್ಲರ ಸಹಕಾರದಿಂದ ನಮ್ಮವರ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳುವಂತಾಗಿದೆ. ಚುನಾವಣೆ ಸಂದರ್ಭದಲ್ಲಿ ಆತಂಕವನ್ನು ಎದುರಿಸಿದ್ದೆ. ಕಾರಣ ನಮ್ಮ ಪಕ್ಷದವರೇ ನನ್ನ ವಿರುದ್ದ ನಿಂತಿದ್ದರು. ಆದರೆ ನನ್ನ ಮತದಾರರು ಕೈ ಬಿಡದೇ ನನ್ನನ್ನು ಮಂತ್ರಿಯನ್ನಾಗಿ ಮಾಡಿದ್ದಾರೆ. ಆದಕ್ಕಾಗಿ ನನ್ನ ತನು, ಮನ, ಧನ ಎಲ್ಲವನ್ನೂ ಕೂಡಿಸಿಕೊಂಡು ಕೆಲಸಮಾಡುತ್ತೇನೆ ಎಂದರು.

ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ನಾನು ಗ್ರಾಮೀಣ ಪ್ರದೇಶದಿಂದ ಬಂದವನು, ಸಮಾಜಮುಖಿ ಕೆಲಸಗಳನ್ನು ಮಾಡಿದೆ ಎಂದು ಮತದಾರರು ನನ್ನನ್ನು ಆರಿಸಿದ್ದಾರೆ. ಹಿರಿಯರ ಮಾತಿನಂತೆ ಹಿಂದೆ ತಿರುಗಿ ನೋಡದಂತೆ ಮುಂದೆ ಸಾಗುತ್ತಿದ್ದೇನೆ. ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವವರು ಸಮಯ ವ್ಯರ್ಥ ಮಾಡಬೇಡಿ. ಮರದ ಬೇರಿನಂತೆ ಆಗೋಚರವಾಗಿ ಸಮಾಜ ಸೇವೆಯನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಅಭಿನಂದನೆ: ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು ಹಾಗೂ ಡಿ.ಸಿ.ತಮ್ಮಣ್ಣ ಅವರನ್ನು ಕೃಷಿಕ್ ಸರ್ವೋದಯ ಫೌಂಡೇಷನ್ ಮೈಸೂರು ಖಾಖೆ ವತಿಯಿಂದ ಅಭಿನಂದಿಸಲಾಯಿತು. ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರ ಸ್ವಾಮೀಜಿ, ಕೃಷಿಕ್ ಸರ್ವೋದಯ ಫೌಂಡೇಷನ್ ಟ್ರಸ್ಟ್ ಮುಖ್ಯಸ್ಥ ಡಾ.ವೈ.ಕೆ.ಪಟ್ಟಸೋಮೇಗೌಡ, ಮೈಸೂರು ಖಾಖೆಯ ಅಧ್ಯಕ್ಷ ಬಿ.ತಿಮ್ಮೇಗೌಡ, ಉಪಾಧ್ಯಕ್ಷ ಎನ್.ನಂಜೇಗೌಡ, ಸಹ ಅಧ್ಯಕ್ಷ ಎನ್.ಎಸ್.ರಾಮೇಗೌಡ, ಕಾರ್ಯದರ್ಶಿ ಬಿ.ಕೆ.ಶಿವಣ್ಣ ಮತ್ತಿತರರಿದ್ದರು.

Translate »