ಅಕ್ರಮ ಸಂಬಂಧ ಕೊಲೆಯಲ್ಲಿ ಅಂತ್ಯ
ಮೈಸೂರು

ಅಕ್ರಮ ಸಂಬಂಧ ಕೊಲೆಯಲ್ಲಿ ಅಂತ್ಯ

March 16, 2020

ಮೈಸೂರು, ಮಾ.15(ಪಿಎಂ)-ಅಕ್ರಮ ಸಂಬಂಧ ಹೊಂದಿದ್ದ ಗೃಹಿಣಿಯನ್ನು ಪ್ರಿಯಕರನೋರ್ವ ಹತ್ಯೆ ಮಾಡಿ ತನ್ನ ಸ್ನೇಹಿತರೊಡಗೂಡಿ ಮೃತದೇಹವನ್ನು ತೋಟವೊಂದರಲ್ಲಿ ಹೂತು ಹಾಕಿದ್ದ ಪ್ರಕರಣವನ್ನು ಭೇದಿಸಿರುವ ತಲಕಾಡು ಪೊಲೀಸರು ನಾಲ್ವರನ್ನು ಬಂಧಿಸಿ, ಹೂತಿದ್ದ ಶವವನ್ನು ಹೊರ ತೆಗೆದು ಮರ ಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ಮನು ಗನಹಳ್ಳಿ ಗ್ರಾಮದ ರಾಜಮ್ಮ(42) ಪ್ರಿಯಕರನಿಂದಲೇ ಹತ್ಯೆಗೀಡಾ ದವರಾಗಿದ್ದು, ಪ್ರಿಯಕರ ಮೂಲತಃ ತಿ.ನರಸೀಪುರ ತಾಲೂಕು ಆಲಗೂಡು ನಿವಾಸಿ ಮಹೇಶ್(38), ತಿ.ನರಸೀಪುರ ತಾಲೂಕು ಅಕ್ಕೂರುದೊಡ್ಡಿ ಗ್ರಾಮದ ಸೋಮ (34), ಮಹದೇವ(50), ಹೆಮ್ಮಿಗೆ ಗ್ರಾಮದ ಚೌಡಯ್ಯ (58) ಬಂಧಿತ ಆರೋಪಿಗಳು.

ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿ, ಮಹೇಶ ಮತ್ತು ಸೋಮನನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆದಿದ್ದರೆ, ಮಹ ದೇವ ಮತ್ತು ಚೌಡಯ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಭಾನುವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಎಸ್ಪಿ ರಿಷ್ಯಂತ್ ಅವರು ತಿಳಿಸಿದರು.

ವಿವರ: ಮನುಗನಹಳ್ಳಿ ಗ್ರಾಮದ ರಾಜಮ್ಮ ಜ.28ರಂದು ನಾಪತ್ತೆಯಾಗಿದ್ದರು. ಈ ಸಂಬಂಧ ಆಕೆಯ ಪತಿ ವೆಂಕಟರಂಗನಾಯಕ ಫೆ.8ರಂದು ಹನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹನೂರು ಪೊಲೀಸರು ತನಿಖೆ ಕೈಗೆತ್ತಿಕೊಂಡಾಗ ಮೂಲತಃ ತಿ.ನರಸೀಪುರ ತಾಲೂಕು ಆಲಗೂಡು ನಿವಾಸಿಯಾಗಿದ್ದು, ಹನೂರು ತಾಲೂಕು ಕೂಡ್ಲೂರಿನಲ್ಲಿ ವಾಸವಿದ್ದ ಮಹೇಶನಿಗೂ ರಾಜಮ್ಮಳಿಗೂ ಅಕ್ರಮ ಸಂಬಂಧವಿತ್ತು ಎಂಬುದು ತಿಳಿದು ಬಂದಿದೆ. ರಾಜಮ್ಮಳ ಮೊಬೈಲ್ ತಲಕಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಂಡ್ ಲೊಕೇಷನ್ (ಕೊನೆಯದಾಗಿ ಕಾರ್ಯ ನಿರ್ವಹಿಸಿದ ಸ್ಥಳ) ಆಗಿರುವುದು ಸಿಡಿಆರ್‍ನಿಂದ ತಿಳಿದು ಬಂದಿದೆ. ಇತ್ತೀಚೆಗೆ ರಾಜಮ್ಮಳ ಪುತ್ರನಿಗೆ ಕೆಲವರಿಂದ ದೊರೆತ ಮಾಹಿತಿ ಆಧರಿಸಿ ಆತ ತನ್ನ ತಾಯಿಯನ್ನು ಮಹೇಶ ಮತ್ತು ಸೋಮ ಅವರುಗಳು ತಲಕಾಡು ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತಪಡಿಸಿ ತಲಕಾಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಅಲ್ಲದೇ ರಾಜಮ್ಮಳ ಮೊಬೈಲ್ ಈ ಠಾಣಾ ವ್ಯಾಪ್ತಿಯಲ್ಲೇ ಎಂಡ್ ಲೊಕೇಷನ್ ಆಗಿದ್ದರಿಂದ ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿದಾಗ ಕೊಲೆ ಪ್ರಕರಣ ಬಯಲಾಗಿದೆ.

ಗುದ್ದಲಿಯಿಂದ ಹೊಡೆದು ಹತ್ಯೆ: ಪತಿಯನ್ನು ಬಿಟ್ಟು ತನ್ನೊಂದಿಗೆ ಬಂದ ರಾಜಮ್ಮಳನ್ನು ತಲಕಾಡು ಸಮೀಪದ ಅಕ್ಕೂರು ದೊಡ್ಡಿ ಗ್ರಾಮದ ಬಳಿ ಇರುವ ತೋಟದ ಮನೆಯೊಂದರಲ್ಲಿ ಮಹೇಶ್ ಇರಿಸಿದ್ದ. ಈ ತೋಟವು ರಾಮನಗರದ ಕೃಷ್ಣಪ್ಪ ಎಂಬುವರಿಗೆ ಸೇರಿದ್ದಾಗಿದ್ದು, ಅದನ್ನು ಸೋಮ ನೋಡಿಕೊಳ್ಳುತ್ತಿದ್ದ. ಒಂದು ದಿನ ಸೋಮ ಹೊರಗಡೆ ಹೋಗಿದ್ದ ವೇಳೆ ರಾಜಮ್ಮ ಬೇರೆ ಮನೆ ಮಾಡಿ ತನ್ನೊಂದಿಗೆ ಶಾಶ್ವತವಾಗಿ ಇರುವಂತೆ ಮಹೇಶನನ್ನು ಪೀಡಿಸಿದ್ದಾಳೆ. ವಿವಾಹಿತನಾಗಿದ್ದ ಮಹೇಶನಿಗೆ ಇದರಿಂದ ತಲೆ ಬಿಸಿಯಾಗಿದ್ದು, ಗುದ್ದಲಿಯಿಂದ ಆಕೆಯನ್ನು ಹೊಡೆದು ಹತ್ಯೆ ಮಾಡಿದ ನಂತರ ಮೃತದೇಹವನ್ನು ತೋಟದ ಮನೆಯಲ್ಲೇ ಬಿಟ್ಟು ಪರಾರಿಯಾಗಿದ್ದ ಎಂಬುದು ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ.

ಎರಡು ದಿನಗಳ ನಂತರ ಸೋಮ ಹಿಂತಿರುಗಿದಾಗ ತೋಟದ ಮನೆಯಲ್ಲಿ ರಾಜಮ್ಮಳ ಮೃತದೇಹವಿರುವುದನ್ನು ಕಂಡು ತೋಟದಲ್ಲಿ ಚೌಡಯ್ಯ ಮತ್ತು ಮಹಾದೇವನ ಸಹಕಾರದೊಂದಿಗೆ ಚರಂಡಿ ನಿರ್ಮಾಣ ಮಾಡಿ ಅದರ ಪಕ್ಕದಲ್ಲಿ ಗುಂಡಿ ತೋಡಿ ರಾಜಮ್ಮಳ ಮೃತದೇಹವನ್ನು ಹೂತು ಹಾಕಿದ್ದಾನೆ ಎಂಬುದು ವಿಚಾರಣೆ ವೇಳೆ ತಿಳಿಯಿತು ಎಂದು ಜಿಲ್ಲಾ ಎಸ್ಪಿ ಹೇಳಿದರು.

ವೃತ್ತಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಮಹೇಶ, ತನ್ನ ಪತ್ನಿ ಊರಾದ ಹನೂರು ತಾಲೂಕು ಕೂಡ್ಲೂರಿನಲ್ಲಿ ವಾಸವಿದ್ದು, ಕಳೆದ ಮೂರು ವರ್ಷಗಳಿಂದ ರಾಜಮ್ಮ ಳೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ. ರಾಜಮ್ಮ, ಮಹೇಶ ಮತ್ತು ಸೋಮ ದೂರದ ಸಂಬಂಧಿಕರಾಗಿದ್ದು, ಆಕೆ ಪತಿಯನ್ನು ಬಿಟ್ಟು ತನ್ನ ಜೊತೆ ಬಂದಾಗ ಸೋಮ ನೋಡಿಕೊಳ್ಳುತ್ತಿದ್ದ ತೋಟದ ಮನೆಯಲ್ಲೇ ಆಕೆಯನ್ನು ಇರಿಸಿದ್ದ ಎಂಬುದು ಗೊತ್ತಾಗಿದೆ. ಹತ್ಯೆಯ ನಂತರ ಮಹೇಶ ತಮಿಳುನಾಡಿನಲ್ಲಿ ತಲೆ ಮರೆಸಿಕೊಂಡು ಕೆಲ ದಿನಗಳ ನಂತರ ಕೂಡ್ಲೂರಿಗೆ ಹಿಂತಿರುಗಿದ್ದ. ಈತನನ್ನು ಮಾ.13ರಂದು ಜಿಲ್ಲಾ ಎಸ್ಪಿ ರಿಷ್ಯಂತ್, ನಂಜನಗೂಡು ಡಿವೈಎಸ್‍ಪಿ ಪ್ರಭಾಕರ ರಾವ್ ಶಿಂಧೆ ಮಾರ್ಗ ದರ್ಶನದಲ್ಲಿ ತಿ.ನರಸೀಪುರ ಸರ್ಕಲ್ ಇನ್ಸ್‍ಪೆಕ್ಟರ್ ಲವ ಜಿಲ್ಲಾ ತಲಕಾಡು ಸಬ್ ಇನ್ಸ್‍ಪೆಕ್ಟರ್ ಬಸವರಾಜು ನೇತೃತ್ವದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತನ ಬಳಿ ರಾಜಮ್ಮಳ ತಾಳಿ ದೊರೆತಿದೆ. ಅಲ್ಲದೇ ಹತ್ಯೆ ಪ್ರಕರಣವೂ ಬಯಲಾಗಿದೆ. ನಂತರ ಅದೇ ದಿನ ಸೋಮ ಮತ್ತು ಮಾ.14ರಂದು ಚೌಡಯ್ಯ ಹಾಗೂ ಮಹಾದೇವನನ್ನು ಬಂಧಿಸಲಾಯಿತು. ನಂತರ ಮೈಸೂರು ಉಪ ವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ಮೃತದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು.

Translate »