ಕಾಡಾನೆ ದಾಳಿ; ಬೈಕ್ ಸವಾರನಿಗೆ ಗಾಯ
ಕೊಡಗು

ಕಾಡಾನೆ ದಾಳಿ; ಬೈಕ್ ಸವಾರನಿಗೆ ಗಾಯ

August 23, 2018

ಮಡಿಕೇರಿ:  ಕಾಡಾನೆ ದಾಳಿಗೆ ತುತ್ತಾಗಿ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ಬೆಳಗ್ಗೆ ಆಲೂರು ಸಿದ್ದಾಪುರ ವ್ಯಾಪ್ತಿಯ ದೊಡ್ಡಳ್ಳಿ ಗ್ರಾಮದಲ್ಲಿ ನಡೆದಿದೆ.

ಆಲೂರು ಸಿದ್ದಾಪುರ ಸಮೀಪದ ಪಟ್ಟಡ ಕಾರ್ಯಪ್ಪ ಎಂಬವರೇ ಕಾಡಾನೆ ದಾಳಿಗೆ ತುತ್ತಾದ ವ್ಯಕ್ತಿ. ಬುಧವಾರ ಬೆಳಗ್ಗೆ 6-30 ರ ಸುಮಾರಿಗೆ ಕಾರ್ಯಪ್ಪ ಅವರು ತನ್ನ ಮನೆಯಿಂದ ಎಂದಿನಂತೆ ತನ್ನ ಬೈಕಿನಲ್ಲಿ ಆಲೂರು ಸಿದ್ದಾಪುರದ ಡೈರಿಗೆ ಹಾಲು ನೀಡಲು ಹೋಗುತ್ತಿದ್ದ ಸಂದರ್ಭದಲ್ಲಿ ದೊಡ್ಡಳ್ಳಿ ಗ್ರಾಮದ ಬಸವೇಶ್ವರ ದೇವಸ್ಥಾನದ ಸಮೀಪ ಎದುರುಗೊಂಡ ಒಂಟಿ ಸಲಗ ಬೈಕ್ ಮೇಲೆ ದಾಳಿ ನಡೆಸಿದೆ.

ಈ ಸಂದರ್ಭ ಕಾಡಾನೆ ಬೈಕ್‍ನಿಂದ ಕೆಳಗೆ ಬಿದ್ದ ಕಾರ್ಯಪ್ಪ ಅವರ ಎದೆಯ ಭಾಗವನ್ನು ಕೋರೆಯಿಂದ ತಿವಿದು ಗಾಯಗೊಳಿ ಸಿದೆ. ಕಾರ್ಯಪ್ಪ ಅವರು ಕಿರುಚಿಕೊಂಡಾಗ ಅಕ್ಕಪಕ್ಕದ ಮನೆಯ ವರು ಸೇರಿಕೊಂಡು ಘಟನೆ ನಡೆದ ಸ್ಥಳಕ್ಕೆ ಧಾವಿಸಿದಾಗ ಕಾಡಾನೆ ಪಕ್ಕದ ಅರಣ್ಯಕ್ಕೆ ಓಡಿ ಹೋಯಿತೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಕಾರ್ಯಪ್ಪ ಅವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಸನದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ. ವ್ಯಕ್ತಿ ಮೇಲೆ ಕಾಡಾನೆ ದಾಳಿ ನಡೆಸಿರುವ ಸುದ್ದಿ ತಿಳಿಯುತ್ತಿ ದ್ದಂತೆ ದೊಡ್ಡಳ್ಳಿ ಮತ್ತು ಅಕ್ಕ ಪಕ್ಕದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿದರು. ನಂತರ ಗ್ರಾಮಸ್ಥರು ಶನಿವಾರಸಂತೆ-ಬಾಣವಾರ-ಕುಶಾಲನಗರ ರಾಜ್ಯ ಹೆದ್ದಾರಿಯಲ್ಲಿ ಸ್ವಲ್ಪ ಹೊತ್ತು ರಸ್ತೆ ತಡೆ ನಡೆಸಿದರು. ಸ್ಥಳಕ್ಕೆ ಶನಿವಾರಸಂತೆ ಆರ್‍ಎಫ್‍ಒ ಕೊಟ್ರೇಶ್, ಜಿ.ಪಂ.ಸದಸ್ಯೆ ಸರೋಜಮ್ಮ ಭೇಟಿ ನೀಡಿದರು.

ಈ ಭಾಗದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿ ಹೆಚ್ಚಾಗು ತ್ತಿದ್ದು, ಅದನ್ನು ನಿಯಂತ್ರಿಸಲು ಅರಣ್ಯ ಇಲಾಖೆ ವಿಫಲವಾಗಿದೆ. ಬಾಣವಾರ, ಮಾಲಂಬಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ನಿರ್ಮಿಸಿರುವ ಕಂದಕ ಕಾಮಗಾರಿ ಅವೈಜ್ಞಾನಿಕ ವಾಗಿದ್ದು, ಕಾಡಾನೆಗಳು ಗ್ರಾಮದೊಳಗೆ ನುಸುಳಿ ರೈತರ ಬೆಳೆಯನ್ನು ನಾಶಪಡಿಸುತ್ತಿರುವುದರ ಜೊತೆಗೆ ಜನರ ಮೇಲೂ ದಾಳಿ ನಡೆಸುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Translate »