ಮೈಸೂರು, ಮಾ.21(ಪಿಎಂ)- ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ಮತ್ತು ಮೈಸೂರು ತಾಲೂಕಿನ 39 ಕೆರೆಗಳಿಗೆ ನೀರು ತುಂಬಿಸಲು ಹೆಚ್.ಡಿ.ಕೋಟೆ ತಾಲೂಕಿನ ಇಬ್ಜಾಲ (ಕರಿಗಾಲ) ಗ್ರಾಮದ ಬಳಿ ನಿರ್ಮಿಸುತ್ತಿರುವ ಏತ ನೀರಾವರಿ ಯೋಜನೆ ಯಲ್ಲಿ ಏರು ಕೊಳವೆ ಮಾರ್ಗದ (ಪೈಪ್‍ಲೈನ್) ಕಾಮಗಾರಿ ಸಂಬಂಧ ಆರ್‍ಎಫ್‍ಸಿಟಿಎಲ್‍ಎಆರ್‍ಆರ್-2013 ಕಾಯ್ದೆ ಉಲ್ಲಂಘಿಸಿ ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ರೈತ, ಕೃಷಿ ಕಾರ್ಮಿಕ ಸಂಘಟನೆ (ಆರ್‍ಕೆಎಸ್) ಆರೋಪಿಸಿದೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಎಸ್.ಎನ್.ಸ್ವಾಮಿ, ಈ ಯೋಜನೆ ರೈತ ಸಮುದಾಯಕ್ಕೆ ಅನುಕೂಲ ಕಾರಿ. ಆದರೆ ಯೋಜನೆ ಅನುಷ್ಠಾನ ಮತ್ತು ಭೂಸ್ವಾಧೀನದಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರ, ಹಕ್ಕು ಪುನರ್ ನಿರ್ಮಾಣ ಮತ್ತು ಪುನರ್ ವಸತಿ ಕಾಯ್ದೆ-2013 (ಆರ್‍ಎಫ್‍ಸಿಟಿಎಲ್‍ಎ ಆರ್‍ಆರ್-2013) ಉಲ್ಲಂಘಿಸಲಾಗಿದೆ ಎಂದು ದೂರಿದರು. ಯೋಜನೆ ಕುರಿತು ರೈತರಿಗೆ ಸರಿಯಾದ ಮಾಹಿತಿಯನ್ನೇ ನೀಡಿಲ್ಲ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕಾಯ್ದೆಯನ್ನು ಸ್ವಲ್ಪ ಮಟ್ಟಿಗೂ ಪಾಲಿಸದೇ, ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ, ರೈತರ ಗಮನಕ್ಕೂ ತಾರದೇ ಭೂಮಿಯಲ್ಲಿ ಪೈಪ್ ಅಳವಡಿ ಸುವ ಕಾಮಗಾರಿ ನಡೆಸಿದ್ದಾರೆ. ರೈತರು ಬೆಳೆದಿರುವ ತೆಂಗು, ಮಾವು, ಬಾಳೆ, ಅರಿಶಿಣ ಸೇರಿದಂತೆ ಹಲವಾರು ಬೆಳೆಗಳನ್ನು ಧ್ವಂಸ ಮಾಡಿ ದ್ದಾರೆ ಎಂದು ಆರೋಪಿಸಿದರು. ಕಾವೇರಿ ನೀರಾವರಿ ನಿಗಮವು ರೈತರಿಗೆ ನ್ಯಾಯಬದ್ಧ ಪರಿಹಾರ ನೀಡಬೇಕು. ಅಲ್ಲಿಯವರೆಗೆ ಈ ಕಾಮಗಾರಿ ಸ್ಥಗಿತಗೊಳಿಸಬೇಕು. ಅನ್ಯಾಯವಾಗಿರುವ ರೈತರಿಗೆ ಪರಿಹಾರ ನೀಡಿ ಮತ್ತು ಗುಂಡಿ ತೋಡಿರುವ ಜಮೀನನ್ನು ಮೊದಲಿ ನಂತೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಸಂಘ ಟನೆಯ ರಾಜ್ಯ ಸಮಿತಿ ಸದಸ್ಯ ಹೆಚ್.ಪಿ.ಶಿವಪ್ರಕಾಶ್, ಜಿಲ್ಲಾ ಸಂಘ ಟನಾಕಾರ ಹೆಚ್.ಎಂ.ಬಸವರಾಜು ಮತ್ತಿತರರು ಗೋಷ್ಠಿಯಲ್ಲಿದ್ದರು.