ಜೆಡಿಎಸ್ ಶಾಸಕರಿಗೆ ದರ್ಶನ್, ಯಶ್ ಸವಾಲ್
ಮಂಡ್ಯ

ಜೆಡಿಎಸ್ ಶಾಸಕರಿಗೆ ದರ್ಶನ್, ಯಶ್ ಸವಾಲ್

March 21, 2019

ಮಂಡ್ಯ: ಸುಮಲತಾ ಪರ ನಿಂತಿರುವುದಕ್ಕೆ ಜೆಡಿಎಸ್ ಶಾಸಕ ನಾರಾಯಣಗೌಡ ನೀಡಿದ್ದ “ಸರ್ಕಾರ ನಮ್‍ದಿದೆ ಏನ್ ಬೇಕಾದರೂ ಮಾಡ್ತೀವಿ, ಹಳೆ ಕೇಸ್‍ನೆಲ್ಲಾ ಓಪನ್ ಮಾಡ್ತೀವಿ’’ ಎನ್ನುವ ಮೂಲಕ ನೀಡಿದ ಎಚ್ಚರಿಕೆಗೆ ಸಿನಿಮಾ ನಟರು ಟಾಂಗ್ ನೀಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಮಾತನಾಡಿ ಇವತ್ತು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಮೈಯಲ್ಲಿರುವ ರಕ್ತವನ್ನು ತೆಗೆದು ನಿಮ್ಮ ಕಾಲನ್ನು ತೊಳೆದರೂ ಅದು ಕಡಿಮೆನೇ. ಯಾಕೆಂದರೆ ಈ ಉರಿ ಬಿಸಿಲಲ್ಲಿ ಅಲ್ಲಿಂದ ನಮ್ಮ ಜೊತೆ ನಡೆದು ಕೊಂಡು ಬಂದಿದ್ದೀರಿ. ನಾನು ತಲಾ ಇಷ್ಟಿಷ್ಟು ಅಂತ ಯಾರಿಗೂ ಕೊಟ್ಟಿಲ್ಲ. ಅಪ್ಪಾಜಿ ಮೇಲಿನ ಪ್ರೀತಿಯಿಂದ ನೀವು ಬಂದಿದ್ದೀರಿ ಎಂದು ಹೇಳಿದರು.

ಎರಡು ದಿನದಿಂದ ನಾವು ನೋಡುತ್ತಿ ದ್ದೇವೆ. ನಮ್ಮ ಬಗ್ಗೆ ಏನೇನು ಮಾತನಾಡಿ ಕೊಳ್ಳುತ್ತಿದ್ದಾರೆ. ನಮ್ಮ ಬಗ್ಗೆ ಯಾರು ಏನೇ ಮಾತನಾಡಲಿ. ನಾವು ಕೋಪ, ಬೇಜಾರು ಹಾಗೂ ನೋವು ಮಾಡಿಕೊಳ್ಳುವುದಿಲ್ಲ. ಅದನ್ನು ನಾವು ಹೆಮ್ಮೆಯಿಂದ ತೆಗೆದು ಕೊಳ್ಳುತ್ತೇವೆ ಎಂದರು. ಅಮ್ಮ ಇಲ್ಲಿಗೆ ಬಂದು ನಿಂತಿದ್ದಾರೆ. ಅವರ ಮೇಲೆ ನೀವು ತುಂಬಾ ಪ್ರೀತಿ ತೋರುತ್ತಿದ್ದೀರ. ಮೇ 23 ರಂದು ಪಟ ಪಟಾ ಮೇಲೆ ಹೋಗುತ್ತಿರಬೇಕು. ನಮ್ಮನ್ನು ಬೈದೋರು ಕೆಳಗೆ ಹೋಗ ಬೇಕು. ಅಷ್ಟೇ ನಾನು ಕೇಳಿಕೊಳ್ಳೋದು ಎಂದು ದರ್ಶನ್ ಹೇಳಿದರು.

ನಿಮ್ಮ ಪ್ರೀತಿ, ಪ್ರೋತ್ಸಾಹ, ಬೆಂಬಲ ಎಲ್ಲವೂ ಅಮ್ಮನ ಮೇಲಿರಲಿ. ಇವತ್ತಿಂದ 18ನೇ ತಾರೀಖಿನವರೆಗೂ ನಮ್ಮ ಪರೇಡ್ ಶುರು. ಪರೇಡ್ ಮಾಡೋಣ, ಅಮ್ಮನಿಗೆ ನೀವು ಆಶೀರ್ವಾದ ಮಾಡಬೇಕು ಎಂದು ದರ್ಶನ್ ಮನವಿ ಮಾಡಿಕೊಂಡರು.
ರಾಕಿಂಗ್ ಸ್ಟಾರ್ ಯಶ್ ಮಾತನಾಡಿ, ಅಮ್ಮನಿಗೆ ಸಪೋರ್ಟ್ ಮಾಡೋದೆ ತಪ್ಪು ಅನ್ನೋದೇ ಆದರೆ ಆ ತಪ್ಪನ್ನೇ ಮಾಡುತ್ತೇವೆ. ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡೋದು ಬಿಡಿ ಎಂದು ಹೇಳಿದರು. ನನಗೆ ತುಂಬಾ ಖುಷಿಯಾಯಿತು ಏಕೆಂದರೆ ಬೆಳಗ್ಗೆ ಒಂದು ಘಟನೆ ನಡೆಯಿತು. ಇಂದು ಬೆಳಗ್ಗೆ ನಾಮಪತ್ರ ಸಲ್ಲಿಸಲು ಖುಷಿಯಲ್ಲಿ ಬಂದಾಗ ಅಕ್ಕನ ಕಣ್ಣಿನಲ್ಲಿ ನೀರಿತ್ತು. ನಾನು ಯಾಕಕ್ಕಾ ಯಾರಾದ್ರು ಏನಾದ್ರು ಹೇಳಿದರ ಎಂದು ಕೇಳಿದೆ. ಆಗ ಅವರು ನನಗೆ ಅಂದ್ರೆ ಪರ್ವಾಗಿಲ್ಲ, ನಿನ್ನ ಮತ್ತೆ ದರ್ಶನ್ ಬಗ್ಗೆ ಕೆಟ್ಟದಾಗಿ ಮಾತಾಡ್ತಿದ್ದಾರೆ ಎಂದು ಹೇಳಿ ದರು. ಈ ಸಂದರ್ಭದಲ್ಲಿ ನಾನು, ಅಕ್ಕಾ ನಿಮಗೆ ಒಂದು ಮಾತು ಹೇಳುತ್ತೇನೆ. ನಾವು ಮಾಡುತ್ತಿರುವುದು ತಪ್ಪಲ್ಲ ಎಂದು ಎಲ್ಲರಿಗೂ ಗೊತ್ತು. ಇದು ಅಧಿಕಾರ ಆಸೆಗೋ ಅಥವಾ ಬೇರೆ ಲಾಭಕ್ಕೋ ನಾವು ಇಲ್ಲಿ ಬಂದು ನಿಂತಿಲ್ಲ. ಇದು ತಪ್ಪು ಎಂದು ಕೆಲವರು ಅಂದುಕೊಂಡಿದ್ದರೆ, ಆ ರೀತಿ ಅಂದುಕೊಂಡವರಿಗೆ ಹೇಳ್ತೀನಿ ನಾವು ತಪ್ಪು ಮಾಡುತ್ತೇವೆ. ಆ ತಪ್ಪು ಸಾಯೋ ವರೆಗೂ ಮಾಡುತ್ತೇವೆ. ಏಕೆಂದರೆ ಅಂಬ ರೀಶ್ ಅಣ್ಣ ಅವರು ನನಗೆ ಅಷ್ಟು ಮಾಡಿ ದ್ದಾರೆ. ಸುಮ್ಮನೆ ನಾವು ಇಲ್ಲಿ ನಾಟಕಕ್ಕೆ ಬಂದಿಲ್ಲ ಎಂಬುದನ್ನು ತಿಳಿಸಿದೆ ಎಂದರು.

ಸಿನಿಮಾದವರು ಸಿನಿಮಾದವರು ಎಂದು ಹೇಳುತ್ತಾರೆ. ನಾವೇನು ಅಂರ್ಟಾ ಟಿಕಾ ಅಥವಾ ಪಾಕಿಸ್ತಾನದಿಂದ ಬಂದಿದ್ದೀವಾ. ಇದೇ ಮೈಸೂರಿಯಿಂದ ಮಂಡ್ಯ ರೋಡ್ ದಾಟಿ ಬೆಂಗಳೂರಿಗೆ ಹೋಗಿ ಜೀವನ ಕಟ್ಕೊಂಡಿರೋದು. ಇದೇ ಪಾಳಲ್ಲಿ ಪಂಪ್ ಹೌಸ್ ಹಾಗೂ ಕೆಆರ್‍ಎಸ್‍ನಲ್ಲಿ ಈಜಿದ್ದೀವಿ. ಮಂಡ್ಯದಲ್ಲಿ ಕಬ್ಬಿನ ಹಾಲು ಕೂಡ ಕುಡಿದಿ ದ್ದೀವಿ ಹಾಗೂ ಬೆಲ್ಲವನ್ನು ತಿಂದಿದ್ದೀವಿ.

ಮಂಡ್ಯ ಜನತೆ ಪ್ರೀತಿಯಿಂದ ನಮ್ಮನ್ನು ಬೆಳೆಸಿ ಸರಿಯಾದ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಇಡೀ ಕರ್ನಾಟಕಕ್ಕೆ ನಮ್ಮ ಋಣ ಇದೆ. ಸ್ವಲ್ಪ ಜಾಸ್ತಿ ಮಂಡ್ಯ ಮೇಲೆ ಸ್ವಲ್ಪ ಜಾಸ್ತಿ ಇದೆ ಹಾಗೂ ಮಂಡ್ಯ ಮೇಲೆ ನಮಗಿದೆ ಎಂದು ಹೇಳಿದರು. ಪಕ್ಷೇತರ ಅಭ್ಯರ್ಥಿ ಯಾಗಿ ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಸಿದ ಬಳಿಕ ನಗರದ ಸಿಲ್ವರ್‍ಜ್ಯೂಬಲಿ ಪಾರ್ಕ್‍ನಲ್ಲಿ ನಡೆದ ಬೃಹತ್ ಸಮಾವೇಶ ದಲ್ಲಿ ಸಿನಿಮಾ ತಾರೆಗಳಾದ ದೊಡ್ಡಣ್ಣ, ದರ್ಶನ್, ಯಶ್, ರಾಕ್‍ಲೈನ್ ವೆಂಕಟೇಶ್ ಜೆಡಿಎಸ್ ನಾಯಕರಿಗೆ ಸವಾಲು ಹಾಕಿದರು.
ನಟ ದೊಡ್ಡಣ್ಣ ಮಾತನಾಡಿ, ‘ನೀನ್ ಯಾಕೋ, ನಿನ್ ಹಂಗ್ ಯಾಕೋ.ನಿನ್ನ ನಾಮದ ಬಲವೊಂದಿದ್ದರೆ ಸಾಕು’ ಎನ್ನುವಂತೆ ಅಂಬಿ ಹೆಸರು ಕಾಮಧೇನು, ಕಲ್ಪವೃಕ್ಷ ಆಗುತ್ತೆ ಎಂಬುದಕ್ಕೆ ನೀವೇ ಸಾಕ್ಷಿ ಎಂದರು.

ಕೇಬಲ್ ಕಟ್ ಮಾಡಿದ್ದಾರೆ ಎಂಬ ವಿಚಾರಕ್ಕೆ ಮಾತನಾಡಿದ ಅವರು ‘ಸೂರ್ಯ ನಿಗೆ ಛತ್ರಿ ಹಿಡಿದು ಕತ್ತಲೆ ಮಾಡಲು ಸಾಧ್ಯವಾ’?, ಮಂಡ್ಯ ಜನ ದುಡ್ಡಿಗೆ ಬಗ್ಗೋದಿಲ್ಲ. ಅಧಿಕಾರ ದರ್ಪಕ್ಕೆ ಬೆಂಡ್ ಆಗೋದಿಲ್ಲ. ಅಂಬಿಯದ್ದು ಮಗುವಿನ ಹೃದಯ.

ಜಿಲ್ಲೆಯ ಜನರ ಹೃದಯ ಬಗೆದರೆ ಅಂಬಿ ಕಾಣಿಸ್ತಾರೆ.ಸುಮಮ್ಮ ಗೆದ್ದರೆ ಅಂಬಿ ಗೆದ್ದ ಹಾಗೆ. ಅಂಬಿ ಗೆದ್ದರೆ ಮಂಡ್ಯ, ಸ್ವಾಭಿಮಾನ ಗೆಲ್ಲುತ್ತೆ. ಅಭಿಷೇಕ್ ಮೇಲೂ ನಿಮ್ಮ ಆಶೀರ್ವಾದ ಇರಲಿ.ದರ್ಶನ್-ಯಶ್ ಜೋಡಿ ಎತ್ತುಗಳನ್ನು ಕಟ್ಟಾಕೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದರು.

ರಾಕ್‍ಲೈನ್ ವೆಂಕಟೇಶ್ ಮಾತನಾಡಿ, ಇವತ್ತು ಚರಿತ್ರೆಯಲ್ಲಿ ಬರೆದಿಡುವ ದಿನ. ಸಾವಿರಾರೂ ಜನ ಅಲೆ ಅಲೆಯಾಗಿ ಬಂದು ಅಂಬಿ ಕುಟುಂಬಕ್ಕೆ ಬೆಂಬಲ ನೀಡಿದ್ದೀರಿ. ನಿಮಗೆಲ್ಲಾ ಸಾಷ್ಟಾಂಗ ನಮಸ್ಕಾರ.ಅಂಬಿ ಮೇಲಿನ ಪ್ರೀತಿಯನ್ನು ತೋರಿಸಿದ್ದೀರೀ. ಯಾವುದೇ ಆಮಿಷಕ್ಕೆ ಒಳಗಾಗಿ ಸುಮಲತಾ ಕ್ಕರನ್ನು ಕೈ ಬಿಡಬೇಡಿ.ನಿಮ್ಮ ಮನೆ ಗೌಡ್ತಿ, ಸೊಸೆಯನ್ನು ಬೆಂಬಲಿಸಿ ಎಂದರು.

ಅಂಬರೀಶ್ ಪುತ್ರ ಅಭಿಷೇಕ್ ಮಾತನಾಡಿ, ಮೊದಲು ನಮ್ಮ ಅಮ್ಮನ ಕೇಳಿದೆ. ಟೀಕೆ ಗಳಿಗೆ ಉತ್ತರಿಸಬೇಕಾ ಅಂತಾ,ನಾವು ಏನು ಹೇಳೋದು ಬೇಡ ಜನರೇ ಉತ್ತರ ನೀಡ್ತಾರೆ ಎಂದು ಹೇಳಿದರು.ನಿಮ್ಮ ಮೇಲಿನ ವಿಶ್ವಾಸ ದಿಂದ ನಾವು ಚುನಾವಣೆಗೆ ನಿಂತಿದ್ದೇವೆ.
ಒಟ್ಟಿಗೆ ಕೆಲಸ ಮಾಡೋಣ.ಇಂದಿನಿಂದ 30 ದಿನ ನಾನೂ ಕಣ್ಣು ಮುಚ್ಚಲ್ಲ.ನಾವು ಉತ್ತರಿಸಬೇಕಾದರೆ, ಅಂಬಿ ಬಲ ತೋರಿಸಬೇಕಾದರೆ ಇಂದಿನಿಂದ ಅಖಾಡ ಶುರವಾಗಲಿ,ಮಂಡ್ಯ ಅಖಾಡಕ್ಕೆ ಅಂಬಿ ಕುಟುಂಬ ಇಳಿದಿದೆ.ನಮ್ಮ ಮೇಲೆ ತಂದೆ ಆಶೀರ್ವಾದ ಸದಾ ಇರುತ್ತೆ.

ನಿಮ್ಮ ಆಶೀರ್ವಾದ ಬೇಕು.ನಮ್ಮ ಉತ್ತರ ವನ್ನು ಚುನಾವಣೆಯಲ್ಲಿ ತೋರಿಸೋಣ, ಮಾತಿನಲ್ಲಿ ಅಲ್ಲ ಎಂದು ತಿಳಿಸಿದರು.

ಕೆಪಿಸಿಸಿ ಸಚ್ಚಿದಾನಂದ ಮಾತನಾಡಿ, ಅಭಿಮಾನಿಗಳ ಮನವಿ ಮೇರೆಗೆ ಸುಮಲತಾ ಅಂಬರೀಶ್ ಅಖಾಡಕ್ಕೆ ಇಳಿದಿದ್ದಾರೆ. ಹಲವಾರು ಜನ ಹಲವಾರು ಮಾತನ್ನಾಡಿ ದರು. ಗಂಡ ಸತ್ತಾಗ ಇಲ್ಲಿ ಬರಬೇಕಾ. ಒಂದು ಲೋಟ ನೀರು ಕೊಡೋದಿಲ್ಲ. ಮಂಡ್ಯ ಗೌಡ್ತಿ ಅಲ್ಲ ಅಂತ ಹೇಳಿದರು. ಅದಕ್ಕೆಲ್ಲಾ ಜಗ್ಗದೆ ನಿಮ್ಮಗಳ ಪ್ರೀತಿಗೆ ಬಂದಿದ್ದಾರೆ. ಒತ್ತಾಯದಿಂದ ಸ್ವ ಇಚ್ಛೆಯಿಂದ ಕರೆದು ಕೊಂಡು ಬಂದಿದ್ದೇವೆ. ಅಕ್ಕನಿಗೆ ಸಾಕಷ್ಟು ಆಮಿಷ ಒಡ್ಡಿದರು. ಮಂತ್ರಿ ಸ್ಥಾನ, ಎಂಎಲ್‍ಸಿ, ರಾಜ್ಯಸಭಾ ಸದಸ್ಯತ್ವದ ಆಮಿಷ ಕೊಟ್ಟರು. ಆದರೆ ಅವರು ಮಂಡ್ಯ ಬಿಟ್ಟು ರಾಜಕಾರಣ ಮಾಡೋದಿಲ್ಲ ಎಂದರು.
ಸುಮಲತಾ ನಮ್ಮ ಸ್ವಾಭಿಮಾನದ ಸಂಕೇತ.ಹೆಣ್ಣು ಮಗಳ ಪ್ರತಿನಿಧಿ. ಹೆಣ್ಣು ಮಕ್ಕಳ ಪರವಾಗಿ ಪ್ರಮಾಣಿಕವಾಗಿ ಕೆಲಸ ಮಾಡುತ್ತಾರೆ. ಜೆಡಿಎಸ್ ಸರ್ಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಧಮ್ಕಿ ಹಾಕ್ತಾ ಇದಾರೆ… ಸಾಮಾನ್ಯ ಕಾರ್ಯ ಕರ್ತರನ್ನು ಬಿಡ್ತಾರಾ? 18 ರಂದು ಉತ್ತರ ಕೊಡಿ ಎಂದರು. ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರಾದ ಶೆಟ್ಟಹಳ್ಳಿ ಲಿಂಗರಾಜು, ತ್ಯಾಗರಾಜು, ಪಿ.ಎಂ.ಸೋಮಶೇಖರ್, ಬೇಲೂರು ಸೋಮಶೇಖರ್ ಮತ್ತಿತರರಿದ್ದರು.

Translate »