ಟ್ರಾಕ್ಟರ್ ಜಪ್ತಿ: ಬ್ಯಾಂಕ್ ಅಧಿಕಾರಿಗಳ ವಿರುದ್ಧ ರೈತರ ಪ್ರತಿಭಟನೆ
ಮಂಡ್ಯ

ಟ್ರಾಕ್ಟರ್ ಜಪ್ತಿ: ಬ್ಯಾಂಕ್ ಅಧಿಕಾರಿಗಳ ವಿರುದ್ಧ ರೈತರ ಪ್ರತಿಭಟನೆ

January 8, 2020

ಭಾರತೀನಗರ, ಜ.7(ಅ.ಸತೀಶ್)- ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ರೈತನ ಟ್ರಾಕ್ಟರ್ ಜಪ್ತಿ ಮಾಡಿದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ರೈತರು ಪ್ರತಿಭಟನೆ ನಡೆಸಿ ಅವರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತೊರೆಚಾಕನಹಳ್ಳಿ ಗ್ರಾಮದ ರೈತ ಬಸವೇಗೌಡ ಮದ್ದೂರು ಭೂ ಗ್ರಾಮೀಣಾ ಭಿವೃದ್ಧಿ ಬ್ಯಾಂಕ್ (ಪಿಎಲ್‍ಡಿ ಬ್ಯಾಂಕ್) ನಲ್ಲಿ 7.35 ಲಕ್ಷ ರೂ. ಸಾಲ ಪಡೆದು ಟ್ರಾಕ್ಟರ್ ಖರೀದಿಸಿದ್ದರು. ನಿಯಮಿತವಾಗಿ ಸಾಲ ಮರುಪಾವತಿಸುತ್ತಿದ್ದ ಬಸವೇ ಗೌಡರು ಇತ್ತೀಚೆಗೆ ಮೃತಪಟ್ಟಿದ್ದರು. ಬಳಿಕ ಅವರ ಮಕ್ಕಳು ಸಹ ಸಾಲ ಮರು ಪಾವತಿ ಮಾಡುತ್ತಿದ್ದರು. ಆದರೆ ಕೃಷಿ ಯಲ್ಲಿ ಉಂಟಾದ ನಷ್ಟದಿಂದಾಗಿ ಕೆಲ ತಿಂಗಳಿಂದ ಸಾಲ ಪಾವತಿಸಿರಲಿಲ್ಲ.

ಈ ಹಿನ್ನೆಲೆಯಲ್ಲಿ ಮದ್ದೂರು ಪಿಎಲ್‍ಡಿ ಬ್ಯಾಂಕ್‍ನ ರವಿಶಂಕರ್, ಜಿಲ್ಲಾ ಬ್ಯಾಂಕ್ ವ್ಯವಸ್ಥಾಪಕಿ ಉಷಾ ಸೇರಿದಂತೆ ಇತರೆ ಅಧಿಕಾರಿಗಳು ಏಕಾಏಕಿ ತೊರೆಚಾಕನ ಹಳ್ಳಿ ಬಸವೇಗೌಡರ ನಿವಾಸಕ್ಕೆ ಆಗಮಿಸಿ ಮನೆ ಮುಂದೆ ನಿಲ್ಲಿಸಿದ್ದ ಟ್ರಾಕ್ಟರನ್ನು ಜಪ್ತಿ ಮಾಡಿ ತೆಗೆದುಕೊಂಡು ಹೋಗಲು ಮುಂದಾದರು. ಈ ವೇಳೆ ಬಸವೇಗೌಡರ ಪತ್ನಿ ಸಿದ್ದಮ್ಮ ತಡೆಯಲು ಯತ್ನಿಸಿ ದರಾದರೂ ಸಾಧ್ಯವಾಗಲಿಲ್ಲ.

ಬ್ಯಾಂಕ್ ಅಧಿಕಾರಿಗಳು ಟ್ರಾಕ್ಟರ್ ತೆಗೆದುಕೊಂಡು ಹೋಗುತ್ತಿದ್ದ ಸುದ್ದಿ ತಿಳಿಯುತ್ತಿದ್ದಂತೆ ರೈತ ಮುಖಂಡರಾದ ಅಣ್ಣೂರು ಮಹೇಂದ್ರ, ಕ್ಯಾತಘಟ್ಟದ ತಿಮ್ಮರಾಜು ಅನೇಕರು ಗುರುದೇವರಹಳ್ಳಿ ಬಳಿ ಟ್ರಾಕ್ಟರ್ ಅಡ್ಡಹಾಕಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಕಳೆದ 4 ವರ್ಷಗಳಿಂದ ಸತತ ಬರ ಪರಿಸ್ಥಿತಿ ಇದೆ. ಬೆಳೆ ಬೆಳೆಯಲು ಸಾಧ್ಯ ವಾಗಿಲ್ಲ. ಹೀಗಾಗಿ ರೈತ ಜೀವನ ನಡೆಸು ವುದೇ ದುಸ್ತರವಾಗಿದೆ. ಇಂತಹ ಸಮಯ ದಲ್ಲಿ ಸಾಲ ಮರುಪಾವತಿ ಮಾಡುವುದಾ ದರೂ ಹೇಗೆ ಎಂದು ಮಹೇಂದ್ರ ಪ್ರಶ್ನಿಸಿದರು.

ದೇಶಕ್ಕೆ ದ್ರೋಹವೆಸಗಿ ವಿದೇಶಕ್ಕೆ ಹೋಗಿರುವ ವಿಜಯ್ ಮಲ್ಯರಂತಹ ಉದ್ಯಮಿಗಳಿಂದ ಮೊದಲು ಸಾಲ ವಸೂಲಿ ಮಾಡಿ, ಅದು ಬಿಟ್ಟು ಬಡ ಪಾಯಿ ರೈತರ ಸಾಲ ವಸೂಲಿ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ತರಾಟೆ ತೆಗೆದುಕೊಂಡರು.

ಸರ್ಕಾರವೇ ಸಾಲ ಮತ್ತು ರೈತರ ವಿಚಾರ ದಲ್ಲಿ ಗೊಂದಲದಲ್ಲಿದೆ. ಹಿಂದಿನ ಸರ್ಕಾರ ರೈತರ ಸಾಲ ಮನ್ನಾ ಮಾಡಿರುವುದಾಗಿ ಘೋಷಿಸಿದೆ. ಬೆಳೆಯೂ ಇಲ್ಲದೆ ಕಂಗಾ ಲಾಗಿರುವ ರೈತ ಸಾಲ ಕಟ್ಟುವುದಾದರೂ ಹೇಗೆ ಎಂದು ತಿಮ್ಮರಾಜು ಪ್ರಶ್ನಿಸಿದರು.

ಒಂದು ವೇಳೆ ರೈತರಿಂದ ಸಾಲ ವಸೂಲಿ ಮಾಡಬೇಕೆಂದಾದಲ್ಲಿ ಅವರ ಮನವೊಲಿಸಿ ವಸೂಲಿ ಮಾಡಿ, ಅದು ಬಿಟ್ಟು ಏಕಾಏಕಿ ಟ್ರಾಕ್ಟರ್ ತೆಗೆದುಕೊಂಡು ಹೋಗುವುದು, ಒಡವೆಗಳನ್ನು ಹರಾಜು ಹಾಕುವಂತಹ ಕ್ರಮ ಅನುಸರಿಸುವುದು ಸರಿಯಲ್ಲ ಎಂದರು.

ಸುದ್ಧಿ ತಿಳಿದ ತಕ್ಷಣ ಶಾಸಕ ಡಿ.ಸಿ. ತಮ್ಮಣ್ಣ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮೊದಲೇ ರೈತರು ಕಷ್ಟದಲ್ಲಿದ್ದಾರೆ. ಇಂತಹ ವೇಳೆ ರೈತರಿಗೆ ಕಷ್ಟ ಕೊಡು ವುದು, ದಬ್ಬಾಳಿಕೆ ಮಾಡುವುದು ಸರಿ ಯಲ್ಲ. ಹಣ ವಸೂಲಿ ಮಾಡಬೇಕೆಂದಲ್ಲಿ ರೈತರ ಮನವೊಲಿಸಿ, ಇಲ್ಲವೇ ಕಾನೂನು ಪ್ರಕಾರ ನೊಟೀಸ್ ನೀಡಿ, ಅದು ಬಿಟ್ಟು ರೈತರ ಸಾಲ ಕೊಡಲಿಲ್ಲ ಎಂದು ಟ್ರಾಕ್ಟರ್ ಕೊಂಡೊಯ್ಯುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು. ರೈತರ ಪ್ರತಿ ಭಟನೆಗೆ ಮಣಿದ ಅಧಿಕಾರಿಗಳು ಕೊನೆಗೆ ಟ್ರಾಕ್ಟರ್ ಬಿಟ್ಟು ಕಾರು ಹತ್ತಿ ತೆರಳಿದರು.

ಮುಖಂಡರಾದ ರಮೇಶ್, ಶಿವ ಕುಮಾರ್, ಅಪ್ಪು, ಸಿದ್ದರಾಜು, ಪುಟ್ಟಸ್ವಾಮಿ, ಮಹೇಶ್, ರಾಮಣ್ಣ, ಗ್ರಾಪಂ ಮಾಜಿ ಸದಸ್ಯ ಶಿವಲಿಂಗೇಗೌಡ ಇತರರು ಪ್ರತಿಭಟನೆಯಲ್ಲಿದ್ದರು.

Translate »